ಕನ್ನಡ ಸಾಹಿತ್ಯ, ಶಿಕ್ಷಣ ಹಾಗೂ ಸಮಾಜ ಸೇವೆಯ ಸಾಧಕ ಶ್ರೀ ಚಂದ್ರಶೇಖರ ಪೇರಾಲು ಅವರಿಗೆ ಅರ್ಹವಾಗಿಯೇ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ

ಕನ್ನಡ ಸಾಹಿತ್ಯ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಕಳೆದ ಹಲವು ದಶಕಗಳಿಂದ ನಿರಂತರವಾಗಿ ಸೇವೆ ಸಲ್ಲಿಸುತ್ತಿರುವ ಸುಳ್ಯ ತಾಲೂಕಿನ ಪೇರಾಲು ಗ್ರಾಮದ ಶ್ರೀ ಚಂದ್ರಶೇಖರ ಪೇರಾಲು ಅವರು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಭಾಜನರಾಗಿರುವುದು ಸುಳ್ಯ ತಾಲೂಕು ಮಾತ್ರವಲ್ಲದೆ ಇಡೀ ದಕ್ಷಿಣ ಕನ್ನಡ ಜಿಲ್ಲೆಗೆ ಹೆಮ್ಮೆಯ ಸಂಗತಿಯಾಗಿದೆ.

























ಪೇರಾಲು ಶ್ರೀ ರಾಮಣ್ಣ ಗೌಡ ಹಾಗೂ ಶ್ರೀಮತಿ ಚಿನ್ನಮ್ಮ ದಂಪತಿಯ ಪುತ್ರರಾದ ಇವರು ಪ್ರಾಥಮಿಕ ಶಿಕ್ಷಣವನ್ನು ಪೇರಾಲಿನಲ್ಲಿ, ಪ್ರೌಢ ಹಾಗೂ ಪದವಿ ಶಿಕ್ಷಣವನ್ನು ಸುಳ್ಯದಲ್ಲಿ ಪೂರ್ಣಗೊಳಿಸಿ, ಮಂಗಳೂರು ವಿಶ್ವವಿದ್ಯಾನಿಲಯದಿಂದ ಇಂಗ್ಲಿಷ್ ಎಂ.ಎ. ಪದವಿ ಹಾಗೂ ಅಣ್ಣಾಮಲೈ ವಿಶ್ವವಿದ್ಯಾನಿಲಯದಿಂದ ಬಿ.ಎಡ್. ಪದವಿ ಪಡೆದಿದ್ದಾರೆ. 1999ರಲ್ಲಿ ಕರ್ನಾಟಕ ಲೋಕಸೇವಾ ಆಯೋಗದ ಕೆಇಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಪ್ರೊಬೇಷನರಿ ಮುಖ್ಯ ಶಿಕ್ಷಕರಾಗಿ ಸರ್ಕಾರಿ ಸೇವೆಗೆ ಪ್ರವೇಶಿಸಿದ ಇವರು ಶಿಕ್ಷಣ ಇಲಾಖೆಯಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ, ನಿವೃತ್ತಿಯ ಬಳಿಕವೂ ಶಿಕ್ಷಣ ಕ್ಷೇತ್ರದಲ್ಲಿ ತಮ್ಮ ಸೇವೆಯನ್ನು ಮುಂದುವರಿಸಿದ್ದಾರೆ.

ಕನ್ನಡ ಸಾಹಿತ್ಯ ಸೇವೆ:
ಕನ್ನಡ ಸಾಹಿತ್ಯ ಪರಿಷತ್ತ್ ಸುಳ್ಯದಲ್ಲಿ ನಿರಂತರ 18ವರ್ಷಗಳಿಂದ ಸದಸ್ಯರಾಗಿ,
ಗೌರವ ಕಾರ್ಯದರ್ಶಿಯಾಗಿ ಹಾಗೂ ಪ್ರಸ್ತುತ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದರೊಂದಿಗೆ
ಚಂದ್ರಶೇಖರ ಪೇರಾಲು ಅವರು ಕನ್ನಡ ಸಾಹಿತ್ಯದ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದವರು. ತಾಲ್ಲೂಕು, ಹೋಬಳಿ ಹಾಗೂ ಮಕ್ಕಳ ಸಾಹಿತ್ಯ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ವಿದ್ಯಾರ್ಥಿಗಳಿಗೆ ಹಾಗೂ ಯುವಜನರಲ್ಲಿ ಬೆಳೆಸಿದ್ದಾರೆ.

‘ನಮ್ಮ ನಡೆ ವಿದ್ಯಾರ್ಥಿಗಳೆಡೆಗೆ’ ಎಂಬ ಘೋಷವಾಕ್ಯದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಸಾಹಿತ್ಯ ಸಂಭ್ರಮ ಕಾರ್ಯಕ್ರಮಗಳನ್ನು ಆಯೋಜಿಸಿ ಪ್ರತಿ ವರ್ಷ 5ರಿಂದ 6 ಸಾವಿರ ವಿದ್ಯಾರ್ಥಿಗಳನ್ನು ತಲುಪಿರುವುದು ಇವರ ವಿಶೇಷ ಸಾಧನೆಯಾಗಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡದಲ್ಲಿ 100 ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಗೌರವಿಸುವ ಮೂಲಕ ಕನ್ನಡ ಭಾಷೆಯ ಕಲಿಕೆಗೆ ಪ್ರೋತ್ಸಾಹವನ್ನು ನೀಡುತ್ತಿದ್ದಾರೆ.

ಅದರೊಂದಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಅರೆಭಾಷೆಯ ಸಂಸ್ಕೃತಿ, ಸಾಹಿತ್ಯ ಹಾಗೂ ಪರಂಪರೆಯ ಸಂರಕ್ಷಣೆಗೆ ಶ್ರಮಿಸಿದ್ದಾರೆ. ಅರೆಭಾಷೆ ಗಡಿನಾಡ ಉತ್ಸವ, ಶಾಲಾ ಕಾಲೇಜುಗಳಲ್ಲಿ ಅರೆಭಾಷಾ ಸಂಘಗಳ ಸ್ಥಾಪನೆ, ಅರೆಭಾಷಾ ವಿಚಾರ ಸಂಕಿರಣ, ಬೃಹತ್ ಆಟಿ ಉತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ಆಯೋಜನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅಲ್ಲದೇ
ಅರೆಭಾಷೆ ಅಕಾಡೆಮಿಯ ಹಿಂಗಾರ ತ್ರೈಮಾಸಿಕ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸಿ, ಸಂಶೋಧನಾ ಗ್ರಂಥಗಳು ಹಾಗೂ ಸಾಹಿತ್ಯ ಕೃತಿಗಳ ಪ್ರಕಟಣೆಯಲ್ಲಿಯೂ ಕೊಡುಗೆ ನೀಡಿದ್ದಾರೆ.

ಶಿಕ್ಷಣ ಹಾಗೂ ಸಾಮಾಜಿಕ ಸೇವೆಯಲ್ಲೂ ಕೖ ಆಡಿಸಿದ ಇವರರು ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಿದವರು. ಅಕ್ಷರ ದಾಸೋಹದ ಮೂಲಕ ಮಕ್ಕಳ ಆರೋಗ್ಯದ ಕಾಳಜಿ, ಶಾಲೆಗಳಿಗೆ ಅಗತ್ಯ ಮೂಲಸೌಕರ್ಯಗಳ ಒದಗಿಸುವಿಕೆ ಹಾಗೂ ವಿದ್ಯಾರ್ಥಿಗಳ ಸೃಜನಶೀಲ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುವ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಇದರೊಂದಿಗೆ ಅಂತರಾಷ್ಟ್ರೀಯ ಸಂಸ್ಥೆ ಗಳಲ್ಲಿ ಒಂದಾದ ರೋಟರಿ ಕ್ಲಬ್ ಸುಳ್ಯದ ಅಧ್ಯಕ್ಷರಾಗಿ ಅಂಗವಿಕಲರಿಗೆ ಮನೆ ನಿರ್ಮಾಣ, ಶಾಲೆಗಳಿಗೆ ಶೌಚಾಲಯ, ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಇತರ ಮೂಲಸೌಕರ್ಯಗಳನ್ನು ಒದಗಿಸುವ ಮೂಲಕ ಸಾಮಾಜಿಕ ಸೇವೆಯಲ್ಲಿಯೂ ಗುರುತಿಸಿಕೊಂಡಿದ್ದಾರೆ. ಸರ್ಕಾರಿ ಶಾಲೆಯ ಮುಖ್ಯ ಶಿಕ್ಷಕರಾಗಿ ಅಲ್ಪಾವಧಿಯಲ್ಲಿ ಶಾಲೆಯ ಸುಂದರೀಕರಣ ಹಾಗೂ ಶೈಕ್ಷಣಿಕ ಅಭಿವೃದ್ಧಿಗೆ ನೀಡಿದ ಕೊಡುಗೆ ವಿಶೇಷ ಪ್ರಶಂಸೆಗೆ ಪಾತ್ರವಾಗಿದೆ.

ಗಾಂಧಿ ಚಿಂತನೆಯ ವೇದಿಕೆಯ ಸಂಚಾಲಕರಾಗಿ ಗಾಂಧಿ ನಡಿಗೆ, ಗಾಂಧಿ ಸ್ಮೃತಿ ಕಾರ್ಯಕ್ರಮಗಳನ್ನು ನಿರಂತರವಾಗಿ ಆಯೋಜಿಸುತ್ತಿರುವ ಇವರು ಸಮಾಜದಲ್ಲಿ ಮೌಲ್ಯಾಧಾರಿತ ಚಿಂತನೆಗಳ ಪ್ರಸಾರಕ್ಕೂ ಶ್ರಮಿಸುವವರು.

ಇವರ ಸಾಧನೆಗೆ ಮಲೆನಾಡು ಸಿರಿ ಶಿಕ್ಷಕ ಪ್ರಶಸ್ತಿ, ದಕ್ಷಿಣ ಕನ್ನಡ ಜಿಲ್ಲಾ ಶಿಕ್ಷಕ ಪ್ರಶಸ್ತಿ, ರಾಜ್ಯಮಟ್ಟದ ಅತ್ಯುತ್ತಮ ಸಮನ್ವಯ ಅಧಿಕಾರಿ ಪ್ರಶಸ್ತಿ, ಡಾ. ಕಯ್ಯಾರ ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳಿಗೆ ಭಾಜನರಾಗಿರುವ ಶ್ರೀ ಚಂದ್ರಶೇಖರ ಪೇರಾಲು ಅವರಿಗೆ ಇದೀಗ 2016ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿರುವುದು ಅವರ ದೀರ್ಘಕಾಲದ ನಿಸ್ವಾರ್ಥ ಸೇವೆ ಹಾಗೂ ಸಾಧನೆಗೆ ಸಂದ ಮಹತ್ವದ ಮನ್ನಣೆಯಾಗಿದೆ.
ಪತ್ನಿ ಶ್ರೀಮತಿ ಉಷಾ ಚಂದ್ರಶೇಖರ್ ಅವರು ಅಜ್ಜಾವರ ಪ್ರೌಢಶಾಲೆಯಲ್ಲಿ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮಕ್ಕಳಾದ ಮಾನಸ ಪೇರಾಲು ಹಾಗೂ ಗೌತಮ್ ಪೇರಾಲು ಉದ್ಯೋಗದಲ್ಲಿದ್ದು, ಕುಟುಂಬ ಸಮೇತರಾಗಿ ಹಳೆಗೇಟಿನ ಅಕ್ಷರ ನಿವಾಸದಲ್ಲಿ ವಾಸವಾಗಿದ್ದಾರೆ.
ಕನ್ನಡ ಭಾಷೆ, ಸಾಹಿತ್ಯ, ಶಿಕ್ಷಣ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿರುವ ಶ್ರೀ ಚಂದ್ರಶೇಖರ ಪೇರಾಲು ಅವರ ಸಾಧನೆ ನಮ್ಮ ಮುಂದಿನ ಪೀಳಿಗೆಗೆ ಪ್ರೇರಣೆಯಾಗಲಿ. ಅವರ ಈ ಗೌರವ ಸುಳ್ಯ ತಾಲೂಕಿನ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಕ್ಷೇತ್ರಕ್ಕೆ ಹೊಸ ಉತ್ಸಾಹ ತುಂಬಲಿ ಎಂಬುದು ನಮ್ಮ ಆಶಯವಾಗಿದೆ.

ಬರಹ : ಲತಾಶ್ರೀ ಸುಪ್ರೀತ್ ಮೋಂಟಡ್ಕ ಸುಳ್ಯ

Leave a Comment

Your email address will not be published. Required fields are marked *

error: Content is protected !!
Scroll to Top