ಗೂನಡ್ಕ: ಕನ್ನಡ ನಾಡು, ನುಡಿ ಹಾಗೂ ಸಾಹಿತ್ಯ ಪರಂಪರೆಯ ಸೊಗಡನ್ನು ಅನಾವರಣಗೊಳಿಸಿದ ಸುಂದರ ವೇದಿಕೆ ಗೂನಡ್ಕದಲ್ಲಿ ಅ.6ರಂದು ಸಜ್ಜಾಗಿತ್ತು. ದೀಪಾವಳಿಯ ಬೆಳಕಿನ ಸಂಭ್ರಮದೊಂದಿಗೆ ಸಾಹಿತ್ಯದ ಸವಿಯನ್ನೂ ಬೆರೆಸಿದ ಕವಿಗೋಷ್ಠಿ, ಹಾಸ್ಯಮಯ ಹರಟೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಪ್ರೇಕ್ಷಕರ ಗಮನ ಸೆಳೆಯಿತು.
ಕನ್ನಡ ಸಾಹಿತ್ಯ ಪರಿಷತ್ತಿನ ಸುಳ್ಯ ತಾಲೂಕು ಘಟಕದ ಆಶ್ರಯದಲ್ಲಿ ಸುಳ್ಯ ಪಂಜ ಹೋಬಳಿ ಘಟಕ, ಶಾಲಾ ಕಾಲೇಜುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಹಮ್ಮಿಕೊಂಡಿರುವ ಸಾಹಿತ್ಯ ಸಂಭ್ರಮದ ಅಂಗವಾಗಿ ನ.6ರಂದು ಗೂನಡ್ಕದ ಶ್ರೀ ವಿಷ್ಣು ದೋಳ ಮನೆಯಲ್ಲಿ ದೀಪಾವಳಿ ಕವಿಗೋಷ್ಠಿ, ಹರಟೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಷರಾ ಫೌಂಡೇಶನ್ ಸುಳ್ಯ, ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಹಾಗೂ ಸುಳ್ಯ ಪ್ರೆಸ್ ಕ್ಲಬ್ ಸಹಕಾರದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಸಾಪ ಸುಳ್ಯ ತಾಲೂಕು ಘಟಕದ ಅಧ್ಯಕ್ಷ ಚಂದ್ರಶೇಖರ ಪೇರಾಲು ವಹಿಸಿದ್ದರು. ನಿವೃತ್ತ ಶಿಕ್ಷಕ ಯು.ಎಸ್. ಚಿದಾನಂದ ಅವರು ದೀಪಾವಳಿ ಹರಟೆ ಕಾರ್ಯಕ್ರಮವನ್ನು ನಡೆಸಿಕೊಟ್ಟು, ಮಾತಿನ ಲಹರಿಯಲ್ಲಿ ಹಾಸ್ಯ ಹಾಗೂ ಜೀವನಾನುಭವಗಳನ್ನು ಹಂಚಿಕೊಂಡರು.
ಕಾರ್ಯಕ್ರಮದಲ್ಲಿ ವಿಶೇಷವಾಗಿ ದೋಳ ವೀರಪ್ಪ ಗೌಡ ಮತ್ತು ಗೌರಮ್ಮ ದಂಪತಿಯನ್ನು ಸನ್ಮಾನಿಸಿ ಗೌರವಿಸಲಾಯಿತು. ಸಾಹಿತ್ಯ, ಸಮಾಜ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದವರನ್ನು ಗುರುತಿಸಿ ಗೌರವಿಸುವ ಮೂಲಕ ಕಾರ್ಯಕ್ರಮ ಅರ್ಥಪೂರ್ಣವಾಯಿತು. ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಚಂದ್ರಶೇಖರ ಪೇರಾಲು, ಗಂಗಾಧರ ಮಟ್ಟಿ ಹಾಗೂ ಕೃಷಿ ಕ್ಷೇತ್ರದ ಸಾಧಕಿ ಶ್ರೀಮತಿ ಲೀಲಾವತಿ ರುಕ್ಮಯ್ಯದಾಸ್ ಅವರನ್ನು ಗೌರವಿಸಲಾಯಿತು.
ಮುಖ್ಯ ಅತಿಥಿಗಳಾಗಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಪ್ರಶಾಂತ್ ಪೈ, ಸುಳ್ಯ ತಹಶೀಲ್ದಾರ್ ಮಂಜುಳಾ ಎಂ., ಸಜ್ಜನ ಪ್ರತಿಷ್ಠಾನದ ಅಧ್ಯಕ್ಷ ಉಮ್ಮರ್ ಬೀಜದಕಟ್ಟೆ, ಉದ್ಯಮಿ ಸತೀಶ್ ಡಿ.ವಿ., ಸುದ್ದಿ ಬಿಡುಗಡೆಯ ಸಂಪಾದಕ ಹರೀಶ್ ಬಂಟ್ವಾಳ್ ಹಾಗೂ ಡಾ. ಲೀಲಾಧರ ಡಿ.ವಿ. ಉಪಸ್ಥಿತರಿದ್ದರು.
ಕವಿತೆಗಳ ಮೂಲಕ ಅರಳಿದ ದೀಪಾವಳಿಯ ಸೊಬಗು
ಮುಖ್ಯ ಕಾರ್ಯಕ್ರಮಕ್ಕೂ ಮುನ್ನ ನಡೆದ ದೀಪಾವಳಿ ಕವಿಗೋಷ್ಠಿ ಸಾಹಿತ್ಯಾಸಕ್ತರ ಮನಸೂರೆಗೊಂಡಿತು. ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಸ್ಮಿತಾ ಅಮೃತರಾಜ್ ವಹಿಸಿದ್ದರು. ಸಂಗೀತಾ ರವಿರಾಜ್ ಹೊಸೂರು, ಸಹನಾ ಕಾಂತಬೈಲು, ಚಂದ್ರಾವತಿ ಬಡ್ಡಡ್ಕ, ಸಹನಾ ಗಿರೀಶ್, ವಿನೋದ್ ಮೂಡಗದ್ದೆ, ಮಮತಾ ಪಡ್ಡಂಬೈಲು, ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ದೀಪಶ್ರೀ ಅಡ್ತಲೆ ಅವರು ತಮ್ಮ ಕವನಗಳನ್ನು ವಾಚಿಸಿದರು. ಕವಿತೆಗಳ ಮೂಲಕ ಹಬ್ಬದ ಸಂಭ್ರಮ, ಬದುಕಿನ ಭಾವನೆಗಳು ಹಾಗೂ ಸಾಹಿತ್ಯದ ಅಭಿರುಚಿ ಅನಾವರಣಗೊಂಡಿತು.
ಬಳಿಕ ರಂಗ ಮಯೂರಿ ಕಲಾ ಶಾಲೆಯ ವಿದ್ಯಾರ್ಥಿಗಳಿಂದ ಕನ್ನಡ ಗೀತ ಗಾಯನ ಹಾಗೂ ನೃತ್ಯ ಪ್ರದರ್ಶನ ನಡೆಯಿತು. ಪುಟಾಣಿಗಳ ಕಲಾಪ್ರದರ್ಶನ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿತು.
ಕಸಾಪ ಗೌರವ ಕಾರ್ಯದರ್ಶಿಗಳಾದ ಚಂದ್ರಮತಿ ಕೆ. ಮತ್ತು ತೇಜಸ್ವಿ ಕಡಪಳ, ಗೌರವ ಕೋಶಾಧಿಕಾರಿ ದಯಾನಂದ ಆಳ್ವ ಉಪಸ್ಥಿತರಿದ್ದರು. ಪ್ರೆಸ್ ಕ್ಲಬ್ ಅಧ್ಯಕ್ಷ ಶರೀಫ್ ಜಟ್ಟಿಪಳ್ಳ ಸ್ವಾಗತಿಸಿದರು. ತೇಜಸ್ವಿ ಕಡಪಳ ವಂದಿಸಿದರು. ರಮೇಶ್ ನೀರಬಿದಿರೆ ಕಾರ್ಯಕ್ರಮ ನಿರೂಪಿಸಿದರು.
ಸಾಹಿತ್ಯದ ಅಭಿರುಚಿ, ಸಾಧಕರಿಗೆ ಗೌರವ, ಹಿರಿಯರ ಅನುಭವದ ಮಾತು ಹಾಗೂ ಮಕ್ಕಳ ಕಲಾಪ್ರತಿಭೆ ಒಂದೇ ವೇದಿಕೆಯಲ್ಲಿ ಮೇಳೈಸಿದ ಗೂನಡ್ಕದ ಈ ಸಾಹಿತ್ಯ ಸಂಭ್ರಮ ದೀಪಾವಳಿಯ ಸಾಂಸ್ಕೃತಿಕ ಸೊಬಗಿಗೆ ಮತ್ತಷ್ಟು ಮೆರುಗು ನೀಡಿತು.
ಗೂನಡ್ಕ : ಸಾಹಿತ್ಯದ ಕಂಪು, ಹಿರಿಯರ ಸಾಧನೆಗೆ ಗೌರವ, ಮಕ್ಕಳ ಕಲಾಪ್ರತಿಭೆಯ ಅನಾವರಣ – ದೋಳ ವೀರಪ್ಪ ಗೌಡ ದಂಪತಿಗಳಿಗೆ ಸನ್ಮಾನ

















