ಜನಪ್ರತಿನಿಧಿ–ಅಧಿಕಾರಿಗಳ ಹೊಂದಾಣಿಕೆಯಿಂದ ಗ್ರಾಮಗಳ ಅಭಿವೃದ್ಧಿ ಸಾಧ್ಯ ಶಾಸಕಿ ಭಾಗೀರಥಿ ಮುರುಳ್ಯ

ಅರಂತೋಡು, ಸೆ. 18: ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ನಡುವೆ ಉತ್ತಮ ಹೊಂದಾಣಿಕೆ ಇದ್ದಾಗ ಗ್ರಾಮವು ಸಮಗ್ರವಾಗಿ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ಸುಳ್ಯ ಶಾಸಕಿ ಕು. ಭಾಗೀರಥಿ ಮುರುಳ್ಯ ಹೇಳಿದರು.
ಅರಂತೋಡು ಗ್ರಾಮ ಪಂಚಾಯತ್‌ನಲ್ಲಿ ಕಳೆದ 9 ವರ್ಷಗಳಿಂದ ಜನಸ್ನೇಹಿ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಪಿಡಿಒ ಜಯಪ್ರಕಾಶ್ ಅವರ ಬೀಳ್ಕೊಡುಗೆ ಸಮಾರಂಭ, ನೂತನವಾಗಿ ಆಗಮಿಸಿರುವ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಸ್ವಾಗತ ಹಾಗೂ ಘನತ್ಯಾಜ್ಯ ಘಟಕದ ಸ್ಥಳಾಂತರ ಕಾರ್ಯಕ್ರಮದಲ್ಲಿ ನೂತನವಾಗಿ ಸ್ಥಳಾಂತರಿಸಲಾದ ಘನತ್ಯಾಜ್ಯ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಅರಂತೋಡು ಗ್ರಾಮ ಪಂಚಾಯತ್‌ನಲ್ಲಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ನಡುವೆ ಉತ್ತಮ ಹೊಂದಾಣಿಕೆ ಇದ್ದ ಕಾರಣ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ನಡೆದಿವೆ ಎಂದು ಶಾಸಕಿ ಮೆಚ್ಚುಗೆ ವ್ಯಕ್ತಪಡಿಸಿದರು. ಗ್ರಾಮ ಪಂಚಾಯತ್‌ನ ಅಭಿವೃದ್ಧಿಗೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವುದು ಅತ್ಯಂತ ಅಗತ್ಯ ಎಂದು ಅವರು ಹೇಳಿದರು.
ಕಳೆದ ಹಲವು ವರ್ಷಗಳಿಂದ ಪಂಚಾಯತ್‌ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ವಿಶೇಷ ಒತ್ತು ನೀಡಿ, ಜನಸ್ನೇಹಿ ಆಡಳಿತದ ಮೂಲಕ ಅರಂತೋಡು ಗ್ರಾಮ ಪಂಚಾಯತ್‌ಗೆ ಉತ್ತಮ ಹೆಸರು ತಂದುಕೊಟ್ಟ ಪಿಡಿಒ ಜಯಪ್ರಕಾಶ್ ಅವರ ಸೇವೆಯನ್ನು ಕಾರ್ಯಕ್ರಮದಲ್ಲಿ ಗುರುತಿಸಿ ಗೌರವಿಸಲಾಯಿತು. ಇದೇ ಸಂದರ್ಭದಲ್ಲಿ ನೂತನವಾಗಿ ಆಗಮಿಸಿರುವ ಪಿಡಿಒ ಅವರನ್ನು ಸ್ವಾಗತಿಸಲಾಯಿತು.
ಕಾರ್ಯಕ್ರಮದಲ್ಲಿ ಸುಳ್ಯ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ರಾಜಣ್ಣ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಕೇಶವ ಅಡ್ತಲೆ, ಪಿಡಿಒ ಜಯಪ್ರಕಾಶ್, ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್, ಕೆಡಿಪಿ ಸದಸ್ಯ ಅಶ್ರಫ್ ಗುಂಡಿ, ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷೆ ಪುಷ್ಪ ಮೆದಪ್ಪ, ಕೆ.ಆರ್. ಗಂಗಾಧರ, ಕಿಶೋರ್ ಮಾಸ್ಟರ್ ಅರಂತೋಡು, ದಯಾನಂದ ಕುರುಂಜಿ, ರವಿ ಪೂಜಾರಿ ಪಂಜಿಕೋಡಿ, ಇಂಜಿನಿಯರ್ ಮಣಿಕಂಠ, ಪಂಚಾಯತ್ ಮಾಜಿ ಸದಸ್ಯರಾದ ಶಿವಾನಂದ ಕುಕ್ಕುಂಬಳ, ತಿಮ್ಮಯ್ಯ ಮೆತಡ್ಕ, ಆನಂದ ಕಲ್ಲುಗದ್ದೆ, ರವಿ ಪೂಜಾರಿ, ಪುಷ್ಪಾದರ, ಮಾಲಿನಿ ಭಾರತಿ ಉಳುವಾರು, ತೀರ್ಥರಾಮ ಅಡ್ಕಬಳೆ, ಗುತ್ತಿಗೆದಾರ ಚರಣ್ ಸೇರಿದಂತೆ ಪಂಚಾಯತ್ ಸಿಬ್ಬಂದಿ, ಆಶಾ ಕಾರ್ಯಕರ್ತೆಯರು ಹಾಗೂ ನಾಗರಿಕರು ಉಪಸ್ಥಿತರಿದ್ದರು.
ಘನತ್ಯಾಜ್ಯ ನಿರ್ವಹಣೆಗೆ ಆದ್ಯತೆ:
ಘನತ್ಯಾಜ್ಯ ನಿರ್ವಹಣೆಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ಸ್ವಚ್ಛ ಹಾಗೂ ಸುಸ್ಥಿರ ಗ್ರಾಮ ನಿರ್ಮಾಣದ ನಿಟ್ಟಿನಲ್ಲಿ ಅರಂತೋಡು ಗ್ರಾಮ ಪಂಚಾಯತ್ ಕೈಗೊಂಡಿರುವ ಕ್ರಮಕ್ಕೆ ನೂತನ ಘನತ್ಯಾಜ್ಯ ಘಟಕ ಸಾಕ್ಷಿಯಾಗಿದೆ.











































Leave a Comment

Your email address will not be published. Required fields are marked *

error: Content is protected !!
Scroll to Top