ಎಲಿಮಲೆ: ಮಕ್ಕಳಲ್ಲಿ ಕನ್ನಡ ಭಾಷೆಯ ಮೇಲಿನ ಒಲವು ಹೆಚ್ಚಿಸುವುದರ ಜತೆಗೆ, ಅವರಲ್ಲಿರುವ ಸೃಜನಶೀಲತೆಯನ್ನು ಗುರುತಿಸಿ ಹೊಸ ತಲೆಮಾರಿನ ಬರಹಗಾರರನ್ನು ಬೆಳೆಸಲು ಸಾಹಿತ್ಯ ಸಮ್ಮೇಳನಗಳು ಸಹಕಾರಿಯಾಗಬೇಕು ಎಂದು ಪಂಜ ಹೋಬಳಿ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆ ಕು. ಮೇಘ ಹೊಸೊಳಿಕೆ ಅಭಿಪ್ರಾಯಪಟ್ಟರು.
ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕ ಹಾಗೂ ಪಂಜ ಹೋಬಳಿ ಘಟಕದ ಸಂಯುಕ್ತ ಆಶ್ರಯದಲ್ಲಿ ಎಲಿಮಲೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ಆಯೋಜಿಸಿದ್ದ ಕಸಾಪ ಸಾಹಿತ್ಯ ಸಂಭ್ರಮ ಮತ್ತು ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪುಸ್ತಕಗಳ ಓದು ಮಕ್ಕಳ ಜ್ಞಾನವನ್ನು ವಿಸ್ತರಿಸುವುದರೊಂದಿಗೆ ಚಿಂತನಾ ಸಾಮರ್ಥ್ಯವನ್ನೂ ಹೆಚ್ಚಿಸುತ್ತದೆ. ಮಕ್ಕಳ ಬರವಣಿಗೆ ಸಾಹಿತ್ಯ ಲೋಕಕ್ಕೆ ಹೊಸತನವನ್ನು ತರುತ್ತದೆ. ವಿದ್ಯಾರ್ಥಿಗಳ ಸಾಧನೆ ಊರಿನ ಹೆಮ್ಮೆಯಾಗುತ್ತದೆ. ಆದ್ದರಿಂದ ಉತ್ತಮ ಪುಸ್ತಕಗಳನ್ನು ಆಯ್ದು ಓದುವ ಅಭ್ಯಾಸವನ್ನು ಬೆಳೆಸಿಕೊಳ್ಳಬೇಕು. ಯಾವ ಕೃತಿಗಳು ಓದಿಗೆ ಯೋಗ್ಯ ಎಂಬುದನ್ನು ಹಿರಿಯ ಸಾಹಿತಿಗಳ ಮಾರ್ಗದರ್ಶನದಿಂದ ಅರಿತುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಪುಸ್ತಕಗಳು ಕೇವಲ ಅಕ್ಷರಗಳ ಸಂಗ್ರಹವಲ್ಲ; ಅವು ಜ್ಞಾನ, ಅನುಭವ ಹಾಗೂ ಜೀವನದ ಮೌಲ್ಯಗಳನ್ನು ಪರಿಚಯಿಸುವ ಮಾಧ್ಯಮಗಳಾಗಿವೆ. ಉತ್ತಮ ಸಾಹಿತ್ಯದ ಓದು ವ್ಯಕ್ತಿತ್ವವನ್ನು ರೂಪಿಸುವುದರ ಜತೆಗೆ ಮಾನವೀಯ ಮೌಲ್ಯಗಳನ್ನು ಬೆಳೆಸುತ್ತದೆ. ಸರಿ-ತಪ್ಪುಗಳನ್ನು ಗುರುತಿಸುವ ವಿವೇಚನೆಯನ್ನೂ ನೀಡುತ್ತದೆ. ಹೀಗಾಗಿ ಮಕ್ಕಳಲ್ಲಿ ಓದುವ ಮತ್ತು ಬರೆಯುವ ಹವ್ಯಾಸವನ್ನು ಪ್ರೋತ್ಸಾಹಿಸಬೇಕು. ಕನ್ನಡ ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಬಗ್ಗೆ ಗೌರವ ಬೆಳೆಸಿಕೊಂಡು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಎಲ್ಲರೂ ಕೈಜೋಡಿಸಬೇಕು ಎಂದು ಅವರು ಕರೆ ನೀಡಿದರು.
ಗಣ್ಯರಿಂದ ಉದ್ಘಾಟನೆ
ಸಮ್ಮೇಳನದ ಅಂಗವಾಗಿ ದೇವಚಳ್ಳ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ಜಯಾನಂದ ಪಟ್ಟೆ ರಾಷ್ಟ್ರಧ್ವಜವನ್ನು ಹಾರಿಸಿದರು. ರಾಜ್ಯ ಮೀನುಗಾರಿಕೆ ನಿಗಮದ ಮಾಜಿ ಅಧ್ಯಕ್ಷ ಎ.ವಿ. ತೀರ್ಥರಾಮ ಕನ್ನಡ ಧ್ವಜಾರೋಹಣ ನೆರವೇರಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷ ವೆಂಕಟ್ ದಂಬೆಕೋಡಿ ದೀಪ ಪ್ರಜ್ವಲಿಸುವ ಮೂಲಕ ಸಮ್ಮೇಳನಕ್ಕೆ ಅಧಿಕೃತ ಚಾಲನೆ ನೀಡಿದರು. ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕು. ದೀಕ್ಷಾ ಪಿ. ದಿಕ್ಸೂಚಿ ಭಾಷಣ ಮಾಡಿದರು.
ವಳಲಂಬೆ ಶಂಖಪಾಲ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಮಾಜಿ ಅಧ್ಯಕ್ಷ ಕೇಶವ ಹೊಸೊಳಿಕೆ ಹಾಗೂ ದೇವಚಳ್ಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ಕುಶಾಲಪ್ಪ ತುಂಬತ್ತಾಜೆ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಕಸಾಪ ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಮತ್ತು ಕಾರ್ಯಕ್ರಮ ಸಂಯೋಜಕ ಯೋಗೀಶ್ ಹೊಸೊಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಆರಂಭದಲ್ಲಿ ವಿದ್ಯಾರ್ಥಿಗಳು ರೈತಗೀತೆಯನ್ನು ಹಾಡಿದರು. ಬಾಬು ಗೌಡ ಅಚ್ರಪ್ಪಾಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಲಾವಣ್ಯ ಡಿ.ಎಸ್. ವಂದಿಸಿದರು. ಕು. ಹಸ್ತಾ ಕೆ., ಕು. ಸಾಯಿ ಸುನಿಷ್ಠ ಹಾಗೂ ಚರಿಷ್ಮಾ ಕಡಪಳ ಕಾರ್ಯಕ್ರಮ ನಿರೂಪಿಸಿದರು.
















