ಮಂಗಳೂರು: ನಗರದ ಹೊರವಲಯದ ಜೋಕಟ್ಟೆಯಲ್ಲಿರುವ ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL)ನ ಸಿಎಚ್‌ಟಿ ಘಟಕದಲ್ಲಿ ಬುಧವಾರ ಮಧ್ಯಾಹ್ನ ಸಂಭವಿಸಿದ ಭೀಕರ ಸ್ಫೋಟದಲ್ಲಿ ಓರ್ವ ಸಿಬ್ಬಂದಿ ಮೃತಪಟ್ಟಿದ್ದು, 9 ಮಂದಿ ಗಾಯಗೊಂಡಿರುವ ಘಟನೆ ಆತಂಕಕ್ಕೆ ಕಾರಣವಾಗಿದೆ.
ಮಧ್ಯಾಹ್ನ ಸುಮಾರು 12.15ರ ವೇಳೆಗೆ ಎಂಆರ್‌ಪಿಎಲ್‌ನ ಮೂರನೇ ಹಂತದ ಘಟಕದಲ್ಲಿರುವ ಕೋಕರ್ ಹೈಡ್ರೋಟ್ರೀಟರ್ ಯುನಿಟ್‌ನ ಹೈಡ್ರೋ ಸಲ್ಫರ್ ಟ್ರೀಟ್‌ಮೆಂಟ್ ವಿಭಾಗದಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ಬೆನ್ನಲ್ಲೇ ಘಟಕದಲ್ಲಿ ಬೆಂಕಿ ಹಾಗೂ ದಟ್ಟ ಹೊಗೆ ಆವರಿಸಿಕೊಂಡಿದ್ದು, ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಘಟನೆಯ ಸಂದರ್ಭದಲ್ಲಿ ನಾಪತ್ತೆಯಾಗಿದ್ದ 30 ವರ್ಷದ ಸಿಬ್ಬಂದಿ ಮನೀಶ್ ಕರ್ಕರ ಅವರಿಗಾಗಿ ಅಗ್ನಿಶಾಮಕ ದಳ ಹಾಗೂ ಆಪತ್ತು ನಿರ್ವಹಣಾ ತಂಡಗಳು ತೀವ್ರ ಶೋಧ ನಡೆಸಿದವು. ಕಾರ್ಯಾಚರಣೆಯ ವೇಳೆ ಘಟನಾ ಸ್ಥಳದಲ್ಲೇ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಘಟನೆಯಲ್ಲಿ ಗಾಯಗೊಂಡಿರುವ 9 ಮಂದಿಯನ್ನು ಮಂಗಳೂರಿನ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇವರಲ್ಲಿ ಶೇ.35ರಷ್ಟು ಸುಟ್ಟಗಾಯಗಳಾಗಿರುವ ಇಬ್ಬರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತರ ಗಾಯಾಳುಗಳಿಗೆ ಎ.ಜೆ. ಆಸ್ಪತ್ರೆ, ಶ್ರೀನಿವಾಸ ಆಸ್ಪತ್ರೆ ಸೇರಿದಂತೆ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮುಂದುವರಿದಿದೆ.
ಶಿಫ್ಟ್ ಬದಲಾವಣೆಯಿಂದ ತಪ್ಪಿದ ಭಾರೀ ಅನಾಹುತ
ಬೆಳಗ್ಗೆ 11.30ರ ಸುಮಾರಿಗೆ ಶಿಫ್ಟ್ ಬದಲಾವಣೆಯಾಗಿದ್ದರಿಂದ ಹಲವು ಕಾರ್ಮಿಕರು ಘಟಕದಿಂದ ಹೊರ ತೆರಳಿದ್ದರು ಎನ್ನಲಾಗಿದೆ. ಇದರಿಂದ ಸ್ಫೋಟ ಸಂಭವಿಸಿದ ವೇಳೆ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಘಟಕದೊಳಗೆ ಇರಲಿಲ್ಲ. ಇಲ್ಲದಿದ್ದರೆ ಅನಾಹುತದ ಪ್ರಮಾಣ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಸ್ಫೋಟದ ಬಳಿಕ ಕೆಲಕಾಲ ಆವರಿಸಿದ್ದ ಬೆಂಕಿ ಮತ್ತು ದಟ್ಟ ಹೊಗೆಯನ್ನು ನಿಯಂತ್ರಣಕ್ಕೆ ತರಲಾಗಿದ್ದು, ಅಗ್ನಿಶಾಮಕ ಹಾಗೂ ತುರ್ತು ನಿರ್ವಹಣಾ ತಂಡಗಳು ಕಾರ್ಯಾಚರಣೆ ಪೂರ್ಣಗೊಳಿಸಿವೆ.
ಹಲವು ಕಿ.ಮೀ. ವ್ಯಾಪ್ತಿಯಲ್ಲಿ ಸ್ಫೋಟದ ಕಂಪನ
ಸ್ಫೋಟದ ತೀವ್ರತೆಗೆ ಜೋಕಟ್ಟೆ, ಬಜ್ಪೆ, ಕಾನ, ಕಾಟಿಪಳ್ಳ, ಕುಲಾಯಿ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಕೆಲವು ಮನೆಗಳ ಕಿಟಕಿ ಗಾಜುಗಳು ಒಡೆದಿದ್ದು, ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿರುವ ಬಗ್ಗೆ ವರದಿಯಾಗಿದೆ.
ಘಟನೆಯ ಹಿನ್ನೆಲೆಯಲ್ಲಿ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಹಾಗೂ ಎಂಆರ್‌ಪಿಎಲ್‌ನ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಪರಿಶೀಲಿಸುತ್ತಿದ್ದಾರೆ. ಸ್ಫೋಟಕ್ಕೆ ನಿಖರ ಕಾರಣವೇನು ಎಂಬುದರ ಕುರಿತು ತನಿಖೆ ನಡೆಯುತ್ತಿದೆ.
ಹಿಂದೆಯೂ ನಡೆದಿದ್ದ ದುರಂತಗಳು
ಎಂಆರ್‌ಪಿಎಲ್‌ನಲ್ಲಿ ಈ ಹಿಂದೆಯೂ ಹಲವು ಅವಘಡಗಳು ಸಂಭವಿಸಿದ್ದವು. 2025ರ ಜುಲೈನಲ್ಲಿ ಹೈಡ್ರೋಜನ್ ಸಲ್ಫೈಡ್ ಅನಿಲ ಸೋರಿಕೆಯಿಂದ ಇಬ್ಬರು ಹಿರಿಯ ಆಪರೇಟರ್‌ಗಳು ಮೃತಪಟ್ಟಿದ್ದರು. 2012ರಲ್ಲಿ ಸಲ್ಫರ್ ರಿಕವರಿ ಘಟಕದಲ್ಲಿ ಸಂಭವಿಸಿದ ಸ್ಫೋಟ ಮತ್ತು ಬೆಂಕಿಯಲ್ಲಿ ಓರ್ವ ಗುತ್ತಿಗೆ ಕಾರ್ಮಿಕ ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದರು. 2011ರಲ್ಲಿಯೂ ಸ್ಫೋಟವೊಂದರಲ್ಲಿ ಓರ್ವ ಕಾರ್ಮಿಕ ಮೃತಪಟ್ಟಿದ್ದ ಘಟನೆ ನಡೆದಿತ್ತು.
ಮತ್ತೊಮ್ಮೆ ಎಂಆರ್‌ಪಿಎಲ್‌ನಲ್ಲಿ ಸ್ಫೋಟ ಸಂಭವಿಸಿ ಜೀವಹಾನಿಯಾಗಿರುವುದು ಕಾರ್ಮಿಕರ ಸುರಕ್ಷತೆ ಹಾಗೂ ಕೈಗಾರಿಕಾ ಘಟಕಗಳಲ್ಲಿನ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮಂಗಳೂರು : ಎಂ.ಆರ್.ಪಿ.ಎಲ್ ಅಗ್ನಿ ದುರಂತ ಓರ್ವ ಸಾವು,9 ಮಂದಿಗೆ ಗಾಯ











