ಮಂಗಳೂರು, ಸೆ.30: ನಗರದ ಹೊರವಲಯದ ಕುತ್ಹೆತ್ತೂರು–ಜೋಕಟ್ಟೆ ಸಮೀಪದಲ್ಲಿರುವ ಮಂಗಳೂರು ರಿಫೈನರಿ ಅಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (ಎಂಆರ್ಪಿಎಲ್) ಕೈಗಾರಿಕಾ ಘಟಕದಲ್ಲಿ ಬುಧವಾರ ಮಧ್ಯಾಹ್ನ ಬೆಂಕಿ ಅವಘಡ ಸಂಭವಿಸಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
ಮಧ್ಯಾಹ್ನದ ವೇಳೆಯಲ್ಲಿ ಘಟಕದ ಕಡೆಯಿಂದ ಏಕಾಏಕಿ ಭಾರೀ ಸದ್ದು ಕೇಳಿಬಂದಿದ್ದು, ಕೆಲವೆಡೆ ಕಂಪನದ ಅನುಭವವೂ ಆಗಿದೆ ಎನ್ನಲಾಗಿದೆ. ಘಟಕದ ಕಡೆಯಿಂದ ದಟ್ಟ ಹೊಗೆ ಕಾಣಿಸಿಕೊಂಡಿರುವುದು ಸ್ಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಘಟನೆಯ ಬೆನ್ನಲ್ಲೇ ಎಂಆರ್ಪಿಎಲ್ನ ಅಗ್ನಿಶಾಮಕ ಹಾಗೂ ತುರ್ತು ಸುರಕ್ಷತಾ ತಂಡಗಳು ಕಾರ್ಯಾಚರಣೆಗೆ ಮುಂದಾಗಿವೆ ಎಂದು ತಿಳಿದುಬಂದಿದೆ. ಬೆಂಕಿ ಯಾವ ಘಟಕದಲ್ಲಿ ಕಾಣಿಸಿಕೊಂಡಿತು ಹಾಗೂ ಅದರ ನಿಖರ ಕಾರಣವೇನು ಎಂಬುದು ಇನ್ನಷ್ಟೇ ಸ್ಪಷ್ಟವಾಗಬೇಕಿದೆ.
ಘಟನೆಯಿಂದ ಯಾವುದೇ ಪ್ರಾಣಹಾನಿ ಅಥವಾ ಗಾಯಾಳುಗಳಾಗಿರುವ ಬಗ್ಗೆ ಈ ಕ್ಷಣಕ್ಕೆ ಅಧಿಕೃತ ದೃಢೀಕರಣ ಲಭ್ಯವಾಗಿಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ವಿವಿಧ ರೀತಿಯ ಮಾಹಿತಿಗಳು ಹರಿದಾಡುತ್ತಿರುವುದರಿಂದ ಅಧಿಕೃತ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ.
ಘಟನೆಯ ಹಿನ್ನೆಲೆಯಲ್ಲಿ ಕೈಗಾರಿಕಾ ಪ್ರದೇಶದ ಸುತ್ತಮುತ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, ಪರಿಸ್ಥಿತಿಯ ಮೇಲೆ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿದ್ದಾರೆ
ಎಂಆರ್ಪಿಎಲ್ನಲ್ಲಿ ಬೆಂಕಿ ಅವಘಡ; ಭಾರೀ ಸದ್ದಿಗೆ ಬೆಚ್ಚಿಬಿದ್ದ ಮಂಗಳೂರು











