ಮಂಗಳೂರು: ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅಡಿಕೆ ಹಾಗೂ ಕೊಕ್ಕೋ ಬೆಳೆಗಾರರ ಹಿತಕ್ಕಾಗಿ ಕಾರ್ಯನಿರ್ವಹಿಸುತ್ತಿರುವ ದಿ ಸೆಂಟ್ರಲ್ ಅರೆಕಾನಟ್ ಅಂಡ್ ಕೊಕ್ಕೊ ಮಾರ್ಕೆಟಿಂಗ್ ಅಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೋ) ಸಂಸ್ಥೆಯ 52ನೇ ವಾರ್ಷಿಕ ಮಹಾಸಭೆ ಮಂಗಳೂರಿನ ಅಡ್ಯಾರ್ ಗಾರ್ಡನ್ ಸಭಾಂಗಣದಲ್ಲಿ ನಡೆಯಿತು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿವಿಧ ಭಾಗಗಳ ಸದಸ್ಯರು ಹಾಗೂ ಅಡಿಕೆ ಬೆಳೆಗಾರರು ಭಾಗವಹಿಸಿದ್ದರು.
ಸಭೆಯಲ್ಲಿ ಭಾಗವಹಿಸಿದ ಪೆರಾಜೆ ಗ್ರಾಮದ ಕೆ.ಸಿ. ಹರೀಶ್ ಪೆರಾಜೆ ಅವರು ಸುಳ್ಯ ಹಾಗೂ ಸಂಪಾಜೆ ವಲಯದ ಅಡಿಕೆ ಬೆಳೆಗಾರರ ಸಮಸ್ಯೆಗಳ ಕುರಿತು ಗಮನ ಸೆಳೆದರು. ಪೆರಾಜೆ, ಅರಂತೋಡು, ಗೂನಡ್ಕ, ಆಲೆಟ್ಟಿ, ಮಡಪ್ಪಾಡಿ, ಸಂಪಾಜೆ, ಚೆಂಬು, ಮರ್ಕಂಜ, ತೊಡಿಕಾನ ಸೇರಿದಂತೆ ಹಲವು ಗ್ರಾಮಗಳ ಅಡಿಕೆ ತೋಟಗಳು ಹಳದಿ ಎಲೆ ರೋಗದಿಂದ ಸಂಪೂರ್ಣವಾಗಿ ನಾಶವಾಗಿದ್ದು, ರೈತರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಅವರು ಸಭೆಯ ಗಮನಕ್ಕೆ ತಂದರು.
ಕ್ಯಾಂಪ್ಕೋ ಸಂಸ್ಥೆಯ ಸದಸ್ಯರು ವರ್ಷದಲ್ಲಿ ಕನಿಷ್ಠ ಒಂದು ಕ್ವಿಂಟಾಲ್ ಅಡಿಕೆಯನ್ನು ಸಂಸ್ಥೆಯ ಮಾರಾಟ ಕೇಂದ್ರದಲ್ಲಿ ಮಾರಾಟ ಮಾಡಿದಲ್ಲಿ, ಆರೋಗ್ಯ ಸಮಸ್ಯೆ ಎದುರಾದ ಸಂದರ್ಭದಲ್ಲಿ ತೆರೆದ ಹೃದಯ ಶಸ್ತ್ರಚಿಕಿತ್ಸೆ, ಡಯಾಲಿಸಿಸ್, ಮೂತ್ರಪಿಂಡ ಕಸಿ ಸೇರಿದಂತೆ ವಿವಿಧ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕ್ಯಾಂಪ್ಕೋ ಆರೋಗ್ಯ ನಿಧಿಯಿಂದ ಆರ್ಥಿಕ ನೆರವು ದೊರೆಯುತ್ತಿದೆ. ಆದರೆ ಹಳದಿ ಎಲೆ ರೋಗದಿಂದ ಅಡಿಕೆ ತೋಟಗಳೇ ನಾಶವಾಗಿರುವ ಸುಳ್ಯ ಹಾಗೂ ಸಂಪಾಜೆ ವಲಯದ ಅನೇಕ ರೈತರಿಗೆ ಅಡಿಕೆ ಮಾರಾಟದ ಅರ್ಹತೆ ಇಲ್ಲದ ಕಾರಣ ಈ ಸೌಲಭ್ಯದಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಕೆ.ಸಿ. ಹರೀಶ್ ಪೆರಾಜೆ ತಿಳಿಸಿದರು.
ಅಡಿಕೆ ಬೆಳೆ ನಷ್ಟದ ಬಳಿಕ ಈ ಭಾಗದ ರೈತರು ರಬ್ಬರ್, ಕರಿಮೆಣಸು, ಕೊಕ್ಕೋ ಸೇರಿದಂತೆ ಪರ್ಯಾಯ ಬೆಳೆಗಳತ್ತ ಮುಖ ಮಾಡುತ್ತಿದ್ದಾರೆ. ಹೀಗಿರುವಾಗ ಕ್ಯಾಂಪ್ಕೋ ಖರೀದಿಸುವ ಇತರ ಬೆಳೆಗಳನ್ನು ಸಹ ಆರೋಗ್ಯ ನಿಧಿ ಅಥವಾ ವಿಶೇಷ ಆರ್ಥಿಕ ನೆರವಿನ ಯೋಜನೆಯ ವ್ಯಾಪ್ತಿಗೆ ತರಬೇಕು. ಹಲವು ವರ್ಷಗಳಿಂದ ಕ್ಯಾಂಪ್ಕೋ ಸಂಸ್ಥೆಯೊಂದಿಗೆ ಒಡನಾಡಿಗಳಾಗಿ, ಅಜೀವ ಸದಸ್ಯರಾಗಿ ಸಂಸ್ಥೆಯ ಬೆಳವಣಿಗೆಗೆ ಶ್ರಮಿಸಿರುವ ಈ ಭಾಗದ ರೈತರು ಸಂಕಷ್ಟದಲ್ಲಿರುವುದನ್ನು ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ಮನವಿ ಮಾಡಿದರು.
ಕೆ.ಸಿ. ಹರೀಶ್ ಪೆರಾಜೆ ಅವರ ಸಲಹೆಯನ್ನು ಸ್ವೀಕರಿಸಿದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರು, ಮುಂದಿನ ದಿನಗಳಲ್ಲಿ ಈ ವಿಚಾರವನ್ನು ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಕ್ಯಾಂಪ್ಕೋ ಆರೋಗ್ಯ ನಿಧಿಗೆ ಪರ್ಯಾಯ ಬೆಳೆಗಾರರನ್ನೂ ಸೇರ್ಪಡೆಗೊಳಿಸಲು ಕೆ.ಸಿ. ಹರೀಶ್ ಪೆರಾಜೆ ಒತ್ತಾಯ

























