ಅ.5ರಂದು ಸುಳ್ಯದಲ್ಲಿ ಬೃಹತ್ ಜನಜಾಗೃತಿ ಸಮಾವೇಶ

ಸುಳ್ಯ, ಸೆ.26: ದುಶ್ಚಟ ಮುಕ್ತ ಸಮಾಜ ನಿರ್ಮಾಣ ಹಾಗೂ ವ್ಯಸನಮುಕ್ತ ಬದುಕಿನ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ದಕ್ಷಿಣ ಕನ್ನಡ ಜಿಲ್ಲೆ-2ರ ಆಶ್ರಯದಲ್ಲಿ ಅ.5ರಂದು ಸುಳ್ಯದಲ್ಲಿ ಗಾಂಧಿ ಸ್ಮೃತಿ ಮತ್ತು ಬೃಹತ್ ಜನಜಾಗೃತಿ ಸಮಾವೇಶ ನಡೆಯಲಿದೆ.
ಕೇರ್ಪಳ ಬೂಡು ಬಂಟರ ಸಮುದಾಯ ಭವನದಲ್ಲಿ øನಡೆಯಲಿರುವ ಸಮಾವೇಶದಲ್ಲಿ ಮೂರು ಸಾವಿರಕ್ಕೂ ಅಧಿಕ ಮಂದಿ ಪಾಲ್ಗೊಳ್ಳುವ ನಿರೀಕ್ಷೆಯಿದೆ ಎಂದು ಜಿಲ್ಲಾ ಜನಜಾಗೃತಿ ಸಮಿತಿ ಅಧ್ಯಕ್ಷ ವಿಶ್ವನಾಥ ರೈ ಕಳಂಜ, ತಾಲೂಕು ಜನಜಾಗೃತಿ ಸಮಿತಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ ಹಾಗೂ ಯೋಜನೆಯ ನಿರ್ದೇಶಕ ಬಾಬು ನಾಯ್ಕ ತಿಳಿಸಿದ್ದಾರೆ.
ಸೆ.26ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮದ ವಿವರ ನೀಡಿದ ಅವರು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಕುಮಾರಿ ಭಾಗೀರಥಿ ಮುರುಳ್ಯ ಸಮಾವೇಶವನ್ನು ಉದ್ಘಾಟಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ನವಜೀವನ ಸಮಿತಿ ಸದಸ್ಯರನ್ನು ಅಭಿನಂದಿಸಲಿದ್ದು, ಮಂಗಳೂರು ಲೋಕಸಭಾ ಕ್ಷೇತ್ರದ ಸಂಸದ ಕ್ಯಾ. ಬ್ರಿಜೇಶ್ ಚೌಟ ವಿವಿಧ ಅನುದಾನಗಳನ್ನು ವಿತರಿಸಲಿದ್ದಾರೆ. ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಅಧ್ಯಕ್ಷ ವಿಶ್ವನಾಥ ರೈ ಕಳಂಜ ಅಧ್ಯಕ್ಷತೆ ವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ನಟರಾಜ ಬಾದಾಮಿ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ., ಪುತ್ತೂರು ಪೊಲೀಸ್ ಉಪಾಧೀಕ್ಷಕ ಪ್ರಮೋದ್ ಕುಮಾರ್, ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಯೋಜನೆಯ ಸಿಇಒ ಅನಿಲ್ ಕುಮಾರ್ ಸೇರಿದಂತೆ ವಿವಿಧ ಗಣ್ಯರು
ಭಾಗವಹಿಸಲಿದ್ದಾರೆ.
33 ವರ್ಷಗಳಿಂದ ವ್ಯಸನಮುಕ್ತ ಸಮಾಜಕ್ಕಾಗಿ ಜಾಗೃತಿ
ಸುಮಾರು 33 ವರ್ಷಗಳ ಹಿಂದೆ ದುಶ್ಚಟ ಮುಕ್ತ ಸಮಾಜ ನಿರ್ಮಾಣದ ಆಶಯದೊಂದಿಗೆ ಆರಂಭಗೊಂಡ ಜನಜಾಗೃತಿ ವೇದಿಕೆ ಇದೀಗ 37 ಜಿಲ್ಲಾ ಹಾಗೂ 16 ತಾಲೂಕು ವೇದಿಕೆಗಳ ಮೂಲಕ ಕಾರ್ಯನಿರ್ವಹಿಸುತ್ತಿದ್ದು, 7 ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ ಎಂದು ತಿಳಿಸಿದರು.
1997ರಿಂದ ಈವರೆಗೆ 2,139 ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗಿದ್ದು, 1,40,983 ಮಂದಿ ವ್ಯಸನಮುಕ್ತ ಬದುಕಿನತ್ತ ಹೆಜ್ಜೆ ಇಡಲು ಅವಕಾಶ ಕಲ್ಪಿಸಲಾಗಿದೆ. ರಾಜ್ಯಾದ್ಯಂತ 3,100ಕ್ಕೂ ಅಧಿಕ ನವಜೀವನ ಸಮಿತಿಗಳು ಕಾರ್ಯನಿರ್ವಹಿಸುತ್ತಿದ್ದು, ಸದಸ್ಯರ ಯೋಗಕ್ಷೇಮ ಹಾಗೂ ಕುಟುಂಬಗಳ ಸುಸ್ಥಿರ ಬದುಕಿನ ಕುರಿತು ನಿರಂತರ ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಮದ್ಯಮುಕ್ತ ಊರಿಗಾಗಿ ಹಕ್ಕೊತ್ತಾಯ
‘ಮದ್ಯಮುಕ್ತ ಊರು ನಮ್ಮದಾಗಬೇಕು’ ಎಂಬ ಆಶಯದೊಂದಿಗೆ ಸಮಾವೇಶದಲ್ಲಿ ಹಕ್ಕೊತ್ತಾಯ ಮಂಡಿಸಲಾಗುವುದು. ಶಾಲಾ-ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ದುಶ್ಚಟಗಳ ವಿರುದ್ಧ ಅರಿವು ಮೂಡಿಸಲು ‘ಸ್ವಾಸ್ಥ್ಯ ಸಂಕಲ್ಪ’ ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಅ.2ರಿಂದ 16ರವರೆಗೆ ‘ದುಶ್ಚಟ ಮುಕ್ತ ಸಮಾಜ ನಿರ್ಮಾಣ ನಮ್ಮೆಲ್ಲರ ಹೊಣೆ’ ಎಂಬ ಧ್ಯೇಯವಾಕ್ಯದೊಂದಿಗೆ ಜನಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದು ಅವರು ಹೇಳಿದರು.
ಬೆಳಗ್ಗೆ ಬೃಹತ್ ಜಾಗೃತಿ ಜಾಥಾ
ಸಮಾವೇಶದ ಅಂಗವಾಗಿ ಅ.5ರಂದು ಬೆಳಗ್ಗೆ 8.30ಕ್ಕೆ ಸುಳ್ಯದ ಖಾಸಗಿ ಬಸ್ ನಿಲ್ದಾಣದಿಂದ ಬೃಹತ್ ಜನಜಾಗೃತಿ ಜಾಥಾ ಆರಂಭವಾಗಲಿದೆ. ಚೆನ್ನಕೇಶವ ದೇವಸ್ಥಾನದ ರಥಬೀದಿ ಮೂಲಕ ಕೇರ್ಪಳ ಬಂಟರ ಭವನದವರೆಗೆ ಜಾಥಾ ಸಾಗಲಿದೆ.
ನವಜೀವನ ಸಮಿತಿ ಸದಸ್ಯರು, ಜ್ಞಾನವಿಕಾಸ ಮಹಿಳಾ ಕೇಂದ್ರದ ಸದಸ್ಯರು, ಭಜಕರು, ಜನಜಾಗೃತಿ ವೇದಿಕೆ ಸದಸ್ಯರು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಜಾಥಾದಲ್ಲಿ ಪಾಲ್ಗೊಳ್ಳಲಿದ್ದಾರೆ. ಆಕರ್ಷಕ ವೇಷಭೂಷಣಗಳು, ಸ್ಥಬ್ಧಚಿತ್ರಗಳು ಹಾಗೂ ಚೆಂಡೆ ವಾದ್ಯದೊಂದಿಗೆ ಜಾಥಾ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ಯೋಜನಾಧಿಕಾರಿ ಮಾಧವ ಗೌಡ, ಜನಜಾಗೃತಿ ವೇದಿಕೆ ನಿಕಟಪೂರ್ವ ಅಧ್ಯಕ್ಷ ಪಿ.ಸಿ. ಜಯರಾಮ, ಒಕ್ಕೂಟದ ಅಧ್ಯಕ್ಷ ಸುರೇಶ್ ಕಣೆಮರಡ್ಕ, ಭಾಸ್ಕರ ಅಡ್ಕಾರ್ ಸುಬ್ಬಣ್ಣ ಕಾಂತಮಂಗಲ, ಬಾಲಸುಬ್ರಹ್ಮಣ್ಯ ಬೈತಡ್ಕ ಮತ್ತಿತರರು ಉಪಸ್ಥಿತರಿದ್ದರು.











































Leave a Comment

Your email address will not be published. Required fields are marked *

error: Content is protected !!
Scroll to Top