ಅಜ್ಜಾವರ: ಕಾಂಗ್ರೆಸ್ ಸರಕಾರ ಅನುದಾನ ಹಂಚಿಕೆಯಲ್ಲಿ ತಾರತಮ್ಯ ಮಾಡುತ್ತಿದ್ದು, ಬಿಜೆಪಿ ಶಾಸಕರ ಕ್ಷೇತ್ರಗಳನ್ನು ಕಡೆಗಣಿಸುತ್ತಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಆರೋಪಿಸಿದರು.
ಬಿಜೆಪಿ ಅಜ್ಜಾವರ ಶಕ್ತಿ ಕೇಂದ್ರದ ವತಿಯಿಂದ ಅಜ್ಜಾವರ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ನಡೆದ ‘ನಮ್ಮ ಹಕ್ಕು ನಮಗೆ ನೀಡಿ’ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ಕೋಟ್ಯಂತರ ರೂಪಾಯಿ ಅನುದಾನ ನೀಡಲಾಗುತ್ತಿದೆ. ಆದರೆ ಬಿಜೆಪಿ ಶಾಸಕರ ಕ್ಷೇತ್ರಗಳಿಗೆ ಕಡಿಮೆ ಅನುದಾನ ನೀಡುವ ಮೂಲಕ ತಾರತಮ್ಯ ಮಾಡಲಾಗುತ್ತಿದೆ. ಅನುದಾನ ಹಂಚಿಕೆಯಲ್ಲಿ ಎಲ್ಲ ಕ್ಷೇತ್ರಗಳಿಗೂ ಸಮಾನ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಗ್ರಾಮ ಪಂಚಾಯತ್ ಚುನಾವಣೆ ನಡೆಸದೆ ಸರಕಾರ ವಿಳಂಬ ನೀತಿ ಅನುಸರಿಸುತ್ತಿರುವುದನ್ನು ಖಂಡಿಸಿದ ಅವರು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮಹತ್ವದ್ದಾಗಿದೆ. ಆದ್ದರಿಂದ ತಕ್ಷಣ ಗ್ರಾಮ ಪಂಚಾಯತ್ ಚುನಾವಣೆ ಘೋಷಿಸಬೇಕು ಎಂದು ಒತ್ತಾಯಿಸಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ ಹಾಗೂ ಕಾರ್ಯದರ್ಶಿ ವಿನಯ್ ಕಂದಡ್ಕ ಮಾತನಾಡಿದರು.
ಇದಕ್ಕೂ ಮುನ್ನ ಅಜ್ಜಾವರ ಮೇಲಿನ ಪೇಟೆಯಲ್ಲಿ ಸೇರಿದ ಬಿಜೆಪಿ ಕಾರ್ಯಕರ್ತರು ಮೆರವಣಿಗೆಯಲ್ಲಿ ಸಾಗಿ ಗ್ರಾಮ ಪಂಚಾಯತ್ ಕಚೇರಿ ಮುಂಭಾಗದಲ್ಲಿ ಜಮಾಯಿಸಿದರು. ಬಳಿಕ ಹಕ್ಕೊತ್ತಾಯ ಸಭೆ ನಡೆಯಿತು.
ಬಿಜೆಪಿ ಮಂಡಲ ಸಮಿತಿ ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜೇಶ್ ರೈ ಮೇನಾಲ ವಂದಿಸಿದರು.
ಪ್ರತಿಭಟನೆಯಲ್ಲಿ ನಿತ್ಯಾನಂದ ಬೈತಡ್ಕ, ಜಯರಾಜ್ ಕುಕ್ಕೆಟ್ಟಿ, ಮಹೇಶ್ ರೈ ಮೇನಾಲ, ಚನಿಯ ಕಲ್ತಡ್ಕ, ಹೇಮಂತ್ ಮಠ, ಸುದರ್ಶನ್ ಪಾತಿಕಲ್ಲು, ವಿಕ್ರಂ ಅಡ್ಪಂಗಾಯ, ಪ್ರಬೋದ್ ಶೆಟ್ಟಿ ಮೇನಾಲ, ವಾಸುದೇವ ಪುತ್ತಿಲ, ನಾರಾಯಣ ಬಂಟ್ರಬೈಲು, ಗುರುರಾಜ್ ಅಜ್ಜಾವರ, ನಯನ ರೈ ಮೇನಾಲ, ದಯಾಳ್ ಮೇದಿನಡ್ಕ, ವೆಂಕಟ್ರಮಣ ಅತ್ಯಾಡಿ, ವಿನಯ್ ನಾರಾಲು, ಸುಕುಮಾರ್ ಕಲ್ಲಗುಡ್ಡೆ, ಚಂದ್ರಶೇಖರ ದೊಡೇರಿ ಮೊದಲಾದವರು ಉಪಸ್ಥಿತರಿದ್ದರು.
ಅನುದಾನ ಹಂಚಿಕೆಯಲ್ಲಿ ಬಿಜೆಪಿ ಶಾಸಕರಿಗೆ ತಾರತಮ್ಯ: ಗ್ರಾಮ ಪಂಚಾಯತ್ ಚುನಾವಣೆ ತಕ್ಷಣ ಘೋಷಿಸಿ – ಶಾಸಕಿ ಭಾಗೀರಥಿ ಮುರುಳ್ಯ
















