ವಿವಿಧ ಆಚರಣೆಗಳಿಗೆ ಸಾಕ್ಷಿಯಾಗುವ ತುಳುನಾಡಿನ ದೀಪಾವಳಿ

✍️   *ಶ್ರೀ ಮೋಹನ್ ಚಂದ್ರ ಎನ್.ಪಿ*.(ಉಪನ್ಯಾಸಕರು)
ಹವ್ಯಾಸಿ ಬರಹಗಾರರು
ದೀಪಗಳ ಹಬ್ಬವೇ ದೀಪಾವಳಿ. ತುಳುನಾಡಿನ ಪಾಲಿಗೆ ಅದು ‘ತುಡಾರ ಪರ್ಬ’ ಎಂಬ ವಿಶೇಷ ಹೆಸರಿನಿಂದ ಗುರುತಿಸಿಕೊಂಡಿದೆ. ‘ತುಡಾರ್’ ಎಂದರೆ ದೀಪ. ಈ ದೀಪದ ಬೆಳಕಿನಲ್ಲಿ ತುಳುನಾಡಿನ ಮಣ್ಣು, ಕೃಷಿ ಬದುಕು, ದೇವರು-ದೈವಗಳ ಆರಾಧನೆ, ಕುಟುಂಬದ ನಂಟು ಹಾಗೂ ಜನಪದ ಸಂಪ್ರದಾಯಗಳು ಅನಾವರಣಗೊಳ್ಳುತ್ತವೆ.





































































ದೀಪಾವಳಿ ಸಮೀಪಿಸುತ್ತಿದ್ದಂತೆ ಮನೆಗಳ ಅಂಗಳ ಸ್ವಚ್ಛಗೊಳ್ಳುತ್ತದೆ. ಬಣ್ಣಬಣ್ಣದ ರಂಗೋಲಿಗಳು ಮೂಡುತ್ತವೆ. ಗೂಡುದೀಪಗಳು ಸಿದ್ಧಗೊಳ್ಳುತ್ತವೆ. ಮನೆ ಮತ್ತು ಅಂಗಡಿಗಳ ಮುಂಭಾಗದಲ್ಲಿ ಆಕರ್ಷಕ ಗೂಡುದೀಪಗಳು ತೂಗಾಡುತ್ತವೆ. ದೀಪಗಳ ಬೆಳಕಿನಲ್ಲಿ ಇಡೀ ಊರು ಹಬ್ಬದ ಸೊಬಗಿನಿಂದ ಕಂಗೊಳಿಸುತ್ತದೆ.

ನರಕ ಚತುರ್ದಶಿಯ ಮುಂಜಾನೆ ಮನೆಯವರು ಬೇಗನೆ ಎದ್ದು ಅಭ್ಯಂಜನ ಸ್ನಾನ ಮಾಡುತ್ತಾರೆ. ಕೆಲವು ಪ್ರದೇಶಗಳಲ್ಲಿ ಹಿಂದಿನ ದಿನವೇ ಸ್ನಾನದ ಹಂಡೆಗೆ ನೀರು ತುಂಬಿಸಿ, ಹೂಗಳಿಂದ ಅಲಂಕರಿಸಿ ಇಡುವ ಪದ್ಧತಿಯಿದೆ. ಎಣ್ಣೆ ಹಚ್ಚಿಕೊಂಡು ಸ್ನಾನ ಮಾಡಿ, ಹೊಸ ಬಟ್ಟೆ ಧರಿಸಿ, ದೇವರ ಪೂಜೆ ಸಲ್ಲಿಸಿ, ಪಟಾಕಿ ಸಿಡಿಸುವ ಮೂಲಕ ಹಬ್ಬದ ಸಂಭ್ರಮಕ್ಕೆ ಚಾಲನೆ ನೀಡುತ್ತಾರೆ.

ದೀಪಾವಳಿ ಅಮಾವಾಸ್ಯೆಯಂದು ಮನೆಗಳಲ್ಲಿ ಲಕ್ಷ್ಮೀ ಪೂಜೆ ನಡೆಯುತ್ತದೆ. ವ್ಯಾಪಾರಸ್ಥರು ಅಂಗಡಿಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಾರೆ. ವಾಹನಗಳು ಹಾಗೂ ದುಡಿಮೆಗೆ ನೆರವಾಗುವ ಉಪಕರಣಗಳಿಗೂ ಪೂಜೆ ಸಲ್ಲಿಸುವ ಸಂಪ್ರದಾಯವಿದೆ.

ತುಳುನಾಡಿನ ದೇವಸ್ಥಾನಗಳಲ್ಲಿ ದೀಪಾವಳಿಯ ಸಂದರ್ಭದಲ್ಲಿ ವಿಶೇಷ ಪೂಜೆಗಳು ನಡೆಯುತ್ತವೆ. ಭಕ್ತರು ಕುಟುಂಬ ಸಮೇತರಾಗಿ ದೇವಸ್ಥಾನಗಳಿಗೆ ತೆರಳಿ ದೇವರ ದರ್ಶನ ಪಡೆದು ಪ್ರಾರ್ಥಿಸುತ್ತಾರೆ. ಇದೇ ಸಂದರ್ಭದಲ್ಲಿ ದೈವಸ್ಥಾನಗಳಲ್ಲಿಯೂ ದೈವಗಳಿಗೆ ದೀಪಾವಳಿಯ ಅಂಗವಾಗಿ ತಂಬಿಲ ಸೇರಿದಂತೆ ಸ್ಥಳೀಯ ಸಂಪ್ರದಾಯದ ಆರಾಧನೆಗಳು ನೆರವೇರುತ್ತವೆ.

ತುಳುನಾಡಿನ ದೀಪಾವಳಿಯಲ್ಲಿ ಬಲಿಪಾಡ್ಯಮಿಗೆ ವಿಶೇಷ ಸ್ಥಾನವಿದೆ. ಮಹಾಬಲಿಯ ಸ್ಮರಣೆಯೊಂದಿಗೆ ನಡೆಯುವ ಬಲಿಯೇಂದ್ರ ಪೂಜೆ ಈ ದಿನದ ಪ್ರಮುಖ ಆಚರಣೆ. ಹಾಲೆ ಮರವನ್ನು ನಿಲ್ಲಿಸಿ, ಬಾಳೆಗಿಡದ ಹಾಲೆಯನ್ನು ಕಟ್ಟಿ, ಹೂಗಳಿಂದ ಅಲಂಕರಿಸಲಾಗುತ್ತದೆ. ಸಂಜೆ ಕತ್ತಲು ಆವರಿಸುತ್ತಿದ್ದಂತೆ ಮನೆಯವರೆಲ್ಲರೂ ಒಟ್ಟಾಗಿ ಸೇರಿ ‘ಬಲಿಯೇಂದ್ರ… ಕೂ… ಕೂ…’ ಎಂದು ಕರೆಯುವ ಸಂಪ್ರದಾಯವಿದೆ. ಇದು ತುಳುನಾಡಿನ ದೀಪಾವಳಿಗೆ ವಿಶಿಷ್ಟ ಮೆರುಗನ್ನು ನೀಡುತ್ತದೆ.

ತುಳುನಾಡಿನ ದೀಪಾವಳಿಯ ಹೃದಯಸ್ಪರ್ಶಿ ಆಚರಣೆಗಳಲ್ಲಿ ಗೋ ಪೂಜೆಯೂ ಒಂದು. ಹಸು ಮತ್ತು ಎತ್ತುಗಳನ್ನು ಸ್ನಾನ ಮಾಡಿಸಿ, ಹೂಮಾಲೆ ತೊಡಿಸಿ, ಧೂಪ-ದೀಪಗಳಿಂದ ಆರತಿ ಬೆಳಗಲಾಗುತ್ತದೆ. ಅನ್ನ, ಬೆಲ್ಲ ಹಾಗೂ ಬಾಳೆಹಣ್ಣುಗಳನ್ನು ಅರ್ಪಿಸಿ ಪೂಜಿಸಲಾಗುತ್ತದೆ. ಕೃಷಿ ಬದುಕಿನಲ್ಲಿ ಜಾನುವಾರುಗಳ ಮಹತ್ವವನ್ನು ಸಾರುವ ಈ ಆಚರಣೆ ಕೃತಜ್ಞತೆಯ ಪ್ರತೀಕವಾಗಿದೆ.

ಗದ್ದೆಗಳಲ್ಲಿ ಭೂಮಿ ಪೂಜೆ ನೆರವೇರುತ್ತದೆ. ನೇಗಿಲು, ನೊಗ, ಹಾರೆ, ಪಿಕ್ಕಾಸು ಸೇರಿದಂತೆ ಕೃಷಿ ಉಪಕರಣಗಳನ್ನು ಸ್ವಚ್ಛಗೊಳಿಸಿ ಪೂಜಿಸಲಾಗುತ್ತದೆ. ಕೃಷಿಗೆ ಆಧಾರವಾದ ಭೂಮಿ, ಜಾನುವಾರು ಹಾಗೂ ದುಡಿಮೆಯ ಸಾಧನಗಳನ್ನು ಗೌರವಿಸುವ ಈ ಸಂಪ್ರದಾಯಗಳು ತುಳುನಾಡಿನ ಜನಜೀವನ ಮತ್ತು ಕೃಷಿ ಸಂಸ್ಕೃತಿಯ ನಡುವಿನ ಅವಿನಾಭಾವ ಸಂಬಂಧವನ್ನು ಎತ್ತಿ ತೋರಿಸುತ್ತವೆ.

ದೀಪಾವಳಿಯ ಸಂದರ್ಭದಲ್ಲಿ ಕೆಲವು ಮನೆಗಳಲ್ಲಿ ಪೂರ್ವಜರನ್ನು ಸ್ಮರಿಸಿ ಸಾಂಪ್ರದಾಯಿಕವಾಗಿ ಅಗೇಲು ಬಡಿಸುವ ಪದ್ಧತಿಯಿದೆ. ಅದೇ ರೀತಿ, ಆ ವರ್ಷ ನಿಧನರಾದವರ ಸ್ಮರಣಾರ್ಥ ಕೆಲವು ಪ್ರದೇಶಗಳಲ್ಲಿ ಅವಲಕ್ಕಿ ಹಾಕುವ ಆಚರಣೆಯೂ ಕಂಡುಬರುತ್ತದೆ. ಇಂತಹ ಸಂಪ್ರದಾಯಗಳು ಕುಟುಂಬದ ಹಿರಿಯರು ಮತ್ತು ಪೂರ್ವಜರೊಂದಿಗಿನ ಭಾವನಾತ್ಮಕ ಸಂಬಂಧವನ್ನು ನೆನಪಿಸುತ್ತವೆ.

ಹೀಗೆ ತುಳುನಾಡಿನ ದೀಪಾವಳಿ ಕೇವಲ ದೀಪಗಳನ್ನು ಬೆಳಗಿಸಿ ಸಂಭ್ರಮಿಸುವ ಹಬ್ಬವಲ್ಲ. ಅದು ಅನೇಕ ಆಚರಣೆಗಳು, ನಂಬಿಕೆಗಳು ಮತ್ತು ಪರಂಪರೆಗಳನ್ನು ಒಳಗೊಂಡಿರುವ ಸಾಂಸ್ಕೃತಿಕ ಹಬ್ಬ. ನರಕ ಚತುರ್ದಶಿಯ ಅಭ್ಯಂಜನ ಸ್ನಾನದಿಂದ ಆರಂಭವಾಗಿ, ಲಕ್ಷ್ಮೀ ಪೂಜೆ, ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು, ದೈವಗಳಿಗೆ ಪರ್ಬ ತಂಬಿಲ, ಬಲಿಯೇಂದ್ರ ಪೂಜೆ, ಗೋ ಪೂಜೆ, ಭೂಮಿ ಪೂಜೆ, ಕೃಷಿ ಉಪಕರಣಗಳ ಆರಾಧನೆ ಹಾಗೂ ಪೂರ್ವಜರಿಗೆ ಅಗೇಲು ಸಲ್ಲಿಸುವವರೆಗೆ ಪ್ರತಿಯೊಂದು ಆಚರಣೆಯೂ ತುಳುನಾಡಿನ ಬದುಕಿನ ಒಂದೊಂದು ಮೌಲ್ಯವನ್ನು ಸಾರುತ್ತದೆ.

ದೀಪದ ಬೆಳಕು ಕೇವಲ ನಮ್ಮ ಕತ್ತಲೆಯನ್ನು ದೂರಮಾಡುವುದಿಲ್ಲ; ಅದು ನಮ್ಮ ಸಂಸ್ಕೃತಿ, ಪರಂಪರೆ, ನಂಬಿಕೆ ಮತ್ತು ಸಂಬಂಧಗಳನ್ನೂ ಬೆಳಗಿಸುತ್ತದೆ. ಇದೇ ತುಳುನಾಡಿನ ತುಡಾರ ಪರ್ಬದ ವಿಶೇಷತೆ.

Leave a Comment

Your email address will not be published. Required fields are marked *

error: Content is protected !!
Scroll to Top