ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸುಳ್ಯದಲ್ಲಿ ಸೇವಾದಿನ ಆಚರಣೆ

ಸುಳ್ಯ: ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಪರಮಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಜನ್ಮದಿನದ ಪ್ರಯುಕ್ತ ಸುಳ್ಯದಲ್ಲಿ ವಿವಿಧ ಸೇವಾ ಚಟುವಟಿಕೆಗಳೊಂದಿಗೆ ಸೇವಾದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದರ ಅಂಗವಾಗಿ ಒಟ್ಟು 15 ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.









































































ಸುಳ್ಯದ ಎಂ.ಬಿ. ಫೌಂಡೇಶನ್‌ನ ಸಾಂದೀಪ ವಿಶೇಷ ಮಕ್ಕಳ ಶಾಲೆಯಲ್ಲಿ ವಿಶೇಷ ಮಕ್ಕಳಿಗೆ ಮಧ್ಯಾಹ್ನದ ಭೋಜನದ ವ್ಯವಸ್ಥೆ ಮಾಡುವ ಮೂಲಕ ಪೂಜ್ಯರ ಜನ್ಮದಿನವನ್ನು ಆಚರಿಸಲಾಯಿತು.

ಇದೇ ಸಂದರ್ಭದಲ್ಲಿ ಮಾಸಾಶನ ಪಡೆಯುತ್ತಿರುವ ಪಂಜದ ಪರಮೇಶ್ವರ ನಾಯ್ಕ, ಸುಳ್ಯ ವಲಯದ ಕುಡೆಕಲ್ಲು ಬೊಗ್ರ ಹಾಗೂ ಬಡ್ಡಡ್ಕದ ಪುಷ್ಪಾವತಿ ಅವರಿಗೆ ದಿನಬಳಕೆಯ ಅಗತ್ಯ ಸಾಮಗ್ರಿಗಳನ್ನು ವಿತರಿಸಲಾಯಿತು.

ಪೂಜ್ಯರ ಜನ್ಮದಿನದ ಅಂಗವಾಗಿ ಸುಳ್ಯ ವ್ಯಾಪ್ತಿಯ ಎಂಟು ದೇವಸ್ಥಾನಗಳಲ್ಲಿ ರುದ್ರಾಭಿಷೇಕ ಹಾಗೂ ವಿಶೇಷ ಪೂಜೆಗಳನ್ನು ಸಲ್ಲಿಸಲಾಯಿತು. ಅಲ್ಲದೆ, ಜಾಲ್ಸೂರಿನ ಅಡ್ಕಾರು ವನವಾಸಿ ವಿದ್ಯಾರ್ಥಿ ನಿಲಯದ 28 ವಿದ್ಯಾರ್ಥಿಗಳಿಗೆ ದಿನಸಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಸೇವಾ ಕಾರ್ಯ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಯೋಜನಾಧಿಕಾರಿಗಳು, ಜನಜಾಗೃತಿ ಪದಾಧಿಕಾರಿಗಳು, ಶೌರ್ಯ ವಿಪತ್ತು ನಿರ್ವಹಣಾ ಘಟಕದ ಸದಸ್ಯರು, ನವಜೀವನ ಸಮಿತಿ ಸದಸ್ಯರು, ಮೇಲ್ವಿಚಾರಕರು, ಕಚೇರಿ ಸಿಬ್ಬಂದಿಗಳು ಹಾಗೂ ಸೇವಾಪ್ರತಿನಿಧಿಗಳು ಉಪಸ್ಥಿತರಿದ್ದರು.

ಸೇವೆ, ಸಹಕಾರ ಮತ್ತು ಮಾನವೀಯ ಮೌಲ್ಯಗಳ ಮೂಲಕ ಜನ್ಮದಿನವನ್ನು ಸಮಾಜಮುಖಿಯಾಗಿ ಆಚರಿಸುವ ಕಾರ್ಯಕ್ಕೆ ಈ ಕಾರ್ಯಕ್ರಮ ಸಾಕ್ಷಿಯಾಯಿತು.

Leave a Comment

Your email address will not be published. Required fields are marked *

error: Content is protected !!
Scroll to Top