ರೈತರ ಸರ್ವತೋಮುಖ ಪ್ರಗತಿಯಲ್ಲಿ ಸಹಕಾರಿ ಸಂಸ್ಥೆಗಳ ಪಾತ್ರ ಮಹತ್ವದ್ದು: ಶಾಸಕಿ ಭಾಗೀರಥಿ ಮುರುಳ್ಯ

**ಸುಳ್ಯ:** ಗ್ರಾಮೀಣ ಜನಜೀವನದಲ್ಲಿ ಆರ್ಥಿಕ ಸ್ವಾವಲಂಬನೆ ಮೂಡಿಸುವುದರ ಜೊತೆಗೆ ರೈತರ ಬದುಕಿಗೆ ಭದ್ರತೆ ಒದಗಿಸುವಲ್ಲಿ ಸಹಕಾರಿ ಸಂಸ್ಥೆಗಳು ಮಹತ್ತರ ಪಾತ್ರ ವಹಿಸಿವೆ. ದೇಶದ ಕೃಷಿಕರ ಆರ್ಥಿಕ ಮತ್ತು ಸಾಮಾಜಿಕ ಉನ್ನತಿಗೆ ಸಹಕಾರಿ ಕ್ಷೇತ್ರದ ಕೊಡುಗೆ ಅಪಾರ. ಸಹಕಾರ ಮನೋಭಾವನೆಯ ಮೂಲಕ ಸಮಾಜದಲ್ಲಿ ಜವಾಬ್ದಾರಿಯುತ ನಾಗರಿಕರ ನಿರ್ಮಾಣಕ್ಕೂ ಈ ಸಂಸ್ಥೆಗಳು ನೆರವಾಗಿವೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅಭಿಪ್ರಾಯಪಟ್ಟರು.





































































ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆಶ್ರಯದಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಹಾಗೂ ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಸಹಯೋಗದಲ್ಲಿ ಮಂಡೆಕೋಲಿನ ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ನಡೆದ ಜಿಲ್ಲಾ ಮಟ್ಟದ 73ನೇ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮ ಮತ್ತು ವಸ್ತುಪ್ರದರ್ಶನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

**ಪರಸ್ಪರ ಏಳಿಗೆಯ ಆಶಯವೇ ಸಹಕಾರದ ಶಕ್ತಿ**

ಕಾರ್ಯಕ್ರಮದ ಅಂಗವಾಗಿ ಸಹಕಾರ ಸಪ್ತಾಹದ ಜಾಥಾವನ್ನು ಉದ್ಘಾಟಿಸಿ, ಸಹಕಾರಿ ಕ್ಷೇತ್ರದ ಸಾಧಕರನ್ನು ಗೌರವಿಸಿ ಮಾತನಾಡಿದ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಎಸ್.ಎನ್. ಮನ್ಮಥ, ಸಹಕಾರ ಕ್ಷೇತ್ರದ ಮೂಲ ಆಶಯವೇ ಸಾಮೂಹಿಕ ಪ್ರಗತಿ ಎಂದರು.

ಒಬ್ಬರ ಬೆಳವಣಿಗೆಯೊಂದಿಗೆ ಮತ್ತೊಬ್ಬರ ಏಳಿಗೆಯನ್ನೂ ಸಾಧ್ಯವಾಗಿಸುವ ವಿಶಿಷ್ಟ ಗುಣ ಸಹಕಾರಿ ವ್ಯವಸ್ಥೆಯಲ್ಲಿದೆ. ಬ್ಯಾಂಕಿಂಗ್ ಹಾಗೂ ಖಾಸಗಿ ಹಣಕಾಸು ಸಂಸ್ಥೆಗಳ ಸ್ಪರ್ಧೆಯ ನಡುವೆಯೂ ಸಹಕಾರಿ ಸಂಘಗಳು ತಮ್ಮದೇ ಆದ ವಿಶ್ವಾಸಾರ್ಹತೆಯನ್ನು ಉಳಿಸಿಕೊಂಡು ಮುನ್ನಡೆಯುತ್ತಿವೆ. ಈ ಕ್ಷೇತ್ರದ ಬಲವರ್ಧನೆಗೆ ಎಲ್ಲರೂ ಸಂಘಟಿತ ಪ್ರಯತ್ನ ನಡೆಸಬೇಕೆಂದು ಅವರು ಕರೆ ನೀಡಿದರು.

ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಬಾಲ್ಯೊಟ್ಟು ಅಧ್ಯಕ್ಷತೆ ವಹಿಸಿದ್ದರು. ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಸಂತೋಷ್ ಶೆಟ್ಟಿ ಅವರು ‘ಸುಸ್ಥಿರ ಅಭಿವೃದ್ಧಿ ಮತ್ತು ಬೆಳವಣಿಗೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

**ಸಹಕಾರಿ ಕ್ಷೇತ್ರದ ಸಾಧಕರಿಗೆ ಗೌರವಾಭಿನಂದನೆ**

ಸಹಕಾರ ಚಳವಳಿಗೆ ವಿಶೇಷ ಕೊಡುಗೆ ನೀಡಿದ ಕ್ಯಾಂಪ್ಕೋ ನಿರ್ದೇಶಕ ಎ.ವಿ. ತೀರ್ಥರಾಮ, ಸುಳ್ಯ ಭೂ ಅಭಿವೃದ್ಧಿ ಬ್ಯಾಂಕ್‌ನ ಮಾಜಿ ಅಧ್ಯಕ್ಷ ಪ್ರಭಾಕರ ನಾಯಕ್, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿಶ್ವನಾಥ ನಾಯರ್ ಹಾಗೂ ಲೆಕ್ಕಪರಿಶೋಧನಾ ಇಲಾಖೆಯ ನಿವೃತ್ತ ಹಿರಿಯ ಉಪನಿರ್ದೇಶಕ ಬಾಲಸುಬ್ರಹ್ಮಣ್ಯ ಭಟ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಮಧ್ಯಾಹ್ನ ಆಯೋಜಿಸಿದ್ದ ಕೃಷಿ ಮಾಹಿತಿ ಕಾರ್ಯಾಗಾರದಲ್ಲಿ ಪ್ರಗತಿಪರ ಕೃಷಿ ತಜ್ಞ ಸುರೇಶ್ ಬಲ್ಯಾಡ್ ಅವರು ಕೃಷಿಗೆ ಸಂಬಂಧಿಸಿದ ಮಹತ್ವದ ಮಾಹಿತಿಗಳನ್ನು ಹಂಚಿಕೊಂಡರು.

ಮಂಡೆಕೋಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸುರೇಶ್ ಕಣೆಮರಡ್ಕ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪಾಧ್ಯಕ್ಷ ಪುರುಷೋತ್ತಮ ಕಾಡುಸೋರಂಜ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉದಯಕುಮಾರ್ ಜಿ., ದಕ್ಷಿಣ ಕನ್ನಡ ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ವಿಷ್ಣು ಭಟ್ ಮೂಲೆತೋಟ, ಸಹಕಾರ ಸಂಘಗಳ ಉಪನಿಬಂಧಕ ರಮೇಶ್ ಎಚ್.ಎನ್. ಹಾಗೂ ಸಂಘದ ನಿರ್ದೇಶಕರಾದ ಕೇಶವ ಮೂರ್ತಿ ಹೆಬ್ಬಾರ್, ಲಕ್ಷ್ಮಣ ಉಗ್ರಾಣಿಮನೆ, ಲಿಂಗಪ್ಪ ಗೌಡ ಬದಿಕಾನ, ಉಮೇಶ ಮಂಡೆಕೋಲು, ಅಶಿಕ್ ದೇವರಗುಂಡ, ರಾಜಣ್ಣ ಎಂ.ಕೆ., ಶಶಿಧರ ಕೆ., ಸದಾನಂದ ಮಡಿವಾಳಮೂಲೆ, ತುಳಸಿ ದೇವರಗುಂಡ ಮತ್ತು ಜಯಶ್ರೀ ಸಿ.ಎಸ್. ಉಪಸ್ಥಿತರಿದ್ದರು.

ಮಂಡೆಕೋಲು ಶಾಲೆಯ ವಿದ್ಯಾರ್ಥಿನಿಯರು ಪ್ರಾರ್ಥನೆ ಸಲ್ಲಿಸಿದರು. ಗಾಯಕ ಅಭಿಷೇಕ್ ಕಣೆಮರಡ್ಕ ವಂದೇ ಮಾತರಂ ಗೀತೆಯನ್ನು ಪ್ರಸ್ತುತಪಡಿಸಿದರೆ, ಹಿರಿಯ ಗಾಯಕ ಕೆ.ಆರ್. ಗೋಪಾಲಕೃಷ್ಣ ರೈತಗೀತೆಯನ್ನು ಹಾಡಿದರು. ಶಿಕ್ಷಕ ಗಣೇಶ್ ಜಾಲ್ಸೂರು ಹಾಗೂ ಶ್ರೀಮತಿ ಸಾವಿತ್ರಿ ಕಣೆಮರಡ್ಕ ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top