ಸುಳ್ಯ: ಐದು ದಶಕಗಳ ಶೈಕ್ಷಣಿಕ ಸೇವೆಯ ಮೂಲಕ ಗ್ರಾಮೀಣ ಭಾಗದ ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಬೆಳಕಾದ ಸುಳ್ಯದ ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವದ ಅಂಗವಾಗಿ, ಕಾಲೇಜಿನ ಹಿರಿಯ ವಿದ್ಯಾರ್ಥಿ ಸಂಘವು ಮಹತ್ವದ ಕೊಡುಗೆ ನೀಡಲು ಮುಂದಾಗಿದೆ.
ಕಾಲೇಜಿನ ಎದುರಿನ ಮೈದಾನದಲ್ಲಿ ಸುಮಾರು 40 ಲಕ್ಷ ರೂ. ವೆಚ್ಚದಲ್ಲಿ ಸಂಪೂರ್ಣ ಬೆಳಕಿನ ವ್ಯವಸ್ಥೆ ಕಲ್ಪಿಸುವ ‘ಸುವರ್ಣ ದೀಪ’ ಯೋಜನೆಯನ್ನು ಅನುಷ್ಠಾನಗೊಳಿಸಲು ಸಂಘ ನಿರ್ಧರಿಸಿದೆ.
ನ.21ರಂದು ಕಾಲೇಜಿನ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಟಿ. ವಿಶ್ವನಾಥ್ ಅವರು, ತಾವು ವಿದ್ಯಾಭ್ಯಾಸ ಮಾಡಿದ ಸಂಸ್ಥೆಗೆ ಸುವರ್ಣ ಮಹೋತ್ಸವದ ಸಂದರ್ಭದಲ್ಲಿ ಶಾಶ್ವತ ಕೊಡುಗೆ ನೀಡಬೇಕೆಂಬ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಸಂಘದ ಸಭೆಯಲ್ಲಿ ಯೋಜನೆಯ ಕುರಿತು ಚರ್ಚೆ ನಡೆಸಲಾಗಿದ್ದು, ಹಿರಿಯ ವಿದ್ಯಾರ್ಥಿಗಳ ಸಹಭಾಗಿತ್ವದಲ್ಲಿ ಮೈದಾನಕ್ಕೆ ಸಮಗ್ರ ಬೆಳಕಿನ ವ್ಯವಸ್ಥೆ ಕಲ್ಪಿಸಲು ತೀರ್ಮಾನಿಸಲಾಗಿದೆ. ಇದರಿಂದ ಕಾಲೇಜಿನ ಕ್ರೀಡಾ ಚಟುವಟಿಕೆಗಳು ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚಿನ ಅನುಕೂಲವಾಗಲಿದೆ. ಸುಮಾರು 40 ಲಕ್ಷ ರೂ. ವೆಚ್ಚದ ಈ ಯೋಜನೆಗೆ ಹಿರಿಯ ವಿದ್ಯಾರ್ಥಿಗಳು ಉದಾರವಾಗಿ ಧನಸಹಾಯ ನೀಡಿ ಸಹಕರಿಸಬೇಕೆಂದು ಅವರು ಮನವಿ ಮಾಡಿದರು.
**ಡಿ.27ರಂದು ಹಿರಿಯ ವಿದ್ಯಾರ್ಥಿಗಳ ಸುವರ್ಣ ಸಮ್ಮಿಲನ**
ನೆಹರೂ ಮೆಮೋರಿಯಲ್ ಕಾಲೇಜಿನ ಸುವರ್ಣ ಮಹೋತ್ಸವ ಸಂಭ್ರಮವು ಡಿ.26, 27 ಮತ್ತು 28ರಂದು ನಡೆಯಲಿದೆ. ಇದರ ಅಂಗವಾಗಿ ಡಿ.27ರಂದು ಹಿರಿಯ ವಿದ್ಯಾರ್ಥಿಗಳ ಸುವರ್ಣ ಸಮ್ಮಿಲನ ಆಯೋಜಿಸಲಾಗಿದೆ.
ಕಾಲೇಜಿನ ಹಳೆಯ ನೆನಪುಗಳನ್ನು ಮೆಲುಕು ಹಾಕುವ ಕಾರ್ಯಕ್ರಮ, ಸಾಂಸ್ಕೃತಿಕ ಪ್ರದರ್ಶನ ಹಾಗೂ ಸಭಾ ಕಾರ್ಯಕ್ರಮಗಳು ಸಮ್ಮಿಲನದ ಪ್ರಮುಖ ಆಕರ್ಷಣೆಯಾಗಿರಲಿವೆ. ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ ಎಲ್ಲ ಹಿರಿಯ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ವಿಶ್ವನಾಥ್ ಆಹ್ವಾನಿಸಿದರು.
ಅಂದು ನಡೆಯುವ ಸಭಾ ಕಾರ್ಯಕ್ರಮದಲ್ಲಿ ‘ಸುವರ್ಣ ದೀಪ’ ಯೋಜನೆಗೆ ಗುದ್ದಲಿಪೂಜೆ ನೆರವೇರಿಸಲಾಗುವುದು ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ಕಾರ್ಯದರ್ಶಿ ಮಧುರ ಎಂ.ಆರ್., ಪೂರ್ವಾಧ್ಯಕ್ಷರಾದ ಎಸ್.ಎನ್. ಮನ್ಮಥ, ಚಂದ್ರ ಕೋಲ್ಟಾರ್, ಕಾಲೇಜಿನ ಪ್ರಾಂಶುಪಾಲ ಡಾ. ಎಂ.ಎಂ. ರುದ್ರಕುಮಾರ್, ಹಿರಿಯ ವಿದ್ಯಾರ್ಥಿಗಳಾದ ಎನ್. ಜಯಪ್ರಕಾಶ್ ರೈ, ಸುಧಾಕರ ರೈ ಪಿ.ಬಿ., ಚಂದ್ರಶೇಖರ ಪೇರಾಲು, ದೊಡ್ಡಣ್ಣ ಬರೆಮೇಲು, ಎಸ್. ಸಂಶುದ್ದೀನ್, ರತ್ನಾವತಿ ಕೇರ್ಪಳ, ಕುಲದೀಪ್ ಪೆಡ್ಕ, ಎ.ಟಿ. ಕುಸುಮಾಧರ, ರಜತ್ ಅಡ್ಕಾರ್, ವಿನುತಾ ಪಾತಿಕಲ್ಲು, ಚಂದ್ರಾವತಿ ಬಡ್ಡಡ್ಕ, ಪ್ರವೀಣ್ ಕುಂಟಿಯಾನ, ಜೋತ್ಸಾ ಸೇರ್ಕಜೆ, ರಮ್ಯ, ಅಕ್ಷತಾ, ಸನ್ನಿತ, ಲಾವಣ್ಯ ಮತ್ತಿತರರು ಉಪಸ್ಥಿತರಿದ್ದರು.








































