ಮಂಗಳೂರು: ನಾಗುರಿಯಲ್ಲಿ ಸಂಭವಿಸಿದ ಕಾಂಪೌಂಡ್ ಗೋಡೆ ಕುಸಿತ ದುರಂತದಲ್ಲಿ ಗಾಯಗೊಂಡು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆಗೆ ದಾಖಲಾಗಿರುವ ಸಂತ್ರಸ್ತರನ್ನು ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಭೇಟಿ ಮಾಡಿ, ಆರೋಗ್ಯ ವಿಚಾರಿಸಿದರು.
ಆಸ್ಪತ್ರೆಗೆ ಭೇಟಿ ನೀಡಿದ ಸಂಸದರು, ದುರಂತದಿಂದ ಬದುಕುಳಿದು ಸದ್ಯ ಚಿಕಿತ್ಸೆ ಪಡೆಯುತ್ತಿರುವ ಬಾಲಕೃಷ್ಣ ಮತ್ತು ಮಕ್ಕಳಾದ ಅಲ್ಕಾ ಹಾಗೂ ಅನುಷಾ ಅವರ ಆರೋಗ್ಯ ಸ್ಥಿತಿಯ ಬಗ್ಗೆ ವೈದ್ಯರಿಂದ ಮಾಹಿತಿ ಪಡೆದು, ಸಂತ್ರಸ್ತ ಕುಟುಂಬಕ್ಕೆ ಧೈರ್ಯ ತುಂಬಿದರು.
ನಾಗುರಿ ಬಳಿ ನಡೆದ ಈ ಘಟನೆ ಅತ್ಯಂತ ದುರದೃಷ್ಟಕರ ಹಾಗೂ ಮನನೋಯಿಸುವಂಥದ್ದಾಗಿದೆ. ದುರಂತದಲ್ಲಿ ಮೂವರು ಜೀವ ಕಳೆದುಕೊಂಡಿರುವುದು ತೀವ್ರ ಬೇಸರ ತಂದಿದೆ. ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ವಿಚಾರಿಸಿ ದೈರ್ಯ ತುಂಬಿದ್ದು, ಅವರಿಗೆ ಅಗತ್ಯವಿರುವ ಎಲ್ಲಾ ರೀತಿಯ ವೈದ್ಯಕೀಯ ನೆರವು ಹಾಗೂ ಜಿಲ್ಲಾಡಳಿತದ ವತಿಯಿಂದ ಸಿಗಬೇಕಾದ ಗರಿಷ್ಠ ಪರಿಹಾರವನ್ನು ಶೀಘ್ರವಾಗಿ ಒದಗಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ದುರಂತದಿಂದಾಗಿ ಆ ಕುಟುಂಬಕ್ಕೆ ಆಸರೆಯೇ ಇಲ್ಲದಂತಾಗಿದೆ. ಹೀಗಾಗಿ, ತಕ್ಷಣವೇ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಪುನರ್ವಸತಿ ವ್ಯವಸ್ಥೆಯನ್ನು ಒದಗಿಸಬೇಕು ಎಂದು ಇದೇ ವೇಳೆ ಸಂಸದರು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
*ಘಟನಾ ಸ್ಥಳಕ್ಕೆ ಭೇಟಿ:*
ದೆಹಲಿಯಿಂದ ಬಂದಿಳಿದ ಸಂಸದ ಕ್ಯಾ. ಚೌಟ ಆಸ್ಪತ್ರೆಯ ಭೇಟಿಯ ಬಳಿಕ ನೇರವಾಗಿ ದುರಂತ ನಡೆದ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯ ಅವಲೋಕನ ನಡೆಸಿದರು. ಸ್ಥಳೀಯರಿಂದ ಘಟನೆಯ ಸಂಪೂರ್ಣ ವಿವರಗಳನ್ನು ಪಡೆದುಕೊಂಡ ಅವರು, ನೊಂದ ಕುಟುಂಬಗಳಿಗೆ ಸಾಂತ್ವನ ಹೇಳಿದರು.






























































