ಅಡ್ತಲೆ: ಸ್ಪಂದನ ಗೆಳೆಯರ ಬಳಗ (ರಿ.) ಅಡ್ತಲೆ ಇವರ ವತಿಯಿಂದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆಯು ಸೆ. 13ರಂದು ಅಡ್ತಲೆ ಶಾಲಾ ವಠಾರದಲ್ಲಿ ಸಂಭ್ರಮದಿಂದ ನಡೆಯಿತು.
ಬೆಳಗ್ಗೆ ನಡೆದ ಉದ್ಘಾಟನಾ ಕಾರ್ಯಕ್ರಮವನ್ನು ಅಡ್ತಲೆ-ಬೆದ್ರುಪಣೆ ಉಲ್ಲಾಕುಳು ಮತ್ತು ಮಲೆದೈವಗಳ ಚಾವಡಿಯ ಪೂಜಾರಿ ಚಂದ್ರಶೇಖರ ಬೆದ್ರುಪಣೆ ನೆರವೇರಿಸಿದರು. ಅಡ್ತಲೆ ಶಾಲಾ ಪ್ರಭಾರ ಮುಖ್ಯ ಶಿಕ್ಷಕ ಮುಕುಂದ ಡಿ. ಹಾಗೂ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ಅಧ್ಯಕ್ಷ ಹರಿಪ್ರಸಾದ್ ಅಡ್ತಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಬಳಿಕ ಶ್ರೀ ಕೃಷ್ಣ ವೇಷ ಸ್ಪರ್ಧೆ, ರಸಪ್ರಶ್ನೆ ಸೇರಿದಂತೆ ದಂಪತಿಗಳು, ಹಿರಿಯ ನಾಗರಿಕರು, ಮಕ್ಕಳು ಹಾಗೂ ಸಾರ್ವಜನಿಕರಿಗಾಗಿ ವಿವಿಧ ಮನೋರಂಜನಾ ಕ್ರೀಡಾ ಸ್ಪರ್ಧೆಗಳು ನಡೆದವು.
ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಸ್ಪಂದನ ಗೆಳೆಯರ ಬಳಗದ ಅಧ್ಯಕ್ಷ ವಿನಯ್ ಬೆದ್ರುಪಣೆ ವಹಿಸಿದ್ದರು. ಅರಂತೋಡು ಗ್ರಾಮ ಪಂಚಾಯತ್ ನಿಕಟಪೂರ್ವ ಅಧ್ಯಕ್ಷ ಕೇಶವ ಅಡ್ತಲೆ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್., ಯುವಜನ ಸಂಯುಕ್ತ ಮಂಡಳಿ (ರಿ.) ಸುಳ್ಯ ಅಧ್ಯಕ್ಷ ಪವನ್ ಪಲ್ಲತ್ತಡ್ಕ, ಅರಂತೋಡು-ತೊಡಿಕಾನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಉಪಾಧ್ಯಕ್ಷ ಡಾ. ಲಕ್ಷ್ಮೀಶ್ ಕೆ.ಎಸ್., ನೆಹರು ಮೆಮೋರಿಯಲ್ ಪ್ರೌಢಶಾಲೆಯ ಮುಖ್ಯ ಶಿಕ್ಷಕ ಸೋಮಶೇಖರ ಪಿಂಡಿಮನೆ, ಮಾಜಿ ಸೈನಿಕ ನವೀನ್ ಪಿಂಡಿಮನೆ, ಅಡ್ತಲೆ ಶಾಲಾ ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಭವಾನಿಶಂಕರ ಅಡ್ತಲೆ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಲೋಹಿತ್ ಮೇಲಡ್ತಲೆ ಹಾಗೂ ಚಂದನ ಯುವತಿ ಮಂಡಲದ ಅಧ್ಯಕ್ಷೆ ಸರಸ್ವತಿ ಅಡ್ತಲೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರಾದ ಕಿಶೋರ್ ಕುಮಾರ್ ಕಿರ್ಲಾಯ ಅವರನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.
ಕ್ರೀಡಾ ಕಾರ್ಯದರ್ಶಿ ರತನ್ ಕಿರ್ಲಾಯ ಸ್ವಾಗತಿಸಿದರು. ಜೊತೆ ಕಾರ್ಯದರ್ಶಿ ಕಿಶೋರ್ ಅಡ್ಕ ವಂದಿಸಿದರು. ಮಾಧ್ಯಮ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ರಂಜಿತ್ ಅಡ್ತಲೆ ಕಾರ್ಯಕ್ರಮ ನಿರೂಪಿಸಿದರು.
ಊರಿನ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು. ಸ್ಪಂದನ ಗೆಳೆಯರ ಬಳಗ ಹಾಗೂ ಚಂದನ ಯುವತಿ ಮಂಡಲದ ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಸ್ಪಂದನ ಗೆಳೆಯರ ಬಳಗದಿಂದ ಸಂಭ್ರಮದ 8ನೇ ವರ್ಷದ ಶ್ರೀ ಕೃಷ್ಣ ಜನ್ಮಾಷ್ಟಮಿ ಆಚರಣೆ

























