ಸುಳ್ಯ, ಅ.24: ಒಂದೆಡೆ ಮಳೆಯ ಹನಿಗಳ ಸಿಂಚನ, ಮತ್ತೊಂದೆಡೆ ಭಕ್ತರ ಮನದಲ್ಲಿ ಭಕ್ತಿಯ ಭಾವಧಾರೆ. ಶ್ರೀ ಶಾರದಾಂಬೆಯ ಆರಾಧನೆಯ ಸಂಭ್ರಮ, ದೇವಿಯ ದರ್ಶನದ ಕಾತರ ಹಾಗೂ ಕಲಾತಂಡಗಳ ವೈಭವದೊಂದಿಗೆ ಸುಳ್ಯ ದಸರಾ ಉತ್ಸವದ ಅಂಗವಾಗಿ ಶನಿವಾರ ನಡೆದ ಶ್ರೀ ಶಾರದಾದೇವಿಯ ಭವ್ಯ ಶೋಭಾಯಾತ್ರೆ ಭಕ್ತಿಪರವಶ ವಾತಾವರಣದಲ್ಲಿ ಸಂಪನ್ನಗೊಂಡಿತು.
ಶ್ರೀ ಶಾರದಾಂಬಾ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ನಡೆದ ಉತ್ಸವದ ಶೋಭಾಯಾತ್ರೆಗೆ ಶಾಸಕಿ ಭಾಗೀರಥಿ ಮುರುಳ್ಯ ಚಾಲನೆ ನೀಡಿದರು. ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನದ ಮುಂಭಾಗದಿಂದ ಆರಂಭಗೊಂಡ ಮೆರವಣಿಗೆ ಓಡಬಾಯಿಗೆ ತಲುಪಿತು. ಬಳಿಕ ವಿವಿಧ ಆಕರ್ಷಕ ಟ್ಯಾಬ್ಲೊಗಳು ಹಾಗೂ ಕಲಾತಂಡಗಳೊಂದಿಗೆ ಮುಖ್ಯರಸ್ತೆಯಲ್ಲಿ ಸಾಗಿದ ಶೋಭಾಯಾತ್ರೆ ಪಯಸ್ವಿನಿ ನದಿಯಲ್ಲಿ ಜಲಸ್ತಂಭನದೊಂದಿಗೆ ಸಂಪನ್ನಗೊಂಡಿತು.
ಮಳೆಯ ನಡುವೆಯೂ ಭಕ್ತಿಯ ಸಂಭ್ರಮ
ಮಳೆ ಸುರಿಯುತ್ತಿದ್ದರೂ ಭಕ್ತರ ಉತ್ಸಾಹಕ್ಕೆ ಯಾವುದೇ ಕುಂದುಂಟಾಗಲಿಲ್ಲ. ದೇವಿಯ ಆರಾಧನೆಯ ಸಂಭ್ರಮದಲ್ಲಿ ಪಾಲ್ಗೊಂಡ ಭಕ್ತರು ಹಾಗೂ ಸಾರ್ವಜನಿಕರು ಶೋಭಾಯಾತ್ರೆಯ ವೈಭವವನ್ನು ಕಣ್ತುಂಬಿಕೊಂಡರು. ಭಕ್ತಿಯ ವಾತಾವರಣದ ನಡುವೆ ಸಾಗಿದ ಮೆರವಣಿಗೆಯು ಧಾರ್ಮಿಕ ಶ್ರದ್ಧೆ ಮತ್ತು ಸಾಂಸ್ಕೃತಿಕ ಪರಂಪರೆಯ ಸೊಬಗನ್ನು ಅನಾವರಣಗೊಳಿಸಿತು.
ಕೇರಳ, ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಆಗಮಿಸಿದ್ದ ಕಲಾತಂಡಗಳ ವೈವಿಧ್ಯಮಯ ನೃತ್ಯ ಪ್ರದರ್ಶನಗಳು ಮೆರವಣಿಗೆಗೆ ವಿಶೇಷ ಮೆರುಗು ನೀಡಿದವು. ಆಕರ್ಷಕ ಟ್ಯಾಬ್ಲೊಗಳು, ವರ್ಣರಂಜಿತ ಅಲಂಕಾರಗಳು ಹಾಗೂ ಕಲಾವಿದರ ಮನಮೋಹಕ ಪ್ರದರ್ಶನಗಳು ಸಾರ್ವಜನಿಕರ ಗಮನ ಸೆಳೆದವು. ಪ್ರತಿಕೂಲ ಹವಾಮಾನದ ನಡುವೆಯೂ ಉತ್ಸವದ ಸಂಭ್ರಮ ಕಳೆಗುಂದಲಿಲ್ಲ.
ವಾಹನ ಸಂಚಾರಕ್ಕೆ ತೊಂದರೆಯಾಗದಂತೆ ಈ ಬಾರಿ ವಿಶೇಷ ವ್ಯವಸ್ಥೆ ಮಾಡಲಾಗಿತ್ತು. ಶೋಭಾಯಾತ್ರೆಯನ್ನು ಓಡಬಾಯಿಯಿಂದ ಮುಂದುವರಿಸುವ ಮೂಲಕ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗಿತ್ತು.
ಗಣ್ಯರ ಉಪಸ್ಥಿತಿ
ಶ್ರೀ ಶಾರದಾಂಬಾ ಸೇವಾ ಸಮಿತಿ ಅಧ್ಯಕ್ಷ ನಾರಾಯಣ ಕೇಕಡ್ಕ, ಉತ್ಸವ ಸಮಿತಿ ಅಧ್ಯಕ್ಷ ಡಾ. ಡಿ.ವಿ. ಲೀಲಾಧರ, ಕೃಷ್ಣ ಕಾಮತ್ ಅರಂಬೂರು, ಗೋಕುಲ್ ದಾಸ್, ಎಂ.ಕೆ. ಸತೀಶ್, ನವೀನ್ ಚಂದ್ರ, ಸಂತೋಷ್ ಕುತ್ತಮೊಟ್ಟೆ, ಬೂಡು ರಾಧಾಕೃಷ್ಣ ರೈ, ರಾಜು ಪಂಡಿತ್, ಸುನಿಲ್ ಕೇರ್ಪಳ, ರವಿಚಂದ್ರ ಕೊಡಿಯಾಲಬೈಲು, ಚಂದ್ರಶೇಖರ ಪಂಡಿತ್, ಲತಾ ಮಧುಸೂದನ್ ಸೇರಿದಂತೆ ಸಮಿತಿಯ ಪದಾಧಿಕಾರಿಗಳು ಹಾಗೂ ಗಣ್ಯರು ಉಪಸ್ಥಿತರಿದ್ದರು.
ಮಳೆಯ ಹನಿಗಳ ನಡುವೆಯೂ ಭಕ್ತಿಯ ಅಲೆ; ವೈಭವದಿಂದ ಕಂಗೊಳಿಸಿದ ಸುಳ್ಯ ದಸರಾ ಶೋಭಾಯಾತ್ರೆ














