ಸುಳ್ಯ: ಭಾರತೀಯ ಪ್ರಾಣಿಶಾಸ್ತ್ರ ಸಮೀಕ್ಷಾ ಇಲಾಖೆ (Zoological Survey of India) ವತಿಯಿಂದ ಪಶ್ಚಿಮ ಘಟ್ಟ ಪ್ರದೇಶದ ಜೀವವೈವಿಧ್ಯ ಅಧ್ಯಯನದ ಅಂಗವಾಗಿ ಪತಂಗ ಮತ್ತು ಜೀರುಂಡೆ ಕೀಟಗಳ ಸಮೀಕ್ಷೆ ನಡೆಸಲಾಯಿತು.
ಇಲಾಖೆಯ ಕೀಟಶಾಸ್ತ್ರಜ್ಞೆ ಡಾ. ಅಪರ್ಣಾ ಕಲಾವಾಟೆ ನೇತೃತ್ವದ ತಂಡ ದಕ್ಷಿಣ ಕನ್ನಡ ಜಿಲ್ಲೆಯ ಪ್ರಗತಿಪರ ರೈತರ ತೋಟಗಳಿಗೆ ಭೇಟಿ ನೀಡಿತು. ತಂಡದಲ್ಲಿ ಕಿರಿಯ ಸಹಾಯಕ ಕೀಟಶಾಸ್ತ್ರಜ್ಞ ಗಜಾನನ್ ಇದ್ದರು.
ಈ ಸಂದರ್ಭದಲ್ಲಿ ಕೃಷಿ ವಿಜ್ಞಾನ ಕೇಂದ್ರದ ವಿಜ್ಞಾನಿ ಡಾ. ಕೇದಾರನಾಥ್, ಸಂಜೀವಿನಿ NRLMನ TPM ಶ್ವೇತಾ, ಹಾಗೂ ಸಂಪಾಜೆ ಗ್ರಾಮದ ಕೃಷಿ ಸಖಿ ಮೋಹಿನಿ ವಿಶ್ವನಾಥ್ ನಿಶಾ ಅವರ ಜೊತೆಗೆ ಕೃಷಿಕರ ಮಾಹಿತಿ ಪಡೆದುಕೊಂಡರು. ನಂತರ
ತಂಡವು ನೆಲ್ಲೂರು-ಕೆಮ್ರಾಜೆ ಗ್ರಾಮದ ಪ್ರಗತಿಪರ ರೈತ ವಿನೋದ್ ಮೂಡಗದ್ದೆ, ದೇವಚಳ್ಳ ಗ್ರಾಮದ ಎಲಿಮಲೆ ಬಟ್ಟಕಜೆಯ ರಾಜೇಶ್ ಹಾಗೂ ಬೆಳ್ತಂಗಡಿ ತಾಲೂಕಿನ ಉಜಿರೆ ಗ್ರಾಮದ ಅಶೋಕ್ ಅವರ ತೋಟಗಳಿಗೆ ಭೇಟಿ ನೀಡಿ, ಸಂಜೆ ವೇಳೆ ಲೈಟ್ ಟ್ರಾಪ್ ಗಳನ್ನು ಅಳವಡಿಸಿ ಕೀಟಗಳನ್ನು ಸಂಗ್ರಹಿಸಿ ಅಧ್ಯಯನ ನಡೆಸಿತು.
ಪಶ್ಚಿಮ ಘಟ್ಟದಲ್ಲಿ ಕಂಡುಬರುವ ಪತಂಗ ಮತ್ತು ಜೀರುಂಡೆಗಳನ್ನು ಪತ್ತೆಹಚ್ಚಿ ವರ್ಗೀಕರಿಸಿ, ಅವುಗಳಿಂದ ಕೃಷಿಗೆ ಆಗುವ ತೊಂದರೆಗಳ ಬಗ್ಗೆ ರೈತರಿಗೆ ಮಾಹಿತಿ ನೀಡಲಾಯಿತು.
ಡಾ. ಅಪರ್ಣಾ ಕಲಾವಾಟೆ ಅವರು ಪ್ರಸ್ತುತ ಕರ್ನಾಟಕದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಪತಂಗಗಳ ಕುರಿತು ಸಮೀಕ್ಷೆ ನಡೆಸುತ್ತಿದ್ದಾರೆ. ಸಾಮಾನ್ಯವಾಗಿ 20 ಮಿ.ಮೀ. ಗಿಂತ ಕಡಿಮೆ ರೆಕ್ಕೆ ಅಗಲ ಹೊಂದಿರುವ ಸಣ್ಣ ಪತಂಗಗಳನ್ನು ಮೈಕ್ರೋಮಾತ್ ಎಂದು ಕರೆಯಲಾಗುತ್ತದೆ. ಇವುಗಳಲ್ಲಿ ಕೆಲವು ಬೆಳೆಗಳಿಗೆ ಹಾನಿ ಮಾಡಿದರೆ, ಇನ್ನು ಕೆಲವು ಪರಾಗಸ್ಪರ್ಶಕ್ಕೆ ಸಹಕಾರಿಯಾಗಿದ್ದು ಪರಿಸರ ಸೂಚಕಗಳಾಗಿ ಕಾರ್ಯನಿರ್ವಹಿಸುತ್ತವೆ.
ಭಾರತದಲ್ಲಿ ಮೈಕ್ರೋಮಾತ್ ಗಳ ಕುರಿತು ಸಂಶೋಧನೆ ಬಹಳ ಕಡಿಮೆ ನಡೆದಿದ್ದು, ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶಿ ವಿಜ್ಞಾನಿಗಳು ಅಧ್ಯಯನ ನಡೆಸಿದ್ದರು. ಸದ್ಯ ಡಾ. ಅಪರ್ಣಾ ತಂಡವು ಹೊಸ ತಳಿಗಳ ಪತ್ತೆ ಮತ್ತು ಜೀವವೈವಿಧ್ಯ ಸಂರಕ್ಷಣೆಯ ದೃಷ್ಟಿಯಿಂದ ಈ ಯೋಜನೆ ಕೈಗೊಂಡಿದ್ದು, ವಿವಿಧ ಸ್ಥಳಗಳಲ್ಲಿ ಕೀಟಗಳನ್ನು ವೀಕ್ಷಿಸಿ ಛಾಯಾಚಿತ್ರ ತೆಗೆದು ಪ್ರಯೋಗಾಲಯ ಅಧ್ಯಯನಕ್ಕಾಗಿ ಮಾದರಿಗಳನ್ನು ಸಂಗ್ರಹಿಸಿದೆ. ಈ ಅಧ್ಯಯನವು ಕರ್ನಾಟಕದ ಜೀವವೈವಿಧ್ಯ ದಾಖಲಾತಿಗೆ ಅಮೂಲ್ಯ ಮಾಹಿತಿ ನೀಡಲಿದೆ.

























