ಸಂಸತ್ತಿನ ಮಳೆಗಾಲದ ಅಧಿವೇಶನಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ನಾಪತ್ತೆ: ಅಮಳ ರಾಮಚಂದ್ರ

ಇತ್ತೀಚೆಗೆ ಸಂಸತ್ತಿನ ಮಳೆಗಾಲದ ಅಧಿವೇಶನದಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಎಲ್ಲಿದ್ದಾರೆ ಎಂಬ ಪ್ರಶ್ನೆ ಇಡೀ ದೇಶದಲ್ಲಿ ಮತ್ತೆ ಮತ್ತೆ ಕೇಳಿ ಬರುತ್ತಿತ್ತು. 19 ದಿನಗಳ ಕಾಲ ಭಾರತದ ಪಾರ್ಲಿಮೆಂಟಿನಲ್ಲಿ ನಡೆದ ಸಂಸತ್ ಅಧಿವೇಶನದಲ್ಲಿ ಅವರಿಬ್ಬರೂ ಅಧಿವೇಶನದ ಕೊನೆಯ ದಿನದವರೆಗೆ ನಾಪತ್ತೆಯಾಗಿದ್ದರು ಎಂದು ಕೆ.ಪಿ.ಸಿ.ಸಿ ವಕ್ತಾರ
ಅಮಳ ರಾಮಚಂದ್ರ ಹೇಳಿದ್ದಾರೆ.
ಅವರು‌ ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಆ.2೦ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಕಟ್ಟಕಡೆಗೆ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅಧಿವೇಶನದ ಕೊನೆಯ ದಿನ ಹಾಜರಾಗಿ ಒಂದು ಇಡೀ ಅಧಿವೇಶನಕ್ಕೆ ಪೂರ್ತಿಯಾಗಿ ಗೈರುಹಾಜರಾದ ಪ್ರಧಾನಿ ಮತ್ತು ಗೃಹ ಸಚಿವ ಎಂಬ ಕುಖ್ಯಾತಿಯಿಂದ ಪಾರಗುವ ವಿಫಲ ಪ್ರಯತ್ನ ಮಾಡಿದರು. ಆದರೆ ಕೊನೆಯ ದಿನ ಅಧಿವೇಶನ ಆರಂಭದಲ್ಲಿ ವಂದೇ ಮಾತರಂ ಹಾಡಿದ ತಕ್ಷಣ ಸದನದ ಅಧ್ಯಕ್ಷರಾದ ಓಂ ಬಿರ್ಲಾ ಪೂರ್ವನಿರ್ಧರಿತ ತೀರ್ಮಾನವೇನೋ ಎನ್ನಿಸುವಂತೆ ಸದನವನ್ನು ಅನಿರ್ಧಿಷ್ಟಾವಧಿಗೆ ಮುಂದೂಡುವ ಮೂಲಕ ಸದನಕ್ಕೆ ಬಂದರೂ ಬಾರದ ಭಾರತದ ಮೊತ್ತ ಮೊದಲ ಪ್ರಧಾನಿ ಮತ್ತು ಗೃಹಸಚಿವ ಎಂಬ ಅವಮಾನಕ್ಕೆ ಅವರು ಈಡಾಗುವಂತೆ ಆಯಿತು.
ಮೋದಿ ಮತ್ತು ಶಾ ಹೊಸ ಇತಿಹಾಸವೊಂದನ್ನು ಬರೆದಿದ್ದಾರೆ. ಭಾರತದ ಇತಹಾಸದಲ್ಲಿ ಇಂದಿನವರೆಗೆ ಹೀಗೆ ಸಂಸತ್ ಅಧಿವೇಶನವನ್ನು ಎದುರಿಸುವುದಕ್ಕೆ ಹೆದರಿ ಅಧಿವೇಶನದಿಂದ ಪಲಾಯನ ಮಾಡಿದ ಒಬ್ಬನೇ ಒಬ್ಬ ಗೃಹ ಸಚಿವರೂ ಇಲ್ಲ, ಒಬ್ಬನೇ ಒಬ್ಬ ಪ್ರಧಾನಮಂತ್ರಿಯೂ ಇಲ್ಲ ! ಇಡೀ ವಿಶ್ವದಲ್ಲಿಯೇ ಇದೊಂದು ಅಳಿಸಲಾಗದ ನಾಚಿಕೆಗೇಡಿನ ದಾಖಲೆಯಾಗಿ ಶಾಶ್ವತವಾಗಿ ಉಳಿಯಲಿದೆ. ಇವರು ನಿಜವಾಗಿಯೂ ಪಲಾಯನದ ವಿಶ್ವಗುರುಗಳೇ ಆಗಿದ್ದಾರೆ. ಈ ದಾಖಲೆಗಾಗಿ ಮೋದಿ – ಶಾ ಜೋಡಿಗೆ ಅಭಿನಂದನೆಗಳನ್ನು ಸಲ್ಲಿಸುತ್ತೇವೆ.
ಅಧಿವೇಶನದ ಸಮಯದಲ್ಲಿ, ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಇವರಿಬ್ಬರೂ ಸಂಸತ್‌ಭವನದ ಕಟ್ಟಡಕ್ಕೆ ಬರುತ್ತಾರೆ, ಅಧಿವೇಶನ ನಡೆಯುತ್ತಿರುವ ಸಭಾಭವನದ ಪಕ್ಕದಲ್ಲೇ ಇರುವ ತಮ್ಮ ಕಛೇರಿಯಲ್ಲಿ ಬೆಳಗ್ಗಿನಿಂದ ಸಂಜೆಯವರೆಗೂ ಕುಳಿತುಕೊಳ್ಳುತ್ತಾರೆ, ಎನ್‌ಡಿಎಗೆ ಪಕ್ಷಕ್ಕೆ ಪಕ್ಷಾಂತರ ಮಾಡಿದ ಸಂಸದರೊಂದಿಗೆ ಸಭೆ ನಡೆಸುತ್ತಾರೆ. ಬೆಳಗ್ಗಿನಿಂದ ಸಂಜೆಯವರೆಗೆ ಸಂಸತ್ತನ್ನು ಹೇಗೆ ಎದುರಿಸಲಿ ಎಂದು ತಲೆ ಕೆರೆದುಕೊಳ್ಳುತ್ತಾರೆ, ಆದರೆ ಅಪ್ಪಿ ತಪ್ಪಿಯೂ ಸಂಸದ್ ಅಧಿವೇಶನದಲ್ಲಿ ಭಾಗವಹಿಸುವ ಮನಸ್ಸು ಮಾಡಲಿಲ್ಲ. ಸಂಸತ್ ಅಧಿವೇಶನಕ್ಕೆ ಹೋದರೆ ವಿರೋಧ ಪಕ್ಷಗಳು ಜನ್ಮ ಜಾಲಾಡುತ್ತವೆ, ಹೋಗದೇ ಇದ್ದರೆ ದೇಶದ ಜನ ಉಗಿದು ಉಪ್ಪಿನಕಾಯಿ ಹಾಕುತ್ತಾರೆ ! ಅತ್ತ ಸಂಸತ್ತಿಗೆ ಹೋಗುವಂತೆಯೂ ಇಲ್ಲ, ಹೋಗದೇ ಇರುವಂತೆಯೂ ಇಲ್ಲ. ಇಂತಹಾ ಶೋಚನೀಯ ಪರಿಸ್ಥಿತಿಯಲ್ಲಿ ಸಿಲುಕಿಕೊಂಡಿದ್ದರು.

























ಭಯವೂ ಅಹಂಕಾರವೂ ಏಕಕಾಲದಲ್ಲಿ ಮೂಡಿಬಂದರೆ ವ್ಯಕ್ತಿಯೊಬ್ಬ ಏನು ಮಾಡಬಹುದೋ ಅದನ್ನೇ ಈ ಮೋದಿ – ಶಾ ಜೋಡಿ ಮಾಡಿದೆ. 2 ವಿಷಯಗಳಿಗೆ ಭಯ
ಒಂದು ಧರ್ಮಕ್ಕೆ ಸಂಬಂಧಿಸಿದ್ದಾದರೆ ಇನ್ನೊಂದು ದೇಶಕ್ಕೆ ಸಂಬಂಧಿಸಿದ್ದು ! ಒಂದು ದೇವರಿಗೆ ಸಂಬಂಧಿಸಿದ್ದಾದರೆ ಇನ್ನೊಂದು ವಿದ್ಯಾರ್ಥಿಗಳಿಗೆ ಸಂಬಂಧಿಸಿದ್ದು. ದೇವರಿಗೂ, ಧರ್ಮಕ್ಕೂ ದೇಶಕ್ಕೂ ವಿದ್ಯಾರ್ಥಿಗಳಿಗೂ ದ್ರೋಹವನ್ನು ಮಾಡಿ, ಯಾವ ಮುಖ ಹೊತ್ತುಕೊಂಡು ಸಂಸತ್ತಿಗೆ ಬರುತ್ತಾರೆ? ಅದಕ್ಕೇ ಸಂಸತ್ ಭವನಕ್ಕೆ ಬಂದರೂ, ಅಧಿವೇಶನಕ್ಕೆ ಬಾರದೇ ತಮ್ಮ ತಮ್ಮ ಕಛೇರಿಯಲ್ಲೇ ಕದ್ದು ಮುಚ್ಚಿ ಕೂರುವ ನಾಚಿಗೆಗೆಟ್ಟ ಕೆಲಸ ಮಾಡಿದ್ದಾರೆ ! ನೀಟ್ ಹಗರಣ, ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಮತ್ತು ಅಯೋದ್ಯೆ ರಾಮಮಂದಿರದ ಹುಂಡಿ ಹಣ ಕದ್ದ ಪ್ರಕರಣಗಳನ್ನು ಎದುರಿಸಲಾಗದೆ ಹೇಡಿಗಳಂತೆ ಪಲಾಯನ ಮಾಡಿದ್ದಾರೆ. ಕಟ್ಟಕಡೆಯ ದಿನ ಅಧಿವೇಶನಕ್ಕೆ ಬಂದರೂ ವಂದೇಮಾತರಂ ಮುಗಿದ ತಕ್ಷಣ ಅಧಿವೇಶನವನ್ನು ಅನರ್ಧಿಷ್ಟಾವದಿಗೆ ಮುಂದೂಡುವುದಕ್ಕೆ ಬೇಕಾದ ವ್ಯವಸ್ಥೆಯನ್ನು ಮಾಡಿಕೊಂಡೇ ಬಂದು ತಾವೆಂತಹಾ ಹೇಡಿಗಳು ಮತ್ತು ಬೇಜವಾಬ್ದಾರೀ ವ್ಯಕ್ತಿಗಳು ಎಂಬುದನ್ನು ಇಡೀ ವಿಶ್ವಕ್ಕೇ ನಿರೂಪಿಸಿದ್ದಾರೆ.
ಈ ಸಂಸತ್ ಅಧಿವೇಶನದಲ್ಲಿ ಒಟ್ಟು 13 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಇದರಲ್ಲಿ ಪ್ರಮುಖವಾಗಿ ಪ್ರಧಾನಿ ಮೋದಿಯವರು ಮಧ್ಯರಾತ್ರಿ ಇನ್ಸ್ಟಾಗ್ರಾಂ ಖಾತೆಗೆ ಬಂದು ಸೆಲ್ಫಿ ವಿಡಿಯೋ ಸಂದೇಶ ನೀಡಿದ ನೀಟ್ ಹಗರಣ ಸಂಬಂಧಿ ಪಾಸ್ಟ್ ಟ್ರ್ಯಾಕ್ ಕೋರ್ಟ್ ಸ್ಥಾಪನೆ ಮತ್ತು ಪೇಪರ್ ಲೀಕ್ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡುವ ಸಾರ್ವಜನಿಕ ಪರೀಕ್ಷೆಗಳ (ಅಕ್ರಮ ತಡೆ) ತಿದ್ದುಪಡಿ ಮಸೂದೆ 2026 ಸೇರಿದೆ. ಇಡೀ ದೇಶದಲ್ಲಿ ತೀವ್ರ ಪ್ರತಿರೋಧ ಎದುರಿಸಿದ , ನೀಟ್ ಅಕ್ರಮಗಳ ತಡೆಗಾಗಿಯೇ ರೂಪಿಸಲಾದ ಈ ಅತ್ಯಂತ ಮಹತ್ವಪೂರ್ಣ ಮಸೂದೆಯನ್ನು ಮಂಡಿಸುವ ಸಮಯದಲ್ಲಾಗಲೀ , ಅದರ ಮೇಲೆ ನಡೆದ ಚರ್ಚೆಯ ಸಂದರ್ಭದಲ್ಲಾಗಲೀ , ಈ ಮಸೂದೆಯ ರೂವಾರಿಯಾದ ಸ್ವತಃ ಪ್ರಧಾನಿ ನರೇಂದ್ರ ಮೋದಿಯವರೇ ಗೈರು ಹಾಜರಾಗಿ , ತಮ್ಮ ಕಛೇರಿಯ ಕೊಠಡಿಯಲ್ಲಿ ಅವಿತು ಕುಳಿತಿರುವುದು ಅತ್ಯಂತ ಹಾಸ್ಯಾಸ್ಪದವೂ, ನಾಚಿಕೆಗೇಡಿನ ಸಂಗತಿಯೂ ಆಗಿದೆ. ಇದೇ ಅಧಿವೇಶನದಲ್ಲಿ ಮಂಡನೆಯಾದ ಇತರ 3 ಮಸೂದೆಗಳು ಗೃಹ ಸಚಿವರೂ, ಸಹಕಾರ ಸಚಿವರೂ ಆದ ಅಮಿತ್ ಶಾರವರ ಇಲಾಖೆಗೆ ಸಂಬಂಧಿಸಿದ್ದಾಗಿದೆ. ರಾಷ್ಟ್ರೀಯ ಗೌರವಕ್ಕೆ ಅವಮಾನ ತಡೆ (ತಿದ್ದುಪಡಿ)ಮಸೂದೆ 2026 ಮತ್ತು ಕೇರಳ ರಾಜ್ಯಕ್ಕೆ ಕೇರಳಂ ಎಂದು ಹೆಸರು ಬದಲಾಯಿಸುವ ಕೇರಳಂ (ಹೆಸರು ಬದಲಾವಣೆ) ಮಸೂದೆ 2026 ಇವೆರಡೂ ಮಸೂದೆಗಳು ಅಮಿತ್ ಶಾರ ಗೃಹ ಇಲಾಖೆಗೆ ಸಂಬಂಧಿಸಿದ್ದಾದರೆ, ಇನ್ನೊಂದು ಮಸೂದೆ, ರಾಷ್ಟ್ರೀಯ ಸಹಕಾರ ಅಭಿವೃದ್ಧಿ ನಿಗಮ (ತಿದ್ದುಪಡಿ) 2026 , ಇದು ಅಮಿತ್ ಶಾ ನಿರ್ವಹಿಸುತ್ತಿರುವ ಸಹಕಾರ ಖಾತೆಗೆ ಸಂಬಂಧಿಸಿದ್ದಾಗಿದೆ. ತಮ್ಮ ಇಲಾಖೆಗೆ ಸಂಬಂಧಿಸಿದ 3 ಮಸೂದೆಗಳು ಜಾರಿಗೊಳಿಸುವುದಕ್ಕಾಗಿ ಅಧಿವೇಶನದಲ್ಲಿ ಮಂಡನೆಯಾಗುವಾಗ ಸ್ವತಃ ಆ ಖಾತೆಯ ಸಚಿವರೇ ಸದನದಲ್ಲಿ ಗೈರು ಹಾಜರಾಗಿರುವುದು ಅತ್ಯಂತ ಬೇಜವಾಬ್ದಾರಿತನದ್ದೂ, ನಾಚಿಕೆಗೇಡಿನದ್ದೂ ಆದ ಕೃತ್ಯವಾಗಿದೆ.
ಜವಾಬ್ದಾರಿಯ ಪ್ರಶ್ನೆ : 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಇಂದಿನವರೆಗೆ ಈ ಮೋದಿ, ಶಾ ನೇತೃತ್ವದ ಬಿಜೆಪಿ ಸರಕಾರ ಯಾವ ವಿಷಯದಲ್ಲೂ ಜವಾಬ್ದಾರಿಯಿಂದ ನಡೆದುಕೊಂಡದ್ದೇ ಇಲ್ಲ, ತಾವು ಮಾಡಿದ ಯಾವ ತಮ್ಮ ಯಾವ ತಪ್ಪಿಗೂ ಜವಾಬ್ದಾರಿಯನ್ನು ಹೊತ್ತುಕೊಂಡದ್ದೇ ಇಲ್ಲ , ದೇಶದಲ್ಲಿ ಉದ್ಭವಿಸಿದ ಯಾವ ಸಮಸ್ಯೆಗಳನ್ನೂ ಜವಾಬ್ದಾರಿಯಿಂದ ಪರಿಹರಿಸಲು ಪ್ರಯತ್ನಿಸಿದ್ದೇ ಇಲ್ಲ ! ನೋಟ್ ಬ್ಯಾನ್‌ನಿಂದ ನೀಟ್‌ವರೆಗೆ ಯಾವ ಸಂದರ್ಭದಲ್ಲೂ ಸರಕಾರ ಜವಾಬ್ದಾರಿಯಿಂದ ನಡೆದುಕೊಂಡಿಲ್ಲ, ಜವಾಬ್ದಾರಿ ವಹಿಸಿಕೊಂಡಿಲ್ಲ. ನೋಟ್ ಬ್ಯಾನ್ ಯಾಕಾಗಿ ಮಾಡಲಾಯಿತು? ಜನ ಅನುಭವಿಸಿದ ಕಷ್ಟಗಳಿಗೆ ದೇಶಕ್ಕೆ ಏನಾದರೂ ಲಾಭ ಆಗಿದೆಯೇ? ನೋಟ್ ಬ್ಯಾನ್‌ನಿಂದ ದೇಶದ ಆರ್ಥಿಕತೆ ನಾಶವಾದುದಕ್ಕೆ ಇವರು ಜವಾಬ್ದಾರಿ ಹೊತ್ತಿದ್ದಾರೆಯೇ ? ಕೋವಿಡ್ ಕಾಲದ ದಿಢೀರ್ ಲಾಕ್‌ಡೌನ್‌ನಿಂದ ಕಾರ್ಮಿಕರಿಗೆ ಆದ ಕಷ್ಟ ನಷ್ಟಗಳಿಗೆ ಇವರು ಹೊಣೆ ಹೊತ್ತಿದ್ದಾರೆಯೇ? ಮಹಿಳಾ ಕುಸ್ತಿ ಪಟುಗಳ ಮೇಲಿನ ಲೈಂಗಿಕ ದೌರ್ಜನ್ಯದ ಹೊಣೆ ಹೊತ್ತುಕೊಂಡವರು ಯಾರು? 2023ರಲ್ಲಿ ಆರಂಭವಾಗಿ ಇಂದಿಗೂ ಮುಂದುವರಿದಿರುವ ಮಣಿಪುರ ಹಿಂಸಾಚಾರಕ್ಕೆ ಯಾರು ಜವಾಬ್ದಾರರು? ಮಣಿಪುರ ಹೊತ್ತಿ ಉರಿಯುತ್ತಿದ್ದಾಗ, ಮಹಿಳೆಯರನ್ನು ಬೆತ್ತಲೆಗೊಳಿಸಿ ಮೆರವಣಿಗೆ ಮಾಡಿದಾಗ ಒಂದೇ ಒಂದು ಬಾರಿಯೂ ಬಾಯಿ ಬಿಡದ ಪ್ರಧಾನಿ ಮೋದಿ, ಹಿಂಸಾಚಾರ ಹತ್ತಿಕ್ಕಲು ಸ್ವಲ್ಪವೂ ಪ್ರಯತ್ನ ಪಡದ ಗೃಹ ಸಚಿವ ಅಮಿತ್ ಶಾ ಜವಾಬ್ದಾರಿಯಿಂದ ಓಡಿಹೋಗುವುದನ್ನೇ ತಮ್ಮ ಚಾಳಿಯನ್ನಾಗಿ ಮಾಡಿಕೊಂಡಿದ್ದಾರೆ. ಬಿಸಿಲು, ಮಳೆ, ಚಳಿಗಳನ್ನು ಲೆಕ್ಕಿಸದೆ ರೈತರು ಒಂದು ವರ್ಷ ಕಾಲ ಪ್ರತಿಭಟನೆ ಮಾಡಿದಾಗ ಅವರ ಕಡೆ ಕಣ್ಣೆತ್ತಿಯೂ ನೋಡದೆ 700ಕ್ಕೂ ಹೆಚ್ಚು ರೈತರ ಸಾವಿಗೆ ಕಾರಣಕರ್ತರಾಗಿದ್ದಾರೆ. ಅಯೋದ್ಯೆಯ ರಾಮ ಮಂದಿರದಲ್ಲಿ ಪ್ರಧಾನಿ ಮೋದಿಯರೇ ನೇಮಿಸಿದ, ಆರ್.ಎಸ್.ಎಸ್.ನವರಿಂದ ತುಂಬಿದ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು ರಾಮಮಂದಿರಕ್ಕೆ ಭಕ್ತರು ಭಕ್ತಿಯಿಂದ ಕಾಣಿಕೆಯಾಗಿ ನೀಡಿದ ಕೋಟಿ ಕೋಟಿ ರೂಪಾಯಿ ಹಣ, ಟನ್ನುಗಟ್ಟಲೆ ಬೆಳ್ಳಿಯ ಇಟ್ಟಿಗೆ, ಚಿನ್ನಲೇಪಿತ ಪುಸ್ತಕಗಳನ್ನು ನುಂಗಿ ನೀರು ಕುಡಿದರೂ, ಇಂದಿನವರೆಗೆ ಈ ಬಗ್ಗೆ ಒಂದೇ ಒಂದು ಶಬ್ದವನ್ನೂ ಮಾತನಾಡದ ಪ್ರಧಾನಿ ಮೋದಿಯವರು ತಮಗೆ ಯಾವ ಜವಾಬ್ದಾರಿಯೂ ಇಲ್ಲ, ತಾನು ಯಾವುದಕ್ಕೂ ಜವಾಬ್ದಾರಿ ಹೊತ್ತುಕೊಳ್ಳುವುದಿಲ್ಲ ಎಂದು ಸಾಬೀತುಪಡಿಸಿದರು. ದೇಶ ಎದುರಿಸುತ್ತಿರುವ ಬೆಲೆ ಏರಿಕೆ, ನಿರುದ್ಯೋಗ , ಕೋಮು ದ್ವೇಷಗಳ ಬಗ್ಗೆ ಇಂದಿನವರೆಗೆ ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಂಡ ಸರಕಾರ ಇದಾಗಿದೆ.

ವಿದ್ಯಾರ್ಥಿಗಳ ಪ್ರತಿಭಟನೆ ಒಂದು ಅಕಸ್ಮಿಕವಲ್ಲ : ವಿದ್ಯಾರ್ಥಿಗಳ ಪ್ರತಿಭಟನೆ ಸುಪ್ರೀಂ ಕೋರ್ಟಿನ ನ್ಯಾಯಾಧೀಶರು ನಿರುದ್ಯೋಗಿ ಯುವಕರನ್ನು ಕಾಕ್ರೋಚ್‌ಗಳು ಎಂದು ಕರೆದಾಗ ವಿಢಂಭನಾತ್ಮಕವಾಗಿ ಹುಟ್ಟಿದ ಒಂದು ಆಕಸ್ಮಿಕ ಚಳುವಳಿಯೂ ಅಲ್ಲ, ಆಕಸ್ಮಿಕ ಪ್ರತಿಭಟನೆಯೂ ಅಲ್ಲ ! ಅದು ಇಡೀ ಭಾರತ ದೇಶದ ಜನತೆ ಈ ಮೋದಿ ಶಾ ಸರಕಾರದ 12 ವರ್ಷಗಳ ದುರಾಢಳಿತದ ವಿರುದ್ದ ಹೆಪ್ಪುಗಟ್ಟಿದ್ದ ಅಸಮಾದಾನದ ಸ್ಪೋಟ ! ಅಣೆಕಟ್ಟೆಯಲ್ಲಿ ತುಂಬಿದ ಜಲರಾಶಿ ತನ್ನೊಳಗಿನ ಒತ್ತಡವನ್ನು ತಾಳಿಕೊಳ್ಳಲಾರದೆ ಕಟ್ಟೆಯ ಗೋಡೆಗಳನ್ನು ಸೀಳಿ ಧುಮ್ಮಿಕ್ಕಿದಂತೆ ಕಳೆದ 12 ವರ್ಷಗಳಿಂದ ಜನರ ಮತ್ತು ವಿರೋಧ ಪಕ್ಷಗಳ ಅಸಮಾಧಾನ ಮತ್ತು ಪ್ರತಿಭಟನೆಗಳನ್ನು ಅಧುಮಿ ಹಿಡಿದು ನಿಲ್ಲಿಸಿದ ಬಿಜೆಪಿ , ಆರ್ ಎಸ್ ಎಸ್ ಮತ್ತು ಅದರ ಪರಿವಾರಗಳ ಷಢ್ಯಂತ್ರಗಳ ವಿರುದ್ಧ ಯುವ ಜನತೆ ತೋರಿಸಿದ ವಿರಾಟ್ ರೂಪ ! ಕಾಂಗ್ರೆಸ್‌ನವರು ಪ್ರತಿಭಟನೆ ನಡೆಸಿದಾಗ ಅವರನ್ನು ದೇಶದ್ರೋಹಿಗಳೆಂದೂ, ರೈತರು ಪ್ರತಿಭಟಿಸಿದಾಗ ಅವರನ್ನು ಖಾಲಿಸ್ತಾನಿಗಳೆಂದೂ, ಕ್ರೀಡಾಪಟುಗಳು ಪ್ರತಿಭಟಿಸಿದಾಗ ಅವರನ್ನು ಕಾಂಗ್ರೆಸ್ ಏಜೆಂಟರೆಂದೂ, ಮುಸಲ್ಮಾನರು ಪ್ರತಿಭಟಿಸಿದಾಗ ಅವರನ್ನು ಪಾಕಿಸ್ತಾನಿಗಳೆಂದೂ, ಕೆಲವರನ್ನು ಚೈನಾ ಏಜೆಂಟರೆಂದೂ ಚಿತ್ರಿಸಿ, ಜನರ ಧ್ವನಿಯನ್ನು ಹತ್ತಿಕ್ಕಿ ಜನರನ್ನು ಅಸಹಾಯಕರನ್ನಾಗಿಸಿದ ಪ್ಯಾಸಿಸ್ಟ್ ಆಡಳಿತದ ವಿರುದ್ಧ ಸ್ಪೋಟಗೊಂಡ ಆಕ್ರೋಶ ಇದು.
ಮೋದಿಯವರು ಪ್ರಧಾನಿಯಾಗಿ ಆಯ್ಕೆಯಾದ ನಂತರ ಈ ದೇಶದಲ್ಲಿ ದೇಶದ್ರೋಹಿಗಳು , ಪಾಕಿಸ್ತಾನಿಯರು, ಬಾಂಗ್ಲಾ ನುಸುಳುಕೋರರು, ಖಾಲಿಸ್ತಾನಿಗಳು, ಹಿಂದೂ ದ್ರೋಹಿಗಳು, ಅರ್ಬನ್ ನಕ್ಸಲರು ತುಂಬಿ ತುಳುಕುತ್ತಿದ್ದಾರೆ. ಮೊನ್ನೆ ಸ್ವಾತಂತ್ರ್ಯೋತ್ಸವದ ಕೆಂಪು ಕೋಟೆಯ ಭಾಷಣದಲ್ಲಿ ಪ್ರಧಾನಿ‌ ಮೋದಿಯವರು ಧಿಮಾಗ್ ನಕ್ಸಲ್ ಎಂಬ ಹೊಸ ಪ್ರಬೇಧವನ್ನು ಹುಟ್ಟು ಹಾಕಿದ್ದಾರೆ. ಹೀಗೆ ಆಳುವವರನ್ನು ಪ್ರಶ್ನಿಸುವವರನ್ನು ಹೀನಾಯವಾಗಿ ಚಿತ್ರಿಸುವ ಮೂಲಕ ಪ್ರಧಾನಿ ಮೋದಿ ಮತ್ತವರ ತಂಡ ಇಡೀ ದೇಶದ ಜನಕ್ಕೆ, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವಮಾನವನ್ನು ಮಾಡಿದ್ದಾರೆ. ಮಾಧ್ಯಮಗಳ ಮುಖ್ಯಸ್ಥರನ್ನು ಖರೀದಿಸಿ , ಮಾಧ್ಯಮಗಳು ದಿನ ನಿತ್ಯ ಮೋದಿ ಭಜನೆ ಮಾಡುತ್ತಾ , ಹಿಂದೂ ಮುಸ್ಲಿಂ ದ್ವೇಷದ ಬೆಂಕಿ ಹಚ್ಚಿ ಜನರ ದಿಕ್ಕು ತಪ್ಪುಸಿ ದೇಶವನ್ನು ಕೊಳ್ಳೆ ಹೊಡೆದ ನೀಚತನದ ವಿರುದ್ಧದ ಜನಾಕ್ರೋಶ ಇದು ! ದೇಶದ ಸಂಸ್ಥೆಗಳನ್ನು ತಮ್ಮ ಮಿತ್ರರಿಗೆ ಮಾರಾಟ ಮಾಡಿ, ನಿರುದ್ಯೋಗಿಗಳನ್ನು ಪಕೋಡಾ ಮಾರುವಂತೆ ಲೇವಡಿ ಮಾಡಿದ ಅಹಂಕಾರೀ ಆಡಳಿತಗಾರರ ನೇಲಿನ ಸಾತ್ವಿಕ ಆಕ್ರೋಷ ಇದು !

ಕನಿಷ್ಟ ದೇಶದ ಭವಿಷ್ಯವಾದ ವಿದ್ಯಾರ್ಥಿಗಳ ವಿಷಯದಲ್ಲಾದರೂ ಜವಾಬ್ದಾರಿ ವಹಿಕೊಂಡರೇ? ಇವರ ಅವಧಿಯಲ್ಲಿ 89ಕ್ಕೂ ಅಧಿಕ ಪ್ರಶ್ನೆಪತ್ರಿಕೆಗಳು ಸೋರಿಕೆಯಾದವು. ನೀಟ್ ಒಂದೇ 5 ಬಾರಿ ಲೀಕ್ ಆಗಿದೆ. ಪ್ರಶ್ನೆಪತ್ರಿಕೆ ಸೋರಿಕೆಯಾದುದಕ್ಕಾಗಲೀ, ಇದೇ ಕಾರಣಕ್ಕಾಗಿ 21 ಮಂದಿ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡದ್ದಕ್ಕಾಗಲೀ, ವಿದ್ಯಾರ್ಥಿಗಳ ಪ್ರತಿಭಟನೆಯ ಬಗ್ಗೆಯಾಗಲೀ ಪ್ರಧಾನ ಮಂತ್ರಿ ಮೋದಿ ಮತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಒಂದೇ ಒಂದು ಪ್ರತಿಕ್ರಿಯೆ ನೀಡಲಿಲ್ಲವೆಂದಾದರೆ , ಅವರ ಬೇಜವಾಬ್ದಾರಿಯ ಮಟ್ಟ ಯಾವ ಲೆವೆಲ್‌ನಲ್ಲಿದೆ ಎಂಬುದು ಅರ್ಥವಾಗುತ್ತದೆ. ಸೋನಂ ವಾಂಗ್‌ಚುಕ್‌ರವರ ಉಪವಾಸ ಸತ್ಯಾಗ್ರಹ ನಡೆಸಿದಾಗಲೂ ತುಟಿ ಬಾಯಿ ಒಂದು ಮಾಡಿ ಕುಳಿತ ಮೋದಿ-ಶಾ-ಪ್ರಧಾನ್ ಜೋಡಿ ವಿದ್ಯಾರ್ಥಿಗಳ ಮೇಲೆ ಮಾಡಬಾರದ ಹಿಂಸಾಚಾರ ನಡೆಸಿ ಅವರ ಬಾಯಿ ಮುಚ್ಚಿಸುವ ಪ್ರಯತ್ನ ಅಕ್ಷಮ್ಯ ಅಪರಾಧವಾಗಿದೆ.

ಕವುಚಿ ಬಿದ್ದರೂ ಮೂಗು ಮೇಲೆ : ವಿದ್ಯಾರ್ಥಿಗಳ ನೀಟ್ ಪ್ರತಿಭಟನೆ ಮತ್ತು ಸಂಸದ್ ಚಲೋ ಕಾರ್ಯಕ್ರಮದಲ್ಲಿ ನಡೆದ ಲಾಠೀ ಚಾರ್ಜ್ ಮತ್ತು ಪೆಲೆಟ್ ಗನ್ ಪ್ರಯೋಗವನ್ನು ಅನುಸರಿಸಿ ರಾಹುಲ್ ಗಾಂಧಿ ನೇತೃತ್ವದ ವಿಪಕ್ಷಗಳ ಪ್ರಧಾನಿ ನಿವಾಸದ ಮುಂದೆ ಧರಣಿಯ ನಂತರ ದೇಶದೆಲ್ಲೆಡೆ ಈ ಸರಕಾರದ ನಿಜ ಬಣ್ಣ ಬಯಲಾಯಿತು. ದೇಶದ ವಿದ್ಯಾರ್ಥಿಗಳು ಮತ್ತು ದೇಶದ ಸಾಮಾನ್ಯ ಜನ ಈ ಸರ್ಕಾರದ ಜನ ವಿರೋಧಿ ನೀತಿಗಳ ವಿರುದ್ಧ ಬೀದಿ ಬೀದಿಗಳಲ್ಲಿ ಪ್ರತಿಭಟನೆ ನಡೆಸಿದಾಗ ಧರ್ಮೇಂದ್ರ ಪ್ರಧಾನ್ ರಾಜಿನಾಮೆ ಅನಿವಾರ್ಯವಾಯಿತು. ನೀಟ್ ಹಗರಣದಲ್ಲಿ ಇವರು ಮಾಡಿದ ಪಾಪದ ಕೊಡ ತುಂಬಿ ಅನಿವಾರ್ಯವಾಗಿ ರಾಜಿನಾಮೆ ಕೊಟ್ಟಾಗಲೂ ವೈಯ್ಯಕ್ತಿಕ ಕಾರಣಗಳಿಗಾಗಿ ರಾಜೀನಾಮೆ ನೀಡಿದೆ ಎಂದು ಧರ್ಮೇಂದ್ರ ಪ್ರಧಾನ್ ಹೇಳಿರುವುದು ಇವರ ಕವುಚಿ ಬಿದ್ದರೂ ಮೂಗು ಮೇಲೆ ಎಂಬ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ರಾಜೀನಾಮೆ ನಂತರ ಸಂಸತ್ ಭವನಕ್ಕೆ ಆಗಮಿಸಿದ ಧರ್ಮೇಂದ್ರ ಪ್ರಧಾನ್‌ರನ್ನು ಸ್ವಾಗತಿಸಿ ಅವರಿಗೆ ಸನ್ಮಾನ ಮಾಡಿದ ಬಿಜೆಪಿ ಸಂಸದರ ಮನಸ್ಥಿತಿಯೂ ಇದೇ ಆಗಿದೆ. ವಿದ್ಯಾರ್ಥಿಗಳ ಮೇಲೆ ಪೊಲೀಸರಿಂದಲೂ ಆರ್‌.ಎಸ್‌.ಎಸ್. ಗೂಂಡಾಗಳಿಂದಲೂ ಲಾಠೀ ಚಾರ್ಜ್ ಮಾಡಿಸಿ, ಪೆಲೆಟ್ ಗನ್‌ನಿಂದ ದಾಳಿ ಮಾಡಿ, ಅಪ್ರಾಪ್ತ ಯುವತಿಯರ ಖಾಸಗೀ ಅಂಗಗಳನ್ನೂ ಗುರಿಮಾಡಿ, ಎಲ್ಲ ಮುಗಿದ ಮೇಲೆ ಅಪ್ರಾಪ್ತ ಬಾಲಕಿಯೊಬ್ನಳಿಂದ ತಪ್ಪೊಪ್ಪಿಗೆ ಹೇಳಿಕೆ ಪಡೆದುಕೊಂಡು ನಿಮ್ಮನ್ನು ಕ್ಷಮಿಸಿದ್ದೇನೆ ಎಂದು ಪ್ರಧಾನಿ ಮೋದಿಯವರು ಹೇಳಿರುವುದು ಕೂಡಾ ಇದೇ ಮನಸ್ಥಿತಿಗೆ ಹಿಡಿದ ಕೈಗನ್ನಡಿಯಾಗಿದೆ. ವಿದ್ಯಾರ್ಥಿಗಳ ಪ್ರತಿಭಟನೆಗೆ ಬೆದರಿ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಪಡೆದಿದ್ದರೂ ರಾಜೀನಾಮೆಯ ನಂತರ ಸೆಲ್ಫಿ ವಿಡಿಯೋದಲ್ಲಿ ವಿದ್ಯಾರ್ಥಿಗಳನ್ನು ದಾರಿತಪ್ಪಿದವರು ಎಂದು ಹೇಳಿ ವಿದ್ಯಾರ್ಥಿಗಳ ಪೂರ್ತಿ ಪ್ರತಿಭಟನೆಯನ್ನೇ ದಾರಿ ತಪ್ಪಿದವರ ಪ್ರತಿಭಟನೆಯೆಂದು ಬ್ರ್ಯಾಂಡ್ ಮಾಡುವ ವಿಫಲ ಪ್ರಯತ್ನ ನಡೆಸಿದ್ದಾರೆ. ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿ, 21 ವಿದ್ಯಾರ್ಥಿಗಳ ಸಾವಿಗೆ ಕಾರಣರಾಗಿ, ವಿದ್ಯಾರ್ಥಿ ಪ್ರತಿಭಟನೆಯನ್ನು ವಿದೇಶಿ ಸಂಚು, ಪಾಕಿಸ್ತಾನಿಗಳು, ಚೈನಾ ಏಜೆಂಟರು, ದೇಶದ್ರೋಹಿಗಳು ಎಂದು ಹೀಯ್ಯಾಳಿಸಿ, ಇಡೀ ಪ್ರತಿಭಟನೆಯನ್ನೇ ನಿರ್ಲಕ್ಷಿಸಿ, ಸೋನಂ ವಾಂಗ್‌ಚುಕ್‌ರವರನ್ನು ಬಲವಂತವಾಗಿ ಆಸ್ಪತ್ರೆಗೆ ಸೇರಿಸಿ ಇಡೀ ದೇಶದ ಜನರ ಆಕ್ರೋಶಕ್ಕೆ ತುತ್ತಾ ದ ಪ್ರಧಾನಿ ಮೋದಿ, ಗೃಹ ಸಚಿವ ಅಮಿತ್ ಶಾ, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ದೇಶದ ಜನರ ಮತ್ತು ವಿದ್ಯಾರ್ಥಿಗಳ ಕ್ಷಮೆ ಕೇಳಬೇಕಾಗಿತ್ತಲ್ಲದೆ, ವಿದ್ಯಾರ್ಥಿಗಳನ್ನು ದಾರಿ ತಪ್ಪಿದವರು ಎಂದು ಕರೆದು ಅವರನ್ನು ಕ್ಷಮಿಸಿದ್ದೇನೆ ಎಂದು ಹೇಳಿರುವುದು ಅವರ ದಾಷ್ಠ್ಯ, ಅಹಂಕಾರ ಮತ್ತು ಬೇಜವಾಬ್ದಾರಿತನದ ಪ್ರತೀಕವಾಗಿದೆ. ಯಾರು ಕ್ಷಮೆ ಕೇಳಬೇಕಾಗಿತ್ತೋ ಅವರೇ ಕ್ಷಮಿಸಿದ್ದೇನೆ ಎಂದಿರುವುದು ಭಾರತದ ಪ್ರಜಾಪ್ರಭುತ್ವ ದುರಂತವಾಗಿದೆ. ಹೀಗೆ ಹೇಳುವುದರ ಮೂಲಕ ಪ್ರಧಾನಿ ಮೋದಿಯವರು ದೇಶದ ಸಮಸ್ತ ವಿದ್ಯಾರ್ಥಿಗಳನ್ನು ಅವಮಾನಿಸಿದ್ದಾರೆ.
ಈಗ, ಇಷ್ಟೆಲ್ಲ ಮಾಡಿ, ಸಂಸತ್ ಅಧಿವೇಶನಕ್ಕೆ ಬಾರದೇ, ಇಡೀ ಸಂಸತ್ತಿಗೇ ಅವಮಾನ ಮಾಡಿದ್ದಾರೆ. ಅಮಿತ್ ಶಾ ಮತ್ತು ಮೋದಿಯವರಿಗೆ ಈಗ ಮುಖ ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ಬಂದೊದಗಿದೆ. ಒಂದು ವೇಳೆ ಅವರಿಬ್ಬರೂ ಸಂಸದ್ ಅಧಿವೇಶನಕ್ಕೆ ಹಾಜರಾಗಿದ್ದಿದ್ದರೆ ಅವರು ರಾಮ ಮಂದಿರದಲ್ಲಿ ನಡೆದ ಅವರದೇ ಜನ ನಡೆಸಿದ ಕಾಣಿಕೆ ಲೂಟಿಯ ಬಗ್ಗೆ ಹೇಳಿಕೆಯನ್ನು ನೀಡಬೇಕಾಗುತ್ತಿತ್ತು, ವಿದ್ಯಾರ್ಥಿಗಳ ಮೇಲಿನ ಹಿಂಸಾಚಾರದ ಬಗ್ಗೆಯೂ ರಾಹುಲ್ ಗಾಂಧಿಯವರ ಪ್ರಶ್ನೆಗಳಿಗೆ ಉತ್ತರ‌ ಕೊಡಬೇಕಾಗುತ್ತಿತ್ತು. ಕೊಡುವುದಕ್ಕೆ ಉತ್ತರವೇ ಇಲ್ಲದಿದ್ದಾಗ ಸಂಸತ್ ಅಧಿವೇಶನಕ್ಕೆ ಬರುವುದಾದರೂ ಹೇಗೆ? ವಿಪಕ್ಷ ನಾಯಕ ರಾಹುಲ್ ಗಾಂಧಿ ಮತ್ತು ಇಂಡಿಯಾ ಒಕ್ಕೂಟದ ತೀಕ್ಷ್ಣ ಪ್ರಶ್ನೆಗಳಿಗೆ ಹೆದರಿ ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಸಂಸತ್ತಿನ ತಮ್ಮ ತಮ್ಮ ಕಛೇರಿಯ ಕೊಠಡಿಗಳಲ್ಲಿ ಅಡಗಿ ಕುಳಿತು ತಾವೆಂತಹಾ ರಣ ಹೇಡಿಗಳು ಮತ್ತು ಬೇಜವಾಬ್ದಾರೀ ವ್ಯಕ್ತಿಗಳು ಎಂಬುದನ್ನು ವಿಶ್ವಕ್ಕೆ ಅನಾವರಣಗೊಳುಸಿದ್ದಾರೆ.

ವಿದ್ಯಾರ್ಥಿಗಳ ಮೇಲಿನ ಅಮಾನುಷ ಹಲ್ಲೆ ಮತ್ತು ಅಯೋದ್ಯೆ ರಾಮಮಂದಿರದ ಕಾಣಿಕೆ ಲೂಟಿಯ ಪ್ರಕರಣಗಳಿಗೆ ಹೆದರಿ, ಗಾಳಿ ಒಡೆದ ಬೆಲೂನಿನಂತಾದ ಇಬ್ಬರು ದಿಗ್ಗಜ ನಾಯಕರು ಸದನಕ್ಕೆ ಬಾರದೆ ತಲೆ ತಪ್ಪಿಸಿ ಓಡಾಡಿರುವುದು ಈ ದೇಶದ ಪ್ರಜಾಪ್ರಭುತ್ವ ಕಂಡ ಬಲುದೊಡ್ಡ ದುರಂತ.
56 ಇಂಚಿವಿನ ಎದೆ ಒಡೆದು ಹೋಗಿದೆ, ಉಕ್ಕಿನ ಮನುಷ್ಯನಿಗೆ ತುಕ್ಕು ಹಿಡಿದಿದೆ. ಇವರಿಬ್ಬರೂ ಈ ದೇಶವನ್ನು ಅಂಬಾನಿ ಅದಾನಿಗಳಿಗೆ ಲೂಟಿ ಹೊಡೆಯಲು ಅವಕಾಶ ಮಾಡಿಕೊಟ್ಟು ದೇಶವನ್ನು ದುಸ್ಥಿತಿಗೆ ತಂದಿದ್ದಾರೆ. ಕಾಂಗ್ರೆಸ್ ಪಕ್ಷ ಇವರಿಬ್ಬರ ಸಂಸದ್ ಅಧಿವೇಶನಕ್ಕೆ ಬಾರದೇ ಅಡಗಿ ಕುಳಿತ ಇವರಿಬ್ಬರ ನಡೆವಳಿಕೆಗಳನ್ನು ತೀವ್ರವಾಗಿ ಖಂಡಿಸುತ್ತದೆ ಎಂದು ದೂರಿದರು

ಪತ್ರಿಕಾಗೋಷ್ಠಿಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಪ್ರಚಾರ ಸಮಿತಿ ಅಧ್ಯಕ್ಷ ದಿನೇಶ್ ಅಂಬೆಕ್ಕಲು,ಕಾಂಗ್ರೆಸ್ ಸುಳ್ಯ ಬ್ಲಾಕ್ ಪರಿಶಿಷ್ಟ ಜಾತಿ ವಿಭಾಗ ಅಧ್ಯಕ್ಷ ಮಹೇಶ್‌ ಬೆಳ್ಳಾರ್ಕರ್,ಸುಳ್ಯ ವಿಧಾನಸಭಾ ಕ್ಷೇತ್ರ ಯೂತ್ ಕಾಂಗ್ರೆಸ್‌ ಅಧ್ಯಕ್ಷ ರಂಜಿತ್ ರೈ ಮೇನಾಲ,ಕಾಂಗ್ರೆಸ್‌ ಪ್ರಚಾರ ಸಮಿತಿ ಜಿಲ್ಲಾ ಸಮಿತಿ ಸದಸ್ಯ ಪ್ರವೀಣ್ ಮುಂಡೋಡಿ, ಎನ್ ಎಸ್ ಯು ಐ ಸುಳ್ಯ ಅಧ್ಯಕ್ಷ ಧನುಷ್ ಕುಕ್ಕೆಟ್ಟಿ,ಕಾಂಗ್ರೆಸ್ ಮುಖಂಡರಾದ ಮಂಜುನಾಥ್ ಮಡ್ತಿಲ,ಕೇಶವ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top