ಕು‌ರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್‌ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವು

ಕು‌ರ್ ಕುರೆ ಪ್ಯಾಕೆಟ್‌ನಲ್ಲಿದ್ದ ಪ್ಲಾಸ್ಟಿಕ್‌ ಬಾಲ್ ಗಂಟಲಿಗೆ ಸಿಲುಕಿ ಮಗು ಸಾವನ್ನಪ್ಪಿದ ಘಟನೆ ಮೈಸೂರು ಜಿಲ್ಲೆ ಹುಣಸೂರು ತಾಲೂಕಿನ ಗೌರಿಪುರದಲ್ಲಿ ಶನಿವಾರ ನಡೆದಿದೆ.
ಸಾವನ್ನಪ್ಪಿದ ಮಗುವನ್ನು 3 ವರ್ಷದ ಮಗು ಮುಕುಂದ್ ಮಯೂರ್ ಎಂದು ಗುರುತಿಸಲಾಗಿದೆ.
ಮೃತ ಮಗು ಗೌರಿಪುರ ಗ್ರಾಮದ ಸಂತೋಷ್ – ಐಶ್ವರ್ಯ ದಂಪತಿಯ ಏಕೈಕ ಪುತ್ರನಾಗಿದೆ.
ಶನಿವಾರ ಮಗು ಅಳುತ್ತಿದ್ದುದನ್ನು ಕಂಡು ಸಂಬಂಧಿಕರ ಮಕ್ಕಳು ಗೌರಿಪುರದ ಅಂಗಡಿಯಿಂದ ಕುರ್ ಕುರೆ ಪ್ಯಾಕೆಟ್ ತಂದು ಕೊಟ್ಟಿದ್ದಾರೆ. ಪ್ಯಾಕೆಟ್‌ನಲ್ಲಿ ಮಕ್ಕಳ ಆಕರ್ಷಣೆಗಾಗಿ ಇದ್ದ ಪ್ಲಾಸ್ಟಿಕ್ ಬಾಲ್ ಅನ್ನು ಮಗು ಕುರ್ ಕುರೆಯೊಂದಿಗೆ ನುಂಗಿದೆ. ಆ ಬಾಲ್ ಗಂಟಲಿಗೆ ಅಡ್ಡವಾಗಿ ಸಿಲುಕಿ ಮಗು ಉಸಿರಾಡಲು ಪರದಾಡತೊಡಗಿತು.
ಪರಿಸ್ಥಿತಿಯ ಗಂಭೀರತೆ ಅರಿತ ಪೋಷಕರು ಕೂಡಲೇ ಮಗುವನ್ನು ಹುಣಸೂರಿನ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಆದರೆ ಆಸ್ಪತ್ರೆಗೆ ತಲುಪುವಷ್ಟರಲ್ಲಿ ಮಾರ್ಗಮಧ್ಯದಲ್ಲೇ ಮಗು ಉಸಿರುಗಟ್ಟಿ ಸಾವನ್ನಪ್ಪಿದೆ ಎಂದು ಕುಟುಂಬದವರು ತಿಳಿಸಿದ್ದಾರೆ.
ಕೃಷಿಕನಾದ ಸಂತೋಷ್ ಹಾಗೂ ಐಶ್ವರ್ಯ ದಂಪತಿಗೆ ಮದುವೆಯಾಗಿ 5 ವರ್ಷಗಳ ನಂತರ ಈ ಗಂಡು ಮಗು ಜನಿಸಿತ್ತು. ಎಲ್.ಕೆ.ಜಿ ಓದುತ್ತಿದ್ದ ಮುಕುಂದ್ ಮಯೂರ್ ತನ್ನ ತಾತನ ಸಹೋದರನ ಮನೆಯ ಕಾರ್ಯಕ್ರಮಕ್ಕೆಂದು ಗುರುವಾರದಿಂದ ಅಲ್ಲೇ ಇದ್ದನು. ಶನಿವಾರ ಈ ದುರಂತ ನಡೆದಿದೆ.ಮಗುವಿನ ಅಕಾಲಿಕ ಸಾವಿನ ಸುದ್ದಿ ತಿಳಿದು ಇಡೀ ಗ್ರಾಮದಲ್ಲಿ ಶೋಕ ಮನೆ ಮಾಡಿದೆ. ಸುತ್ತಮುತ್ತಲಿನ ಗ್ರಾಮಸ್ಥರು ಮೃತನ ಮನೆಗೆ ಧಾವಿಸಿ ಕಂಬನಿ ಮಿಡಿದರು.ಈ ದುರ್ಘಟನೆಗೆ ನೇರ ಹೊಣೆಯಾರು ಎಂಬ ಪ್ರಶ್ನೆ ಸಾರ್ವಜನಿಕರನ್ನು ಕಾಡುತ್ತಿದೆ.’ಇನ್ನು ಮುಂದೆ ತಿಂಡಿ-ತಿನಿಸುಗಳ ಜೊತೆ ಕಂಪನಿಗಳು ಆಕರ್ಷಣೆಗಾಗಿ ಯಾವುದೇ ರೀತಿಯ ಆಟಿಕೆ ಅಥವಾ ಪ್ಲಾಸ್ಟಿಕ್ ವಸ್ತುಗಳನ್ನು ಹಾಕದಂತೆ ಕಠಿಣ ನಿಯಮ ಜಾರಿಗೆ ತರಬೇಕು. ಸಂಬಂಧಪಟ್ಟ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು” ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.



















Leave a Comment

Your email address will not be published. Required fields are marked *

error: Content is protected !!
Scroll to Top