ಸುಬ್ರಹ್ಮಣ್ಯ: ಮನೆಯಲ್ಲಿ ಅಣ್ಣಂದಿರೊಂದಿಗೆ ನಲಿಯುತ್ತಾ, ಪುಟ್ಟ ಹೆಜ್ಜೆಗಳನ್ನಿಡುತ್ತಾ ಸಂಭ್ರಮ ತುಂಬಬೇಕಿದ್ದ ಎರಡು ವರ್ಷದ ಕಂದ ಆಸ್ಟಿನ್‌ನ ಬದುಕು ದಿಢೀರ್ ಅಂತ್ಯಗೊಂಡಿದೆ. ಅಸ್ವಸ್ಥತೆಯಿಂದ ಬಳಲುತ್ತಿದ್ದ ಮಗು ಅ.29ರಂದು ಮೃತಪಟ್ಟಿದ್ದು, ಕುಟುಂಬದವರನ್ನು ಶೋಕಸಾಗರದಲ್ಲಿ ಮುಳುಗಿಸಿದೆ.
ಕಫದ ಸಮಸ್ಯೆಯಿಂದ ಬಳಲುತ್ತಿದ್ದ ಆಸ್ಟಿನ್‌ನನ್ನು ಅ.28ರಂದು ಪುತ್ತೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಚಿಕಿತ್ಸೆ ಬಳಿಕ ಚೇತರಿಕೆ ಕಂಡ ಹಿನ್ನೆಲೆಯಲ್ಲಿ ಮಗುವನ್ನು ಮನೆಗೆ ಕರೆತರಲಾಗಿತ್ತು. ಆದರೆ, ವಿಧಿಯ ಕ್ರೂರ ಆಟವೇನೋ ಎಂಬಂತೆ, ಮರುದಿನ ಮುಂಜಾನೆ ಎಂದಿನಂತೆ ಎದ್ದು ಕೆಲಕಾಲ ಆಟವಾಡುತ್ತಿದ್ದ ಮಗು ಸ್ವಲ್ಪ ಹೊತ್ತಿನಲ್ಲೇ ಕೊನೆಯುಸಿರೆಳೆದಿದೆ.
ಮಗುವಿನ ಅನಿರೀಕ್ಷಿತ ಅಗಲಿಕೆ ಕುಟುಂಬದ ಪಾಲಿಗೆ ಬರಸಿಡಿಲಿನಂತೆ ಎರಗಿದೆ. ನಿನ್ನೆವರೆಗೂ ಮನೆಯ ತುಂಬಾ ನಗುವಿನ ಅಲೆ ಮೂಡಿಸುತ್ತಿದ್ದ ಕಂದನಿಲ್ಲದ ನೋವು ಹೆತ್ತವರನ್ನು ಹಾಗೂ ಕುಟುಂಬದವರನ್ನು ಕಂಗೆಡಿಸಿದೆ. ಅಣ್ಣಂದಿರ ಮುದ್ದಿನ ತಮ್ಮನ ಅಗಲಿಕೆ ಕುಟುಂಬದಲ್ಲಿ ತುಂಬಲಾರದ ಶೂನ್ಯವನ್ನು ಸೃಷ್ಟಿಸಿದೆ.
ಮೃತ ಆಸ್ಟಿನ್ ಸುಬ್ರಹ್ಮಣ್ಯದ ಕೋಳಿಫಾರಂ ಉದ್ಯಮಿ ಅನಿಲ್ ಮೊಂತೆರೊ ಹಾಗೂ ಸವಿತಾ ದಂಪತಿಯ ಪುತ್ರ. ಇಬ್ಬರು ಅಣ್ಣಂದಿರನ್ನು ಹಾಗೂ ಅಪಾರ ಬಂಧುಮಿತ್ರರನ್ನು ಅಗಲಿದ್ದಾನೆ.















