ಅಜ್ಜಾವರ, ಆ.30: ಅಜ್ಜಾವರ ದೇವರಕಳಿಯ ಚೈತನ್ಯ ಸೇವಾಶ್ರಮದಲ್ಲಿ ಆಗಸ್ಟ್ 2ರಂದು ಆರಂಭಗೊಂಡು ಐದು ವಾರಗಳ ಕಾಲ ನಡೆದ ವೇದ ಪಾರಾಯಣ ಮತ್ತು ಉಪನಿಷತ್ತುಗಳ ಉಚಿತ ತರಗತಿ ಆ.30ರಂದು ಯಶಸ್ವಿಯಾಗಿ ಸಂಪನ್ನಗೊಂಡಿತು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಆಶ್ರಮದ ಸ್ವಾಮಿ ಶ್ರೀ ಯೋಗೇಶ್ವರಾನಂದ ಸರಸ್ವತಿ ಅವರು, ತಾವು ಕಲಿತ ವೇದ ಪಾರಾಯಣ ಹಾಗೂ ಉಪನಿಷತ್ತುಗಳ ಮೂಲಭೂತ ವಿಚಾರಗಳನ್ನು ಆಧ್ಯಾತ್ಮಿಕ ಆಸಕ್ತರಿಗೆ ತಿಳಿಸಿಕೊಡುವ ಉದ್ದೇಶದಿಂದ ಈ ತರಗತಿಯನ್ನು ಆಯೋಜಿಸಲಾಗಿತ್ತು. ಕಲಿತ ಜ್ಞಾನವನ್ನು ನಿತ್ಯ ಪಠಣ ಮತ್ತು ಅಭ್ಯಾಸದ ಮೂಲಕ ಮುಂದುವರಿಸಬೇಕು ಎಂದು ಹೇಳಿದರು.
ತರಗತಿಯಲ್ಲಿ ಭಾಗವಹಿಸಿದ್ದ ನಿವೃತ್ತ ಎ.ಎಸ್.ಐ. ಕುಶಾಲಪ್ಪಗೌಡ ಮಾತನಾಡಿ, ಸ್ವಾಮೀಜಿಯವರು ವೇದ ಪಾರಾಯಣ ಮತ್ತು ಉಪನಿಷತ್ತುಗಳ ತರಗತಿಯನ್ನು ಉಚಿತವಾಗಿ ನಡೆಸಿಕೊಟ್ಟಿರುವುದು ನಮಗೆ ಬಹಳ ಪ್ರಯೋಜನವಾಗಿದೆ. ಅವರ ನಿಸ್ವಾರ್ಥ ಸೇವೆಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.
ಪ್ರಣವಿ ಮಾತನಾಡಿ, ತಾವು ಕಲಿತ ವಿದ್ಯೆಯನ್ನು ಇತರರಿಗೆ ಕಲಿಸಿಕೊಟ್ಟಾಗ ಬದುಕು ಸಾರ್ಥಕವಾಗುತ್ತದೆ. ಸ್ವಾಮೀಜಿಯವರು ಆ ಕಾರ್ಯವನ್ನು ಮಾಡಿರುವುದು ಶ್ಲಾಘನೀಯ ಎಂದರು.
ವೇಣುಗೋಪಾಲ ಪಾಂಡಿಯವರು ಮಾತನಾಡಿ, ತಾವು ಕಲಿತ ಜ್ಞಾನವನ್ನು ಇತರರಿಗೆ ಹಂಚಿಕೊಳ್ಳುವ ಮೂಲಕ ಸ್ವಾಮೀಜಿಯವರು ಶ್ರೇಷ್ಠ ಕಾರ್ಯ ಮಾಡುತ್ತಿದ್ದಾರೆ. ಅವರ ಸ್ವಾರ್ಥರಹಿತ ಸಾಮಾಜಿಕ ಚಿಂತನೆ ಹಾಗೂ ದಾನ-ಧರ್ಮದ ಕಾರ್ಯಗಳು ಇನ್ನಷ್ಟು ವರ್ಷಗಳ ಕಾಲ ಮುಂದುವರಿಯಲಿ ಎಂದು ಆಶಿಸಿದರು.
ಜಪ, ಧ್ಯಾನ ಮತ್ತು ಪ್ರಾಣಾಯಾಮದ ಅಭ್ಯಾಸಕ್ಕಾಗಿ ಜಾತಿ, ಮತ, ಲಿಂಗ ಭೇದವಿಲ್ಲದೆ ವಿವಿಧ ವಯೋಮಾನದವರು ತರಗತಿಯಲ್ಲಿ ಭಾಗವಹಿಸಿದ್ದರು. ತರಗತಿ ನಡೆದ ಪ್ರತಿದಿನವೂ ಅನ್ನದಾನ ವ್ಯವಸ್ಥೆ ಮಾಡಲಾಗಿತ್ತು.
ಈ ಸಂದರ್ಭದಲ್ಲಿ ಉದಯ ಅಡೂರು, ಭವಿತ್ ಸೇರಿದಂತೆ ಮಕ್ಕಳು ಹಾಗೂ ತರಗತಿಯ ಭಾಗವಹಿಸುವವರು ಉಪಸ್ಥಿತರಿದ್ದರು.
ಅಜ್ಜಾವರ ಚೈತನ್ಯ ಸೇವಾಶ್ರಮದಲ್ಲಿ ನಡೆದ ವೇದ ಪಾರಾಯಣ, ಉಪನಿಷತ್ ತರಗತಿ ಸಂಪನ್ನ



















