ಅಡಿಕೆ ಬೆಳೆ ಸಮಸ್ಯೆಗಳ ಪರಿಹಾರಕ್ಕೆ ಸಂಶೋಧನೆ: ಅರಂತೋಡಿನಲ್ಲಿ ರೈತರೊಂದಿಗೆ ಸಂವಾದ

ಸುಳ್ಯ: ಅಡಿಕೆ ಬೆಳೆಯನ್ನು ಬಾಧಿಸುತ್ತಿರುವ ವಿವಿಧ ಸಮಸ್ಯೆಗಳ ಮೂಲ ಕಾರಣಗಳನ್ನು ಪತ್ತೆಹಚ್ಚಿ, ವೈಜ್ಞಾನಿಕ ಸಂಶೋಧನೆಯ ಮೂಲಕ ಪರಿಹಾರ ಕಂಡುಕೊಳ್ಳುವ ಉದ್ದೇಶದಿಂದ ಅರಂತೋಡಿನಲ್ಲಿ ರೈತರೊಂದಿಗೆ ಸಂವಾದ ಕಾರ್ಯಕ್ರಮ ನಡೆಯಿತು.





















ಕರ್ನಾಟಕ ರಾಜ್ಯ ಅಡಿಕೆ ಸಹಕಾರ ಸಂಘಗಳ ಮಹಾಮಂಡಳ ನಿಯಮಿತ, ಶಿವಮೊಗ್ಗ, ಪ್ರಯೋಗ ಸಂಸ್ಥೆ, ಬೆಂಗಳೂರು ಹಾಗೂ ದಿ ಕ್ಯಾಂಪ್ಕೋ ಲಿಮಿಟೆಡ್, ಮಂಗಳೂರು ಇವುಗಳ ಸಹಯೋಗದಲ್ಲಿ ಅ. 27ರಂದು ಅರಂತೋಡಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ಭಾಗದ ಅಡಿಕೆ ಬೆಳೆಗಾರರಿಗಾಗಿ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅರಂತೋಡು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ್ ಕುತಮೊಟ್ಟೆ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಅಡಿಕೆ ಬೆಳೆಗೆ ಎದುರಾಗುತ್ತಿರುವ ರೋಗಬಾಧೆ, ಬೆಳೆಗಾರರು ಅನುಭವಿಸುತ್ತಿರುವ ಸಮಸ್ಯೆಗಳು ಹಾಗೂ ಅವುಗಳಿಗೆ ವೈಜ್ಞಾನಿಕವಾಗಿ ಪರಿಹಾರ ಕಂಡುಕೊಳ್ಳುವ ಕುರಿತು ಪ್ರಯೋಗ ಸಂಸ್ಥೆಯ ವಿಜ್ಞಾನಿಗಳು ಮಾಹಿತಿ ನೀಡಿದರು. ಬಳಿಕ ವಿಜ್ಞಾನಿಗಳು ಮತ್ತು ರೈತರ ನಡುವೆ ಸಂವಾದ ನಡೆಯಿತು.

ಹಳದಿ ರೋಗದ ಬಗ್ಗೆ ರೈತರ ಚರ್ಚೆ

ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಹಳದಿ ರೋಗದ ನಿವಾರಣೆ ಕುರಿತು ರೈತರು ವಿಜ್ಞಾನಿಗಳೊಂದಿಗೆ ಚರ್ಚಿಸಿ, ಸಮಸ್ಯೆಯ ತೀವ್ರತೆ ಹಾಗೂ ಪರಿಹಾರದ ಸಾಧ್ಯತೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಂಡರು. ರಮೇಶ್ ದೇಲಂಪಾಡಿ, ಉಮಾಶಂಕರ ಅಡ್ಯಡ್ಕ, ಕೆ.ಪಿ. ಜಗದೀಶ್, ಪ್ರಶಾಂತ್ ಕಾಪಿಲ, ಶ್ರೀನಿವಾಸ್ ನಿಡಿಂಜಿ ಹಾಗೂ ಅಲ್ತಾಫ್ ಪೆರಾಜೆ ಮೊದಲಾದವರು ಚರ್ಚೆಯಲ್ಲಿ ಪಾಲ್ಗೊಂಡರು.

ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ, ನಿರ್ದೇಶಕರಾದ ತೀರ್ಥರಾಮ ಎ.ವಿ., ಗಣೇಶ್ ಮತ್ತು ಮಾಲಿನಿ ಪ್ರಸಾದ್, ಪ್ರಯೋಗ ಸಂಸ್ಥೆಯ ವೈಜ್ಞಾನಿಕ ಸಂಶೋಧನಾ ಸಲಹೆಗಾರ ಡಾ. ವಿದ್ಯಾಶಂಕರ್ ಬುರವಲ್ಲ, ಹಿರಿಯ ವಿಜ್ಞಾನಿ ಡಾ. ವೆಂಕಟ ಕೃಷ್ಣ ಬಾಯಿನೇನಿ ಹಾಗೂ ಯೋಜನಾ ಸಂಯೋಜಕ ರಮೇಶ್ ಟಿ.ಆರ್. ಉಪಸ್ಥಿತರಿದ್ದರು. ಕ್ಯಾಂಪ್ಕೋ ಕೃಷಿ ಅಧಿಕಾರಿ ಕೃಷ್ಣ ಎನ್.ಆರ್. ಪ್ರಾಸ್ತಾವಿಕವಾಗಿ ಮಾತನಾಡಿದರು.

ಈ ಸಂದರ್ಭದಲ್ಲಿ ಸಂಪಾಜೆ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಮರ್ಕಂಜ ಸಹಕಾರಿ ಸಂಘದ ಅಧ್ಯಕ್ಷ ದಯಾನಂದ ಪುರ, ಉಬರಡ್ಕ ಸಹಕಾರಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಪಾನತ್ತಿಲ, ಪೆರಾಜೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಲೋಕೇಶ್ ಹೊದ್ದೆಟ್ಟಿ, ಸಂಪಾಜೆ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವೀರೇಂದ್ರ ಜೈನ್ ಹಾಗೂ ಅರಂತೋಡು ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಾಸುದೇವ ನಾಯಕ್ ಉಪಸ್ಥಿತರಿದ್ದರು.

ಅರಂತೋಡು ಸಹಕಾರಿ ಸಂಘದ ವತಿಯಿಂದ ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್. ಸತೀಶ್ಚಂದ್ರ ಅವರನ್ನು ಸನ್ಮಾನಿಸಲಾಯಿತು. ಕ್ಯಾಂಪ್ಕೋ ನಿರ್ದೇಶಕ ತೀರ್ಥರಾಮ ಎ.ವಿ. ಸ್ವಾಗತಿಸಿದರು. ಕೃಷಿ ಅಧಿಕಾರಿ ಕೃಷ್ಣ ಎನ್.ಆರ್. ವಂದಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top