ಸಂಪಾಜೆ, ನ.19: ಸಂಪಾಜೆ ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ಮಾಸಿಕ ಸಭೆಯು ಒಕ್ಕೂಟದ ಅಧ್ಯಕ್ಷೆ ದೇವಕಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಅಕ್ಕ ಕೆಫೆ ಸ್ಥಾಪನೆ, ಸ್ವಸಹಾಯ ಸಂಘಗಳ ಸದಸ್ಯರ ನಡುವಿನ ಸಾಮರಸ್ಯ, ಸಾಲ ವಿತರಣೆ ಮತ್ತು ಮರುಪಾವತಿ ನಿಯಮಗಳು, VPRP ಮಾಹಿತಿ ಸಂಗ್ರಹಣೆಯಲ್ಲಿನ ಸಮಸ್ಯೆಗಳು ಹಾಗೂ ಕೃಷಿ ಸಖಿ ಮತ್ತು ಪಶು ಸಖಿಯರ ಗೌರವಧನ ಸೇರಿದಂತೆ ಹಲವು ಪ್ರಮುಖ ವಿಚಾರಗಳ ಕುರಿತು ಚರ್ಚಿಸಲಾಯಿತು.
ಅಕ್ಕ ಕೆಫೆ ಸ್ಥಾಪನೆಗೆ ಸಂಬಂಧಿಸಿದಂತೆ 2026ರ ಡಿಸೆಂಬರ್ ಒಳಗಾಗಿ ಗ್ರಾಮ ಪಂಚಾಯಿತಿಯ ಸ್ವಂತ ನಿಧಿಯಿಂದ ಕಟ್ಟಡದ ಫೌಂಡೇಶನ್ ಹಾಗೂ ಮೇಲ್ಛಾವಣಿ ನಿರ್ಮಿಸಿಕೊಡಲಾಗುವುದು. ಕಟ್ಟಡದ ರೂಪುರೇಷೆಗಳನ್ನು ಪರಿಶೀಲಿಸಿದ ಬಳಿಕ ಸರ್ಕಾರದಿಂದ ಸುಮಾರು 15 ಲಕ್ಷ ರೂ. ಅನುದಾನ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ವಲಯ ಮೇಲ್ವಿಚಾರಕರು ಸಭೆಗೆ ನೀಡಿದರು.
ಸ್ವಸಹಾಯ ಸಂಘಗಳ ಸದಸ್ಯರು ವೈಯಕ್ತಿಕ ಭಿನ್ನಾಭಿಪ್ರಾಯಗಳನ್ನು ಸಂಘದ ಚಟುವಟಿಕೆಗಳ ಮೇಲೆ ಪರಿಣಾಮ ಬೀರಲು ಅವಕಾಶ ನೀಡಬಾರದು. ಮಹಿಳೆಯರ ಆರ್ಥಿಕ ಮತ್ತು ಸಾಮಾಜಿಕ ಪ್ರಗತಿಯೇ ಸಂಘಗಳ ಪ್ರಮುಖ ಉದ್ದೇಶವಾಗಿದ್ದು, ಸದಸ್ಯರು ಜಾತಿ, ಆರ್ಥಿಕ ಸ್ಥಿತಿ ಹಾಗೂ ಶಿಕ್ಷಣದ ಆಧಾರದಲ್ಲಿ ಯಾವುದೇ ಭೇದಭಾವವಿಲ್ಲದೆ ಪರಸ್ಪರ ಸಹಕಾರ ಮತ್ತು ಹೊಂದಾಣಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು.
ಸಂಘಗಳ ಸಾಲ ವಿತರಣೆಯ ಹೊಸ ನಿಯಮಗಳ ಬಗ್ಗೆಯೂ ಚರ್ಚೆ ನಡೆಯಿತು. ಈ ಹಿಂದೆ ಸಂಘಕ್ಕೆ ವಿತರಿಸಿದ 1.50 ಲಕ್ಷ ರೂ. ಸಾಲದಲ್ಲಿ ಶೇ.50ರಷ್ಟು ಮರುಪಾವತಿಯಾದ ಬಳಿಕ ಇತರ ಸದಸ್ಯರಿಗೆ ಸಾಲ ನೀಡಲು ಅವಕಾಶವಿತ್ತು. ಆದರೆ ಹೊಸ ನಿಯಮದಂತೆ ಸಂಪೂರ್ಣ ಸಾಲ ಮರುಪಾವತಿಯಾದ ಬಳಿಕವಷ್ಟೇ ಅದೇ ಸಂಘದ ಇತರ ಸದಸ್ಯರಿಗೆ ಸಾಲ ನೀಡಲು ಸಾಧ್ಯವಾಗಲಿದೆ ಎಂದು ವಲಯ ಮೇಲ್ವಿಚಾರಕರು ಮಾಹಿತಿ ನೀಡಿದರು. ಈ ಬದಲಾವಣೆಯಿಂದ ಸದಸ್ಯರ ತುರ್ತು ಆರ್ಥಿಕ ಅಗತ್ಯಗಳಿಗೆ ಸ್ಪಂದಿಸುವಲ್ಲಿ ಹಾಗೂ ಸಂಘಗಳ ಕಾರ್ಯಚಟುವಟಿಕೆಗಳಲ್ಲಿ ಸಮಸ್ಯೆಯಾಗುವ ಸಾಧ್ಯತೆಯಿದೆ ಎಂಬ ಆತಂಕ ಸಭೆಯಲ್ಲಿ ವ್ಯಕ್ತವಾಯಿತು.
VPRP ಮಾಹಿತಿ ಸಂಗ್ರಹಣೆಯಲ್ಲಿನ ಪ್ರಾಯೋಗಿಕ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯಲಾಯಿತು. ಬಹುತೇಕ ಸ್ವಸಹಾಯ ಸಂಘಗಳ ಸದಸ್ಯರು ಕೂಲಿ ಕೆಲಸ ಸೇರಿದಂತೆ ವಿವಿಧ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಸಂಜೆ ಅಥವಾ ರಜಾ ದಿನಗಳಲ್ಲಿ ಸಭೆಗಳನ್ನು ನಡೆಸುತ್ತಿದ್ದಾರೆ. ಇಂತಹ ಸಂದರ್ಭಗಳಲ್ಲಿ ಒಕ್ಕೂಟದ ಸಿಬ್ಬಂದಿಗೆ ಅಗತ್ಯ ಮಾಹಿತಿ ಸಂಗ್ರಹಿಸುವುದು ಕಷ್ಟವಾಗುತ್ತಿದೆ. ಹೀಗಾಗಿ ಮಾಹಿತಿ ಸಂಗ್ರಹಣೆಗೆ ಪರ್ಯಾಯ ವ್ಯವಸ್ಥೆ ಅಥವಾ ಸೂಕ್ತ ಸಮಯಾವಕಾಶ ಕಲ್ಪಿಸುವಂತೆ ಸಭೆಯಲ್ಲಿ ಮನವಿ ಮಾಡಲಾಯಿತು.
ಕೃಷಿ ಸಖಿ ಮತ್ತು ಪಶು ಸಖಿಯರ ಗೌರವಧನದ ವಿಚಾರವೂ ಸಭೆಯಲ್ಲಿ ಪ್ರಮುಖವಾಗಿ ಚರ್ಚೆಯಾಯಿತು. ಕೃಷಿ ಸಖಿಯರು ಕೃಷಿ ಇಲಾಖೆಯ ವಿವಿಧ ಯೋಜನೆಗಳು ಹಾಗೂ ಮಾಹಿತಿಗಳನ್ನು ರೈತರಿಗೆ ತಲುಪಿಸುವುದರೊಂದಿಗೆ ರೈತರು ಮತ್ತು ಇಲಾಖೆಗಳ ನಡುವೆ ಸಂಪರ್ಕ ಸೇತುವೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರತ್ಯೇಕ ಇಲಾಖಾ ಗೌರವಧನ ಅಥವಾ ಸಹಾಯಧನದ ವ್ಯವಸ್ಥೆ ಇಲ್ಲದಿದ್ದರೂ ಗ್ರಾಮದ ಕೃಷಿಕರಿಗೆ ನಿರಂತರ ಸೇವೆ ಸಲ್ಲಿಸುತ್ತಿದ್ದಾರೆ.
ಪ್ರಸ್ತುತ ಸಂಜೀವಿನಿ ಎನ್ಆರ್ಎಲ್ಎಂ ವತಿಯಿಂದ ಕೃಷಿ ಸಖಿಯರಿಗೆ 15 ದಿನಗಳಿಗೆ 4,500 ರೂ. ಗೌರವಧನ ನೀಡಲಾಗುತ್ತಿದ್ದು, ಅದರ ಪಾವತಿಯಲ್ಲಿಯೂ ವಿಳಂಬವಾಗುತ್ತಿರುವ ಬಗ್ಗೆ ಅಸಮಾಧಾನ ವ್ಯಕ್ತವಾಯಿತು. ಕೃಷಿ ಸಖಿ ಮತ್ತು ಪಶು ಸಖಿಯರ ಸೇವೆಯನ್ನು ಗುರುತಿಸಿ, ಗೌರವಧನದ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟ ನಿರ್ಧಾರ ಕೈಗೊಂಡು ಸೂಕ್ತ ಪರಿಹಾರ ಒದಗಿಸಬೇಕು ಎಂಬ ಒತ್ತಾಯ ಸಭೆಯಲ್ಲಿ ಕೇಳಿಬಂತು.
ಸಭೆಯಲ್ಲಿ ಒಕ್ಕೂಟದ ಸಂಘಟನಾ ಬಲವರ್ಧನೆ, ಸದಸ್ಯರ ಪ್ರಗತಿ ಹಾಗೂ ಮುಂದಿನ ಕಾರ್ಯಯೋಜನೆಗಳ ಬಗ್ಗೆಯೂ ಚರ್ಚಿಸಲಾಯಿತು. ಈ ಸಂದರ್ಭದಲ್ಲಿ ಓರ್ವ ಸದಸ್ಯರಿಗೆ ಸಾಲ ವಿತರಣೆ ಮಾಡಲಾಯಿತು.
ಸಭೆಯಲ್ಲಿ ವಲಯ ಮೇಲ್ವಿಚಾರಕರು, ಒಕ್ಕೂಟದ ಪದಾಧಿಕಾರಿಗಳು, ಎಂ.ಬಿ.ಕೆ., ಎಲ್.ಸಿ.ಆರ್.ಪಿ., ಕೃಷಿ ಸಖಿ, ಪಶು ಸಖಿ ಹಾಗೂ ವಿವಿಧ ಸ್ವಸಹಾಯ ಸಂಘಗಳ ಸದಸ್ಯರು ಉಪಸ್ಥಿತರಿದ್ದರು. ಧನ್ಯವಾದ ಸಮರ್ಪಣೆಯೊಂದಿಗೆ ಸಭೆ ಮುಕ್ತಾಯಗೊಂಡಿತು.
ಸಂಪಾಜೆ ಶ್ರೀ ವಿಷ್ಣು ಸಂಜೀವಿನಿ ಒಕ್ಕೂಟದ ಮಾಸಿಕ ಸಭೆ








































