ಪಂಜ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರ ಮೇಲೆ ಅವ್ಯವಹಾರದ ಆರೋಪ : ಆರೋಪವನ್ನು ನಿರಾಕರಿಸಿ ದೇವಳದಲ್ಲಿ ಸತ್ಯ ಪ್ರಮಾಣ ಮಾಡಿದ ಅಧ್ಯಕ್ಷರು

ಪಂಜ ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ದೇವಿಪ್ರಸಾದ್ ಕಾನತ್ತೂ‌ರ್ ಅವರು ತನ್ನ ಮೇಲೆ ಅವ್ಯವಹಾರದ ಆರೋಪ ಬಂದ ಹಿನ್ನಲೆಯಲ್ಲಿ ಅದನ್ನು ನಿರಾಕರಿಸಿ ದೇವಸ್ಥಾನದ ನಡೆಯಲ್ಲಿ ಆ.31ರಂದು ಸತ್ಯ ಪ್ರಮಾಣ ಮಾಡಿದ್ದೇನೆ ಎಂದು ಅವರು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದಾರೆ.
ಮುಂಜಾನೆ ನಾಗತೀರ್ಥ ಹೊಳೆಯಲ್ಲಿ ಸ್ನಾನ ಮಾಡಿ ದೇಗುಲಕ್ಕೆ ಬಂದು ಬೆಳಗ್ಗಿನ ಪೂಜೆ ಸಮಯದಲ್ಲಿ ದೇಗುಲದಲ್ಲಿ ಯಾವುದೇ ಅವ್ಯವಹಾರ ನಾನು ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಿದವರಿಗೆ ಸದಾಶಿವ ದೇವರು ಹಾಗೂ ಪರಿವಾರ ದೈವಗಳು ಉತ್ತರ ನೀಡಲಿ ಎಂದು ಪ್ರಮಾಣ ಮಾಡಿದ್ದೇನೆ.
ಆರೋಪ ಮಾಡಿದವರೂ ಪ್ರಮಾಣಕ್ಕೆ ಬರಲಿ ಎಂದು ಪತ್ರಿಕಾ ಹೇಳಿಕೆಯ ಮೂಲಕ ತಿಳಿಸಿದ್ದೆ‌. ಇದಕ್ಕೆ ಉತ್ತರವಾಗಿ ದೇವಸ್ಥಾನ ಹಿತರಕ್ಷಣಾ ಸಮಿತಿಯ ಹೆಸರಿನಲ್ಲಿ ಪತ್ರಿಕಾ ಹೇಳಿಕೆ ನೀಡಿ, “ಆತ್ಮ ಸಾಕ್ಷಿಗಿಂತ ಮಿಗಿಲಾದ ಪ್ರಮಾಣವಿದೆಯೇ” ಎಂದು ಪ್ರತಿಕ್ರಿಯೆ ನೀಡಿದ್ದರು. ಹೀಗಾಗಿ ಪ್ರಮಾಣದ ಸಂದರ್ಭದಲ್ಲಿ ಆರೋಪ ಮಾಡಿದವರು ಉಪಸ್ಥಿತರಿರಲಿಲ್ಲ.
“ದೇವರ ಸೇವೆ ಮಾಡುವ ನನಗೆ ದೇವರೇ ಆತ್ಮಸಾಕ್ಷಿ. ಹೀಗಾಗಿ ಸುಳ್ಳು ಆರೋಪಗಳಿಂದ ಬೇಸರ ಹೊಂದಿ ಆತ್ಮಸಾಕ್ಷಿಯಿಂದಲೇ ಪ್ರಮಾಣ ಮಾಡಿದ್ದೇನೆ. ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷತೆ ದೇವರ ಸೇವೆ ಮಾಡುವ ಅವಕಾಶ ಎಂದು ಭಾವಿಸಿದವನೇ ಹೊರತು ಅಧಿಕಾರ ಎಂದು ನಾನು ಭಾವಿಸಿಲ್ಲ. ಈ ಸ್ಥಾನ ಶಾಶ್ವತ ಅಲ್ಲ ಎಂಬ ತಿಳುವಳಿಕೆ ನನಗೆ ಇದೆ. ದೇವರಲ್ಲಿ ಭಕ್ತಿ ಮತ್ತು ನಂಬಿಕೆ, ಕಾನೂನಿನಲ್ಲಿ ವಿಶ್ವಾಸ ನನಗೆ ಇದೆ. ಹಾಗಾಗಿಯೇ ಎಲ್ಲದರಲ್ಲೂ ತಪ್ಪು ಹುಡುಕುವ, ಸಾಮಾಜಿಕ ಜಾಲತಾಣಗಳಲ್ಲಿ ನಿಂದಿಸುವವರಿಗೆ ಯಾವುದೇ ಪ್ರತಿಕ್ರಿಯೆ ನೀಡದೆ ನನ್ನ ಎಲ್ಲ ಭಾವನೆಯನ್ನು ಎಲ್ಲವನ್ನೂ ದೇವರ ಮುಂದಿಟ್ಟಿದ್ದೇನೆ. ಎಷ್ಟು ದಿವಸ ಈ ಸ್ಥಾನದಲ್ಲಿ ಇರುತ್ತೇನೆಯೋ ಅಷ್ಟು ದಿನ ದೇವಳದ ಕೆಲಸ ಮಾಡುತ್ತೇನೆ. ಭಕ್ತನಾಗಿ ಮುಂದೆಯೂ ಸೇವೆ ಮಾಡುತ್ತೇನೆ. ಸತ್ಯ ಏನು ಮತ್ತು ಈ ಬೆಳವಣಿಗೆಗಳ ಹಿಂದಿನ ಕಾರಣ ಏನು ಎಂಬುದನ್ನು ಶ್ರೀ ಸದಾಶಿವ ಪರಿವಾರ ಪಂಚಲಿಂಗೇಶ್ವರ ದೇವರು ಖಂಡಿತ ತೋರಿಸಿಕೊಡುತ್ತಾರೆ ಎಂಬ ವಿಶ್ವಾಸ ನನಗಿದೆ. ನನ್ನನ್ನು ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರಾಗಿ ಆಯ್ಕೆ ಮಾಡಿದವರು ಸೂಚಿಸಿದರೆ ನಾನು ರಾಜೀನಾಮೆ ಕೊಡಲು ಸಿದ್ಧನಿದ್ದೇನೆ” ಎಂದು ಡಾ. ದೇವಿಪ್ರಸಾದ್‌ ಕಾನತ್ತೂರ್‌ ತಿಳಿಸಿದ್ದಾರೆ.































Leave a Comment

Your email address will not be published. Required fields are marked *

error: Content is protected !!
Scroll to Top