ಸುಳ್ಯ: ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಸಂಬಂಧಿಸಿದಂತೆ ಸರಕಾರ ಈ ಹಿಂದೆ ಪ್ರಕಟಿಸಿದ್ದ ಮೀಸಲಾತಿ ಪಟ್ಟಿಗೆ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಬಳಿಕ ಅಂತಿಮ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಲಾಗಿದೆ. ಇದರೊಂದಿಗೆ ಸುಳ್ಯ ತಾಲೂಕಿನಲ್ಲಿ ಜಿಲ್ಲಾ ಪಂಚಾಯತ್ ಕ್ಷೇತ್ರವೊಂದರ ಮೀಸಲಾತಿಯಲ್ಲಿ ಬದಲಾವಣೆಯಾಗಿದೆ.
ಸುಳ್ಯ ತಾಲೂಕಿನ ಮೂರು ಜಿಲ್ಲಾ ಪಂಚಾಯತ್ ಕ್ಷೇತ್ರಗಳ ಪೈಕಿ ಜಾಲ್ಲೂರು ಕ್ಷೇತ್ರವನ್ನು ಸಾಮಾನ್ಯ ವರ್ಗಕ್ಕೆ ಮೀಸಲಿಡಲಾಗಿದ್ದು, ಬೆಳ್ಳಾರೆ ಹಾಗೂ ಗುತ್ತಿಗಾರು ಕ್ಷೇತ್ರಗಳು ಸಾಮಾನ್ಯ ಮಹಿಳೆಗೆ ಮೀಸಲಾಗಿವೆ.
ಈ ಹಿಂದೆ ಪ್ರಕಟಿಸಲಾಗಿದ್ದ ಕರಡು ಪಟ್ಟಿಯಲ್ಲಿ ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರವನ್ನು ಹಿಂದುಳಿದ ವರ್ಗ ಎಗೆ ಮೀಸಲಿಡಲಾಗಿತ್ತು. ಆದರೆ, ಈ ಮೀಸಲಾತಿಗೆ ಆಕ್ಷೇಪಣೆಗಳು ಸಲ್ಲಿಕೆಯಾಗಿದ್ದ ಹಿನ್ನೆಲೆಯಲ್ಲಿ ಪರಿಶೀಲನೆ ನಡೆಸಿ ಇದೀಗ ಅಂತಿಮ ಪಟ್ಟಿಯಲ್ಲಿ ಗುತ್ತಿಗಾರು ಕ್ಷೇತ್ರವನ್ನು ಸಾಮಾನ್ಯ ಮಹಿಳೆಗೆ ಮೀಸಲಿಟ್ಟು ಅಧಿಸೂಚನೆ ಹೊರಡಿಸಲಾಗಿದೆ.
ತಾಲೂಕು ಪಂಚಾಯತ್ ಮೀಸಲಾತಿಯಲ್ಲಿ ಬದಲಾವಣೆ ಇಲ್ಲ
ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿಯಲ್ಲಿ ಯಾವುದೇ ಬದಲಾವಣೆ ಮಾಡಲಾಗಿಲ್ಲ. ಈ ಹಿಂದೆ ಪ್ರಕಟಿಸಿದ್ದ ಮೀಸಲಾತಿ ಪಟ್ಟಿಯನ್ನೇ ಅಂತಿಮಗೊಳಿಸಲಾಗಿದೆ.
ಅದರಂತೆ ತಾಲೂಕಿನ 11 ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ವಿವರ ಹೀಗಿದೆ:
- ಬೆಳ್ಳಾರೆ – ಅನುಸೂಚಿತ ಜಾತಿ
- ಬಾಳಿಲ – ಸಾಮಾನ್ಯ ಮಹಿಳೆ
- ಐವರ್ನಾಡು – ಸಾಮಾನ್ಯ
- ಜಾಲ್ಲೂರು – ಸಾಮಾನ್ಯ ಮಹಿಳೆ
- ಅಜ್ಜಾವರ – ಅನುಸೂಚಿತ ಜಾತಿ ಮಹಿಳೆ
- ಆಲೆಟ್ಟಿ – ಅನುಸೂಚಿತ ಪಂಗಡ ಮಹಿಳೆ
- ಅರಂತೋಡು – ಹಿಂದುಳಿದ ವರ್ಗ ಎ ಮಹಿಳೆ
- ಮಡಪ್ಪಾಡಿ – ಸಾಮಾನ್ಯ
- ನೆಲ್ಲೂರು ಕೆಮ್ರಾಜೆ – ಸಾಮಾನ್ಯ ಮಹಿಳೆ
- ಗುತ್ತಿಗಾರು – ಹಿಂದುಳಿದ ವರ್ಗ ಎ
- ಪಂಜ – ಸಾಮಾನ್ಯ
ಜಿಲ್ಲಾ ಪಂಚಾಯತ್ ಕ್ಷೇತ್ರದ ಮೀಸಲಾತಿಯಲ್ಲಿ ಬದಲಾವಣೆಯಾಗಿರುವುದು ಇದೀಗ ಸ್ಥಳೀಯ ರಾಜಕೀಯ ವಲಯದಲ್ಲಿ ಗಮನ ಸೆಳೆದಿದ್ದು, ತಾಲೂಕು ಪಂಚಾಯತ್ ಕ್ಷೇತ್ರಗಳ ಮೀಸಲಾತಿ ಮಾತ್ರ ಯಥಾಸ್ಥಿತಿಯಲ್ಲಿ ಮುಂದುವರಿದಿದೆ.








































