ಎನ್ ಎಸ್ ಎಸ್ ಶಿಬಿರದ ಅನುಭವ ಬದುಕಿನ ಯಶಸ್ಸಿಗೆ ಮೆಟ್ಟಿಲಾಗಲಿ- ಕೆ.ಆರ್.ಗಂಗಾಧರ್

ತೊಡಿಕಾನ: ಎನ್‌ಎಸ್‌ಎಸ್ ಶಿಬಿರಗಳು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿವೆ. ಶಿಬಿರದಲ್ಲಿ ಪಡೆದ ಅನುಭವಗಳನ್ನು ಭವಿಷ್ಯದ ಬದುಕಿನಲ್ಲಿ ಅಳವಡಿಸಿಕೊಂಡು ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಬೇಕು ಎಂದು ರಾಷ್ಟ್ರ ಶಿಕ್ಷಕ ಪ್ರಶಸ್ತಿ ಪುರಸ್ಕೃತ, ನಿವೃತ್ತ ಪ್ರಾಂಶುಪಾಲ ಕೆ.ಆರ್. ಗಂಗಾಧರ್ ಹೇಳಿದರು.

















ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ (ಪದವಿಪೂರ್ವ), ರಾಷ್ಟ್ರೀಯ ಸೇವಾ ಯೋಜನೆ ಘಟಕ ಹಾಗೂ ನೆಹರು ಸ್ಮಾರಕ ಪದವಿಪೂರ್ವ ಕಾಲೇಜಿನ ಆಶ್ರಯದಲ್ಲಿ ತೊಡಿಕಾನ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ 18ನೇ ವರ್ಷದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಏಳು ದಿನಗಳ ಶಿಬಿರ ಯಶಸ್ವಿಯಾಗಿ ನಡೆದಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಅವರು, ಶಿಬಿರದ ಅನುಭವಗಳು ವಿದ್ಯಾರ್ಥಿಗಳ ಮುಂದಿನ ಬದುಕಿಗೆ ಮಾರ್ಗದರ್ಶನವಾಗಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪಾಪ್ಯುಲರ್ ಎಜುಕೇಶನ್ ಸೊಸೈಟಿ ಅಧ್ಯಕ್ಷ ಪಿ.ಬಿ. ದಿವಾಕರ್ ರೈ ಮಾತನಾಡಿ, ವಿದ್ಯಾರ್ಥಿಗಳು ಶಿಬಿರದಲ್ಲಿ ಪಡೆದ ಅನುಭವಗಳನ್ನು ಶ್ರದ್ಧೆ ಮತ್ತು ಬದ್ಧತೆಯಿಂದ ಜೀವನದಲ್ಲಿ ಅಳವಡಿಸಿಕೊಂಡು ಅನುಷ್ಠಾನಕ್ಕೆ ತಂದಾಗ ಮಾತ್ರ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ ಎಂದರು.

ಅರಂತೋಡು–ತೊಡಿಕಾನ ಕೃಷಿ ಪತ್ತಿನ ಸಹಕಾರಿ ಬ್ಯಾಂಕ್ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ನವೀನ್ ಎ.ಬಿ., ಉಪಾಧ್ಯಕ್ಷೆ ಸೌಮ್ಯ, ಮುಖ್ಯೋಪಾಧ್ಯಾಯಿನಿ ಚಂದ್ರಾವತಿ ಹಾಗೂ ಸಹಾಯಕ ಕಾರ್ಯಕ್ರಮಾಧಿಕಾರಿ ಭಾಗ್ಯಶ್ರೀ ಉಪಸ್ಥಿತರಿದ್ದರು. ಶಿಬಿರದ ಯಶಸ್ಸಿಗೆ ಸಹಕರಿಸಿದ ಎಸ್‌ಡಿಎಂಸಿ ಅಧ್ಯಕ್ಷ ನವೀನ್ ಎ.ಬಿ. ಹಾಗೂ ಅಕ್ಷರ ದಾಸೋಹ ಸಿಬ್ಬಂದಿಯನ್ನು ಗೌರವಿಸಲಾಯಿತು.

ಹಿರಿಯ ಭೌತಶಾಸ್ತ್ರ ಉಪನ್ಯಾಸಕ ಸುರೇಶ್ ವಾಗ್ಲೆ ಸ್ವಾಗತಿಸಿದರು. ಶಿಬಿರಾರ್ಥಿಗಳು ಶಿಬಿರಗೀತೆ ಹಾಡಿದರು. ತನ್ವಿ ಶಿಬಿರದ ಸಮಗ್ರ ವರದಿ ಮಂಡಿಸಿದರು. ಕಾರ್ಯಕ್ರಮಾಧಿಕಾರಿ ಲಿಂಗಪ್ಪ ಎಂ. ವಂದಿಸಿದರು. ಘಟಕದ ನಾಯಕಿಯರಾದ ದೀಪಶ್ರೀ ಮತ್ತು ಸುಭಿಕ್ಷಾ ಕಾರ್ಯಕ್ರಮ ನಿರೂಪಿಸಿದರು. ಉಪನ್ಯಾಸಕರಾದ ಮೋಹನ ಚಂದ್ರ, ಪದ್ಮಕುಮಾರ್, ದಿವ್ಯಶ್ರೀ ಹಾಗೂ ನಂದಿನಿ ಸಹಕರಿಸಿದರು. ಸ್ಥಳೀಯ ಶಾಲೆಯ ಶಿಕ್ಷಕರಾದ ಬಲರಾಜ್, ಸುನೀತಾ ಮತ್ತು ಸ್ನೇಹಲೋಕ ಉಪಸ್ಥಿತರಿದ್ದರು.

ಶಿಬಿರದಲ್ಲಿ 60 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಏಳು ದಿನಗಳ ಅವಧಿಯಲ್ಲಿ ಸ್ವಚ್ಛತಾ ಕಾರ್ಯ, ಕೈ ತೋಟದ ರಚನೆ, ದೇವರಗುಂಡಿ ಚಾರಣ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಶ್ರೀ ಮಲ್ಲಿಕಾರ್ಜುನ ದೇವಸ್ಥಾನ ಮತ್ತು ಶ್ರೀ ಮಹಾವಿಷ್ಣುಮೂರ್ತಿ ದೈವಸ್ಥಾನಕ್ಕೆ ಭೇಟಿ, ಪ್ಲಾಸ್ಟಿಕ್ ಮುಕ್ತ ಸಮಾಜ ನಿರ್ಮಾಣದ ಜಾಗೃತಿ ಜಾಥಾ, ಶಿಬಿರ ಜ್ಯೋತಿ ಹಾಗೂ ಪ್ರತಿಜ್ಞಾ ಕಾರ್ಯಕ್ರಮಗಳು ನಡೆದವು. ಸ್ಥಳೀಯ ವಿದ್ಯಾಭಿಮಾನಿಗಳು ವಿವಿಧ ರೀತಿಯಲ್ಲಿ ಸಹಕರಿಸಿ ಶಿಬಿರದ ಯಶಸ್ಸಿಗೆ ಕೈಜೋಡಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top