ಹಲಸಿನ vಉತ್ಪನ್ನಗಳಿಗೆವ ಸಾಕಾಷ್ಟು ಬೇಡಿಕೆಗಳಿದ್ದು ಅವಕಾಶಗಳು ನಮ್ಮ ಮುಂದೆ ಇದೆ. ಲಕ್ಷಾಂತರ ರೂ ಬಂಡವಾಳ ಹೂಡಿಕೆ ಮಾಡಿಯೇ ಹಲಸಿನ ಮೌಲ್ಯವರ್ಧನೆ ಮಾಡಬೇಕೆಂದಿಲ್ಲ. ಸರಳ ವಿಧಾನದಿಂದಲೂ ಹಲಸಿನಿಂದ ಉತ್ತಮ ಆಧಾಯ ಪಡೆಯಬಹುದು ಎಂದು ಅಡಿಕೆ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕ ಶ್ರೀಪಡ್ರೆ ಹೇಳಿದರು.
ಅವರು ಟೀಮ್ ಉಬಾರ್, ಸುಳ್ಯ ರೈತ ಉತ್ಪಾದಕ ಕಂಪೆನಿ ಸುಳ್ಯ, ಪ್ರಣವ ಸೌಹಾರ್ದ ಸಹಕಾರಿ ಸಂಘ ಮತ್ತು ಸುದ್ದಿ ಕೃಷಿ ಅರಿವು ಕೇಂದ್ರ ಇವರ ಜಂಟಿ ಆಶ್ರಯದಲ್ಲಿ ಸ್ಥಳೀಯ ತಾಲೂಕು ಆಡಳಿತ,ತಾಲೂಕು ಪಂಚಾಯತ್, ಕೃಷಿ ಸಂಬಂಧಿತ ಸರಕಾರಿ ಇಲಾಖೆಗಳು ಹಾಗೂ ಸಹಕಾರಿ ಸಂಘಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಸುಳ್ಯದ ಕೇರ್ಪಳ ಶ್ರೀ ದುರ್ಗಾಪರಮೇಶ್ವರಿ ಕಲಾ ಮಂದಿರದ ವಠಾರದಲ್ಲಿ ಏರ್ಪಡಿಸಲಾದ 3 ದಿನಗಳ ಹಲಸು ಮತ್ತು ಮಾವು ಮೇಳದ ಅಂಗವಾಗಿ ಜೂ. 12 ರಂದು ನಡೆದ ಹಲಸು- ಮಾವು-ಗೇರು ಮೌಲ್ಯವರ್ಧಿತ ಉತ್ಪನ್ನಗಳ ಕುರಿತ ವಿಚಾರಗೋಷ್ಠಿಯಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು.
ಹಲಸಿನ ಗುಜ್ಜೆ, ತೋಳೆಗಳನ್ನು ಅಡುಗೆ ಮಾಡಲು ತಯಾರಾದ ರೀತಿಯಲ್ಲಿ ಮತ್ತು ತಿನ್ನಲು ತಯಾರು ಮಾಡಿ ಮಾರುಕಟ್ಟೆಗೆ ಬಿಟ್ಟಲ್ಲಿ ಉತ್ತಮ ಆದಾಯ ಪಡೆಯಬಹುದು ಎಂದು ಹೇಳಿದರು.
ಮಾಜಿ ವಿಧಾನ ಪರಿಷತ್ ಸದಸ್ಯ ಅಣ್ಣಾ ವಿನಯಚಂದ್ರ ಅಧ್ಯಕ್ಷತೆ ವಹಿಸಿದ್ದರು. ಪ್ರಣವ ಸೌಹಾರ್ದ ಸಹಕಾರಿ ಸಂಘದ ಉಪಾಧ್ಯಕ್ಷ ಪ್ರಶಾಂತ್ ಪೈ, ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕ ಗುರುಪ್ರಸಾದ್ ಎಂ.ಎಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶ್ವೇತಾ ಕಾರ್ಯಕ್ರಮ ನಿರೂಪಿಸಿದರು. ಪ್ರಣವ ಸೊಸೈಟಿ ನಿರ್ದೇಶಕ ಸೋಮಪ್ಪ ನಾಯ್ಕ ವಂದಿಸಿದರು.



























































