ಪರಿಸರ ಪ್ರೀತಿ ಮಕ್ಕಳಲ್ಲಿ ಬೆಳೆಸುವುದು ಅಗತ್ಯ: ಡಾ. ನರೇಂದ್ರ ರೈ ದೇರ್ಲ

ಸುಳ್ಯ: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಹಮ್ಮಿಕೊಂಡಿರುವ ಸಾಹಿತ್ಯ ಸಂಭ್ರಮ ದಶಮಾನೋತ್ಸವ (2016-2026)ದ ಅಂಗವಾಗಿ ನವೆಂಬರ್ 2ರಂದು ಕುಕ್ಕುಜಡ್ಕದ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ‘ಪರಿಸರ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನಡೆಯಿತು.

























ಕಾರ್ಯಕ್ರಮದಲ್ಲಿ ‘ಕುವೆಂಪು, ಕಾರಂತ, ತೇಜಸ್ವಿಯವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ’ ವಿಷಯದ ಕುರಿತು ‘ಬೊಗಸೆಯಲ್ಲಿ ಹಸಿರು’ ಎಂಬ ಶೀರ್ಷಿಕೆಯಲ್ಲಿ ಉಪನ್ಯಾಸ ನೀಡಿದ ಡಾ. ನರೇಂದ್ರ ರೈ ದೇರ್ಲ ಅವರು, ಮಕ್ಕಳಲ್ಲಿ ಪರಿಸರ ಪ್ರೀತಿಯನ್ನು ಬೆಳೆಸುವುದು ಇಂದಿನ ಅಗತ್ಯವಾಗಿದೆ. ನಾಲ್ಕು ಗೋಡೆಗಳ ನಡುವೆ ಶಾಲೆಯಲ್ಲಿ ಪಡೆಯುವ ಅರಿವಿಗಿಂತ ಲೋಕಶಾಲೆಯಲ್ಲಿ ಕಲಿಯುವ ಜ್ಞಾನ ಅದ್ಭುತವಾದುದು ಎಂದು ಅಭಿಪ್ರಾಯಪಟ್ಟರು.

ತೇಜಸ್ವಿಯವರ ಸಾಹಿತ್ಯದಲ್ಲಿ ಪರಿಸರ, ನೆಲ ಮತ್ತು ಜಲದ ಸುಂದರ ಲೋಕವೇ ಅನಾವರಣಗೊಂಡಿದೆ. ಕುವೆಂಪು ಅವರ ಪರಿಸರ ಪ್ರೀತಿ ಅನನ್ಯವಾದುದು. ಇಂತಹ ಮಹಾನ್ ಸಾಹಿತಿಗಳ ಸಾಹಿತ್ಯದಲ್ಲಿರುವ ಪರಿಸರ ಪ್ರಜ್ಞೆ ಹಾಗೂ ಪ್ರಕೃತಿಪ್ರೇಮದ ವಿವಿಧ ಆಯಾಮಗಳನ್ನು ತಮ್ಮ ಉಪನ್ಯಾಸದಲ್ಲಿ ಮನೋಜ್ಞವಾಗಿ ವಿವರಿಸಿದರು.

ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಚಂದ್ರಶೇಖರ ಪೇರಾಲು ಅವರು ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡಿರುವ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.

ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ (ರಿ.) ಕುಕ್ಕುಜಡ್ಕ ಇದರ ಅಧ್ಯಕ್ಷ ನಿರಂಜನ ಕೋಡ್ತುಗುಳಿ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರಕೃತಿಯನ್ನು ಸಂರಕ್ಷಿಸುವುದು ಮುಂದಿನ ಪೀಳಿಗೆಗೆ ನಾವು ನೀಡಬಹುದಾದ ಅತ್ಯಮೂಲ್ಯ ಕೊಡುಗೆಯಾಗಿದೆ. ಪರಿಸರದ ಕುರಿತು ಜ್ಞಾನ ಮತ್ತು ಜಾಗೃತಿಯನ್ನು ಬೆಳೆಸಿಕೊಳ್ಳುವುದು ಇಂದಿನ ಅನಿವಾರ್ಯತೆಯಾಗಿದೆ ಎಂದರು.

ಚೊಕ್ಕಾಡಿ ವಿದ್ಯಾಸಂಸ್ಥೆಗಳ ಸಂಚಾಲಕ ಸುಪ್ರೀತ್ ಮೋಂಟಡ್ಕ ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿ ಶುಭ ಹಾರೈಸಿದರು.

ವೇದಿಕೆಯಲ್ಲಿ ಕನ್ನಡ ಗೀತಗಾಯನ ಕಾರ್ಯಕ್ರಮ ನಡೆಸಿಕೊಟ್ಟ ಕೆ.ಆರ್. ಗೋಪಾಲಕೃಷ್ಣ, ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪ್ರತಿನಿಧಿ ರಾಮಚಂದ್ರ ಪಲ್ಲತ್ತಡ್ಕ, ಕ.ಸಾ.ಪ. ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಮತ್ತು ಚಂದ್ರಮತಿ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ ಹಾಗೂ ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು.

ಆಡಳಿತ ಮಂಡಳಿ ಕಾರ್ಯದರ್ಶಿ ತೇಜಸ್ವಿ ಕಡಪಳ ಸ್ವಾಗತಿಸಿದರು. ಮುಖ್ಯೋಪಾಧ್ಯಾಯ ಸಂಕೀರ್ಣ ಚೊಕ್ಕಾಡಿ ವಂದಿಸಿದರು. ಸಹಶಿಕ್ಷಕ ಹರಿಪ್ರಸಾದ ಕೆ. ಕಾರ್ಯಕ್ರಮ ನಿರೂಪಿಸಿದರು.

Leave a Comment

Your email address will not be published. Required fields are marked *

error: Content is protected !!
Scroll to Top