ಬೆಳ್ಳಾರೆ: ವಿದ್ಯಾರ್ಥಿನಿಯರ ಸರ್ಕಾರಿ ವಿದ್ಯಾರ್ಥಿನಿಲಯದ ಆವರಣಕ್ಕೆ ಮುಂಜಾನೆ ವೇಳೆ ಅಕ್ರಮವಾಗಿ ನುಗ್ಗಿ, ವಿದ್ಯಾರ್ಥಿನಿಯರು ಒಣಗಲು ಹಾಕಿದ್ದ ಬಟ್ಟೆಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಬೆಳ್ಳಾರೆ ಠಾಣಾ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಾಮಚಂದ್ರ ಕೊಳ್ತಿಗೆ ಎಂದು ಗುರುತಿಸಲಾಗಿದೆ.
ವಿದ್ಯಾರ್ಥಿನಿಯರು ಹಿಂದಿನ ದಿನ ಒಣಗಲು ಹಾಕಿದ್ದ ಬಟ್ಟೆಗಳು ಕಾಣೆಯಾಗಿರುವುದನ್ನು ಗಮನಿಸಿ ಹಾಸ್ಟೆಲ್ ಮೇಲ್ವಿಚಾರಕಿಯ ಗಮನಕ್ಕೆ ತಂದಿದ್ದರು. ಈ ಹಿನ್ನೆಲೆಯಲ್ಲಿ ಮೇಲ್ವಿಚಾರಕಿ ಹಾಸ್ಟೆಲ್ ಆವರಣದಲ್ಲಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮುಂಜಾನೆ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆವರಣಕ್ಕೆ ಅಕ್ರಮವಾಗಿ ಪ್ರವೇಶಿಸಿ, ಒಣಗಲು ಹಾಕಿದ್ದ ಬಟ್ಟೆಗಳನ್ನು ಕೊಂಡೊಯ್ಯುತ್ತಿರುವ ದೃಶ್ಯ ಸೆರೆಯಾಗಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಹಾಸ್ಟೆಲ್ ಮೇಲ್ವಿಚಾರಕಿ ನೀಡಿದ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದರು. ಸಿಸಿಟಿವಿ ದೃಶ್ಯಾವಳಿಗಳು ಹಾಗೂ ಲಭ್ಯ ಮಾಹಿತಿಯ ಆಧಾರದಲ್ಲಿ ತನಿಖೆ ಮುಂದುವರಿಸಿದ ಪೊಲೀಸರು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.
ಕತ್ತಲಲ್ಲಿ ಕದ್ದುಮುಚ್ಚಿ ಹಾಸ್ಟೆಲ್ ಪ್ರವೇಶಿಸಿದ್ದ ವ್ಯಕ್ತಿಯ ಚಲನವಲನಗಳನ್ನು ಸಿಸಿಟಿವಿ ಕ್ಯಾಮೆರಾ ಸೆರೆಹಿಡಿದಿದ್ದು, ಇದೇ ದೃಶ್ಯಗಳು ಪೊಲೀಸರಿಗೆ ಆರೋಪಿಯನ್ನು ಪತ್ತೆಹಚ್ಚಲು ಪ್ರಮುಖ ಸುಳಿವಾಗಿವೆ.
ವಿದ್ಯಾರ್ಥಿನಿಯರ ಹಾಸ್ಟೆಲ್‌ಗೆ ವಿಕೃತ ಕಳ್ಳನ ಕದ್ದುಮುಚ್ಚಿ ಎಂಟ್ರಿ; ಬಟ್ಟೆ ಕದ್ದವ ಸಿಸಿಟಿವಿ ಬಲೆಗೆ!




















