ಸುಳ್ಯ: ಅಕ್ರಮವಾಗಿ ಮರಳು ಸಾಗಾಟ ಮಾಡುತ್ತಿದ್ದ ಆರೋಪದ ಮೇರೆಗೆ ಸುಳ್ಯ ಪೊಲೀಸರು ಕಾರ್ಯಾಚರಣೆ ನಡೆಸಿ ಎರಡು ಈಚರ್ ವಾಹನಗಳನ್ನು ಮರಳು ಸಹಿತ ವಶಕ್ಕೆ ಪಡೆದಿದ್ದಾರೆ. ಅ. 29ರ ತಡರಾತ್ರಿ ಅರಂತೋಡು ಸಮೀಪ ಈ ಕಾರ್ಯಾಚರಣೆ ನಡೆದಿದೆ.
ತೊಡಿಕಾನದಿಂದ ಅರಂತೋಡು ಮಾರ್ಗವಾಗಿ ಎರಡು ಈಚರ್ ವಾಹನಗಳಲ್ಲಿ ಮರಳು ಸಾಗಿಸಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಹಿನ್ನೆಲೆಯಲ್ಲಿ ಸುಳ್ಯ ಪೊಲೀಸ್ ಠಾಣೆಯ ಉಪನಿರೀಕ್ಷಕ ಉದಯರವಿ ಅವರ ನೇತೃತ್ವದಲ್ಲಿ ಪೊಲೀಸ್ ತಂಡ ದಾಳಿ ನಡೆಸಿ ವಾಹನಗಳನ್ನು ವಶಕ್ಕೆ ಪಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಚರಣ್ ಅಡ್ಕಬಳೆ, ವಿಜಯೇಂದ್ರ ಮತ್ತು ದೀಕ್ಷಿತ್ ಎಂಬವರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿಸಿದ್ದಾರೆ.
ಇನ್ನು ಚರಣ್ ಅಡ್ಕಬಳೆ ಮತ್ತು ವಿಜಯೇಂದ್ರ ವಿರುದ್ಧ ಈ ಹಿಂದೆಯೂ ಅಕ್ರಮ ಮರಳು ಸಾಗಾಟಕ್ಕೆ ಸಂಬಂಧಿಸಿದ ಪ್ರಕರಣಗಳು ಸುಳ್ಯ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದವು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
















