ಪೆರಾಜೆ ರಸ್ತೆಗಳ ದುಸ್ಥಿತಿಗೆ ಜನಾಕ್ರೋಶ: ಡಿ.1ರಂದು ಪಕ್ಷಾತೀತ ಮೌನ ಪ್ರತಿಭಟನೆ

ಸುಳ್ಯ: ಪೆರಾಜೆ ಗ್ರಾಮದ ಪ್ರಮುಖ ಸಂಪರ್ಕ ರಸ್ತೆಗಳು ಸಂಪೂರ್ಣ ಹದಗೆಟ್ಟು ಜನಸಂಚಾರಕ್ಕೆ ತೀವ್ರ ಅಡಚಣೆಯಾಗಿದ್ದರೂ ಸಂಬಂಧಪಟ್ಟ ಇಲಾಖೆಗಳು ಮತ್ತು ಜನಪ್ರತಿನಿಧಿಗಳು ಸೂಕ್ತ ಕ್ರಮ ಕೈಗೊಳ್ಳದಿರುವುದಕ್ಕೆ ಸ್ಥಳೀಯರಲ್ಲಿ ಅಸಮಾಧಾನ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಗ್ರಾಮದಲ್ಲಿನ ರಸ್ತೆಗಳನ್ನು ತಕ್ಷಣ ಅಭಿವೃದ್ಧಿಪಡಿಸುವಂತೆ ಆಗ್ರಹಿಸಿ ಡಿ.1ರಂದು ಪೆರಾಜೆಯಲ್ಲಿ ಪಕ್ಷಾತೀತ ಮೌನ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಪೆರಾಜೆ ಹಿತರಕ್ಷಣಾ ವೇದಿಕೆಯ ಸಂಚಾಲಕ ಅಶೋಕ ಪೀಚೆ ತಿಳಿಸಿದ್ದಾರೆ.
ನ.28ರಂದು ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಪೆರಾಜೆ ಗ್ರಾಮದ ಕಾಸ್ಪಾಡಿ–ಗಡಿಗುಡ್ಡೆ ರಸ್ತೆ, ದೊಡ್ಡಡ್ಕ–ನೆಡ್ಚಿಲ್–ಕಾಪುಮಲೆ ರಸ್ತೆ, ದೇವಸ್ಥಾನ–ಕಾವೇರಿ ರಸ್ತೆ, ಮೂಲೆಮಜಲು–ಬೆಟ್ಟದಪುರ ರಸ್ತೆ, ಪುತ್ಯ–ಪೆರಾಜೆ, ಕಾಪಿತೋಟ–ವ್ಯಾಪಾರೆ ರಸ್ತೆ, ನಿಡ್ಯಮಲೆ ರಸ್ತೆ, ಬಾಳೆಕಜೆ ಹಾಗೂ ಕುಂದಲ್ಪಾಡಿ ರಸ್ತೆಗಳು ತೀವ್ರ ಹದಗೆಟ್ಟಿವೆ. ಡಾಂಬರು ಕಿತ್ತುಹೋಗಿ ಸಂಚಾರ ದುಸ್ತರವಾಗಿದ್ದು, ಈ ರಸ್ತೆಗಳ ಮೂಲಕ ಪ್ರಯಾಣಿಸುವುದು ವಾಹನ ಸವಾರರು ಹಾಗೂ ಸಾರ್ವಜನಿಕರಿಗೆ ನರಕಯಾತನೆಯಾಗಿ ಪರಿಣಮಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗ್ರಾಮದ ಜನರ ದೈನಂದಿನ ಬದುಕು, ವಿದ್ಯಾರ್ಥಿಗಳ ಪ್ರಯಾಣ, ಕೃಷಿ ಚಟುವಟಿಕೆಗಳು ಹಾಗೂ ತುರ್ತು ಸೇವೆಗಳಿಗೂ ರಸ್ತೆಗಳ ದುಸ್ಥಿತಿ ಅಡ್ಡಿಯಾಗುತ್ತಿದೆ. ಹಲವು ಬಾರಿ ಸಮಸ್ಯೆ ಗಮನಕ್ಕೆ ತಂದಿದ್ದರೂ ನಿರೀಕ್ಷಿತ ಸ್ಪಂದನೆ ದೊರೆತಿಲ್ಲ. ಹೀಗಾಗಿ ಜನರ ನ್ಯಾಯಯುತ ಬೇಡಿಕೆಗೆ ಒಗ್ಗಟ್ಟಿನ ಧ್ವನಿ ನೀಡುವ ಉದ್ದೇಶದಿಂದ ಯಾವುದೇ ರಾಜಕೀಯ ಪಕ್ಷದ ಪರ ಅಥವಾ ವಿರೋಧವಿಲ್ಲದೆ ಪ್ರತಿಭಟನೆ ಆಯೋಜಿಸಲಾಗಿದೆ ಎಂದರು.
ಡಿ.1ರಂದು ನಡೆಯಲಿರುವ ಮೌನ ಪ್ರತಿಭಟನೆಯಲ್ಲಿ ಗ್ರಾಮದ ಸರ್ವ ಸಂಘಸಂಸ್ಥೆಗಳು, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ರಸ್ತೆ ಬಳಕೆದಾರರು ಹಾಗೂ ಸಾರ್ವಜನಿಕರು ಪಕ್ಷಭೇದ ಮರೆತು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ಅವರು ಮನವಿ ಮಾಡಿದರು.
*ಒಂದು ತಿಂಗಳ ಗಡುವು: ತಪ್ಪಿದರೆ ಉಗ್ರ ಹೋರಾಟ*











































































ಪ್ರತಿಭಟನೆ ನಡೆಸಿ ಕೇವಲ ಆಕ್ರೋಶ ವ್ಯಕ್ತಪಡಿಸುವುದಷ್ಟೇ ವೇದಿಕೆಯ ಉದ್ದೇಶವಲ್ಲ. ರಸ್ತೆ ಅಭಿವೃದ್ಧಿಗೆ ಸಂಬಂಧಿಸಿದಂತೆ ಆಡಳಿತ ವ್ಯವಸ್ಥೆ ತಕ್ಷಣ ಸ್ಪಷ್ಟ ಕ್ರಮ ಕೈಗೊಳ್ಳಬೇಕು. ಪ್ರತಿಭಟನೆಯ ಬಳಿಕ ಒಂದು ತಿಂಗಳೊಳಗೆ ಹದಗೆಟ್ಟಿರುವ ರಸ್ತೆಗಳ ಅಭಿವೃದ್ಧಿ ಕಾರ್ಯ ಆರಂಭಿಸಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಅಶೋಕ ಪೀಚೆ ಎಚ್ಚರಿಕೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಪೆರಾಜೆ ಹಿತರಕ್ಷಣಾ ವೇದಿಕೆಯ ಗೌರವಾಧ್ಯಕ್ಷ ರಾಮಕೃಷ್ಣ ಮಣಿಲತ್ತಾಯ ಕಜೆ, ಪದಾಧಿಕಾರಿಗಳಾದ ಹೂವಪ್ಪ ಏಣಿಯಾರು, ಗಣೇಶ ಶ್ಯಾಮ್, ಪ್ರಸಾದ್ ನಡುಬೈಲು ಹಾಗೂ ಸಾಮಾಜಿಕ ನ್ಯಾಯ ಸಮಿತಿಯ ಮುಖಂಡ ಶರತ್  ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top