ಸಂಪಾಜೆ ಗ್ರಾಮ ಪಂಚಾಯತ್‌ನಲ್ಲಿ ನೀರು ನೈರ್ಮಲ್ಯ ಸಮಿತಿ ಸಭೆ

ಸಂಪಾಜೆ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನೀರು ನೈರ್ಮಲ್ಯ ಸಮಿತಿ ಸಭೆ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಪ್ರಮೋದ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಸ್ವಚ್ಛತೆ ಹಾಗೂ ನೈರ್ಮಲ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಚರ್ಚಿಸಲಾಯಿತು. ಪಂಚಾಯತ್ ವ್ಯಾಪ್ತಿಯಲ್ಲಿ ಕಸ ವಿಲೇವಾರಿಯನ್ನು ಸಮರ್ಪಕವಾಗಿ ನಿರ್ವಹಿಸಲು ಟೆಂಡರ್ ಕರೆದು ಕಾರ್ಯನಿರ್ವಹಣಾಧಿಕಾರಿಯ ಅನುಮತಿ ಪಡೆಯುವ ಬಗ್ಗೆ ನಿರ್ಧರಿಸಲಾಯಿತು.
ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ನಿಯಮಿತವಾಗಿ ಸ್ವಚ್ಛಗೊಳಿಸುವುದು, ಸಾರ್ವಜನಿಕರಿಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಹಾಗೂ ನೀರಿನ ವ್ಯವಸ್ಥೆಯಲ್ಲಿರುವ ಸಮಸ್ಯೆಗಳನ್ನು ಪರಿಹರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು. ಕೈಪಡ್ಕ ಭಾಗದ ಪೈಪ್‌ಲೈನ್ ದುರಸ್ತಿ ಹಾಗೂ ಪೇರಡ್ಕ ಜಾಕ್ವೆಲ್ ದುರಸ್ತಿ ಬಗ್ಗೆಯೂ ಚರ್ಚಿಸಲಾಯಿತು.
ಇದಲ್ಲದೆ, ಬೀದಿ ದೀಪಗಳ ದುರಸ್ತಿ, ಕಸ ವಿಲೇವಾರಿಯ ಸಮರ್ಪಕ ನಿರ್ವಹಣೆ ಹಾಗೂ ಪೇಟೆ ಪ್ರದೇಶದಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕಾಪಾಡುವ ಬಗ್ಗೆ ಗಮನ ಹರಿಸಲಾಯಿತು. ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸುವಂತೆ ಆರೋಗ್ಯ ಮತ್ತು ಆಶಾ ಕಾರ್ಯಕರ್ತೆಯರಿಗೆ ಸೂಚಿಸಲಾಯಿತು.
ಸಭೆಯಲ್ಲಿ ಅಭಿವೃದ್ಧಿ ಅಧಿಕಾರಿ ಸರಿತಾ ಡಿಸೋಜ ಅವರು ಪಂಚಾಯತ್ ವ್ಯಾಪ್ತಿಯ ಕುಡಿಯುವ ನೀರಿನ ವ್ಯವಸ್ಥೆಯ ಸಾಧಕ-ಬಾಧಕಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರು ಹಾಗೂ ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ಜಿ.ಕೆ. ಹಮೀದ್ ಗೂನಡ್ಕ, ಮಾಜಿ ಉಪಾಧ್ಯಕ್ಷರು ಹಾಗೂ ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ಎಸ್.ಕೆ. ಹನೀಫ್, ನೀರು ನೈರ್ಮಲ್ಯ ಸಮಿತಿ ಸದಸ್ಯರಾದ ನಾಗೇಶ್ ಪಿ.ಆರ್., ಕಾರ್ಯದರ್ಶಿ ತಿರುಮಲೇಶ್ವರ, ಆಶಾ ಕಾರ್ಯಕರ್ತೆಯರಾದ ಸವಿತಾ ಹಾಗೂ ಸೌಮ್ಯ, ಸ್ವಚ್ಛತಾ ದೂತರು, ಸ್ವಚ್ಛತಾ ಸಮಿತಿ ಸದಸ್ಯರು ಹಾಗೂ ಪಂಚಾಯತ್ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.































Leave a Comment

Your email address will not be published. Required fields are marked *

error: Content is protected !!
Scroll to Top