ಮಂಗಳೂರಿಗೆ ಕೆಲಸಕ್ಕೆಂದು ಹೋದ ಯುವತಿ ನಾಪತ್ತೆ

ಎಡಮಂಗಲ: ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದ ಎಡಮಂಗಲ ಗ್ರಾಮದ 26 ವರ್ಷದ ಯುವತಿ ವಸಂತಿ ನಾಪತ್ತೆಯಾಗಿದ್ದು, ಮನೆಗೆ ಮರಳಬೇಕಿದ್ದ ಮಗಳಿಗಾಗಿ ಕುಟುಂಬದವರು ಆತಂಕದಿಂದ ಕಾಯುತ್ತಿರುವ ಘಟನೆ ವರದಿಯಾಗಿದೆ.























ಎಡಮಂಗಲ ಗ್ರಾಮದ ವಸಂತಿ ಕಳೆದ ಎರಡು ವರ್ಷಗಳಿಂದ ಮಂಗಳೂರಿನ KFDC (೬) ಫಿಶ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಕಂಪನಿಯ ವಸತಿ ಕೊಠಡಿಯಲ್ಲಿ ಉಳಿದುಕೊಂಡಿದ್ದ ಅವರು, ತಿಂಗಳಿಗೊಮ್ಮೆ ಮನೆಗೆ ಬಂದು ಕುಟುಂಬದವರೊಂದಿಗೆ ಸಮಯ ಕಳೆದು ಮತ್ತೆ ಕೆಲಸಕ್ಕೆ ತೆರಳುತ್ತಿದ್ದರು.

ಅ.10ರಂದು ಮನೆಗೆ ಬಂದಿದ್ದ ಅವರು , ಅ.13ರಂದು ಬೆಳಿಗ್ಗೆ ಕೆಲಸಕ್ಕೆಂದು ಮಂಗಳೂರಿಗೆ ತೆರಳಿದ್ದರು. ಆದರೆ, ಎಂದಿನಂತೆ ಸಂಪರ್ಕಕ್ಕೆ ಸಿಗದಿರುವುದು ಕುಟುಂಬದವರಲ್ಲಿ ಆತಂಕ ಮೂಡಿಸಿದೆ.

ಅ.27ರಂದು ಮನೆಯವರು ವಸಂತಿಗೆ ದೂರವಾಣಿ ಕರೆ ಮಾಡಿದಾಗ ಸಂಪರ್ಕ ಸಾಧ್ಯವಾಗಿರಲಿಲ್ಲ. ಇದರಿಂದ ಕಳವಳಗೊಂಡ ಕುಟುಂಬದವರು ಮಂಗಳೂರಿನಲ್ಲಿರುವ ಅವರು ಕೆಲಸ ಮಾಡುತ್ತಿದ್ದ ಕಂಪನಿಗೆ ತೆರಳಿ ವಿಚಾರಿಸಿದ್ದಾರೆ. ಈ ವೇಳೆ, ಅ.10ರಂದು ರಜೆಯಲ್ಲಿ ಮನೆಗೆ ತೆರಳಿದ್ದ ವಸಂತಿ ಬಳಿಕ ಕೆಲಸಕ್ಕೆ ಹಾಜರಾಗಿಲ್ಲ ಎಂದು ಕಂಪನಿಯ ಸೂಪರ್‌ವೈಸರ್ ತಿಳಿಸಿದ್ದಾರೆ ಎನ್ನಲಾಗಿದೆ.

ಕೆಲಸಕ್ಕೆಂದು ತೆರಳಿದ ಮಗಳು ಎಲ್ಲಿದ್ದಾಳೆ, ಹೇಗಿದ್ದಾಳೆ ಎಂಬ ಮಾಹಿತಿಯಿಲ್ಲದೆ ಕುಟುಂಬದವರು ಚಿಂತೆಯಲ್ಲಿದ್ದಾರೆ. ಮನೆಗೆ ಮರಳಿ ಬರುವ ನಿರೀಕ್ಷೆಯಲ್ಲಿರುವ ಮನೆಯವರ ಆತಂಕ ಹೆಚ್ಚಾಗಿದ್ದು, ಯುವತಿಯ ಪತ್ತೆಗಾಗಿ ಕಾಯುತ್ತಿದ್ದಾರೆ.

ಈ ಕುರಿತು ವಸಂತಿಯ ಮನೆಯವರು ಬೆಳ್ಳಾರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಯುವತಿಯ ಪತ್ತೆಗಾಗಿ ಹುಡುಕಾಟ ಆರಂಭಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top