ಕೊಕ್ಕೊ ಬೆಳೆಗಾರರಿಗೂ ಕ್ಯಾಂಪ್ಕೊದಿಂದ ವಿಶೇಷ ಆರ್ಥಿಕ

ಸುಳ್ಯ: ಅಡಿಕೆ ಬೆಳೆಗಾರರಿಗೆ ಆರೋಗ್ಯ ಸಮಸ್ಯೆ ಹಾಗೂ ಗಂಭೀರ ಕಾಯಿಲೆಗಳ ಸಂದರ್ಭದಲ್ಲಿ ಕ್ಯಾಂಪ್ಕೊ ಸಂಸ್ಥೆ ನೀಡುತ್ತಿರುವ ವಿಶೇಷ ಆರ್ಥಿಕ ಸಹಾಯವನ್ನು ಕೊಕ್ಕೊ ಸೇರಿದಂತೆ ಇತರ ಬೆಳೆಗಾರರಿಗೂ ವಿಸ್ತರಿಸಿರುವುದು ರೈತರಿಗೆ ಅನುಕೂಲವಾಗಲಿದೆ ಕೆ.ಸಿ ಹರೀಶ್ ತಿಳಿಸಿದ್ದಾರೆ.









































































ದಿ ಸೆಂಟ್ರಲ್ ಅರೆಕಾನಟ್ ಆ್ಯಂಡ್ ಕೊಕ್ಕೊ ಮಾರ್ಕೆಟಿಂಗ್ ಆ್ಯಂಡ್ ಪ್ರೊಸೆಸಿಂಗ್ ಕೋ-ಆಪರೇಟಿವ್ ಲಿಮಿಟೆಡ್ (ಕ್ಯಾಂಪ್ಕೊ) ಇತ್ತೀಚೆಗೆ ಮಂಗಳೂರಿನಲ್ಲಿ ಆಯೋಜಿಸಿದ್ದ ವಾರ್ಷಿಕ ಮಹಾಸಭೆಯಲ್ಲಿ ಈ ವಿಚಾರ ಚರ್ಚೆಗೆ ಬಂದಿತ್ತು.

ಸಭೆಯಲ್ಲಿ ಭಾಗವಹಿಸಿದ್ದ ಕೆ.ಸಿ. ಹರೀಶ್ ಪೆರಾಜೆ ಅವರು, ಪೆರಾಜೆ, ಸಂಪಾಜೆ, ಚೆಂಬು, ಆಲೆಟ್ಟಿ, ಮರ್ಕಂಜ, ತೊಡಿಕಾನ, ಮಡಪ್ಪಾಡಿ, ಗೂನಡ್ಕ, ಅರಂಬೂರು ಸೇರಿದಂತೆ ಸುಳ್ಯ ತಾಲೂಕಿನ ವಿವಿಧ ಭಾಗಗಳಲ್ಲಿ ಹಳದಿ ಎಲೆ ರೋಗದಿಂದ ಅಡಿಕೆ ತೋಟಗಳು ಬಾಧಿತವಾಗಿವೆ. ಇದರಿಂದ ಅನೇಕ ರೈತರು ಹಿಂದಿನಂತೆ ಸತತ ಮೂರು ವರ್ಷಗಳ ಕಾಲ ಕ್ಯಾಂಪ್ಕೊ ಮಾರಾಟ ಕೇಂದ್ರಕ್ಕೆ ಒಂದು ಕ್ವಿಂಟಾಲ್ ಅಡಿಕೆ ಮಾರಾಟ ಮಾಡುವ ಸಾಮರ್ಥ್ಯ ಕಳೆದುಕೊಂಡಿದ್ದಾರೆ ಎಂದು ಸಭೆಯ ಗಮನ ಸೆಳೆದರು.

ಕ್ಯಾಂಪ್ಕೊ ಸಂಸ್ಥೆಯು ಅಡಿಕೆ ಮಾರಾಟ ಮಾಡುವ ರೈತರಿಗೆ ಆರೋಗ್ಯ ಸಮಸ್ಯೆ ಎದುರಾದಾಗ ಅಥವಾ ಗಂಭೀರ ಕಾಯಿಲೆಗಳಿಗೆ ಆಸ್ಪತ್ರೆಗಳಲ್ಲಿ ಹೆಚ್ಚಿನ ವೆಚ್ಚ ಭರಿಸಬೇಕಾದ ಸಂದರ್ಭದಲ್ಲಿ ವಿಶೇಷ ಆರ್ಥಿಕ ನೆರವು ನೀಡುವ ಸೌಲಭ್ಯ ಕಲ್ಪಿಸಿದೆ. ಆದರೆ ಅಡಿಕೆ ಬೆಳೆ ನಷ್ಟದಿಂದಾಗಿ ನಿಗದಿತ ಪ್ರಮಾಣದಲ್ಲಿ ಅಡಿಕೆ ಮಾರಾಟ ಮಾಡಲು ಸಾಧ್ಯವಾಗದ ಈ ಭಾಗದ ಬಹುತೇಕ ರೈತರಿಗೆ ಸೌಲಭ್ಯದ ಪ್ರಯೋಜನ ಪಡೆಯಲು ಸಾಧ್ಯವಾಗುತ್ತಿರಲಿಲ್ಲ. ಇದರಿಂದ ಅನೇಕ ಸಕ್ರಿಯ ಸದಸ್ಯರೂ ಈ ನೆರವಿನಿಂದ ವಂಚಿತರಾಗುವ ಪರಿಸ್ಥಿತಿ ನಿರ್ಮಾಣವಾಗಿತ್ತು ಎಂದು ಅವರು ವಿವರಿಸಿದ್ದರು.

ಇದೀಗ ಸಹಕಾರ ರತ್ನ ದಿವಂಗತ ವಾರಣಾಶಿ ಸುಬ್ರಾಯ ಭಟ್ಟರ ಜನ್ಮಶತಾಬ್ದಿ ಪ್ರಯುಕ್ತ ನವೆಂಬರ್ 14ರಿಂದ 20ರವರೆಗೆ ಆಯೋಜಿಸಲಾಗಿದ್ದ ಕ್ಯಾಂಪ್ಕೊ ರೈತ ಸಂಪರ್ಕ ಸಪ್ತಾಹ-2026ರ ಪ್ರಚಾರ ಪತ್ರದಲ್ಲಿ, ಸತತ ಮೂರು ಹಣಕಾಸು ವರ್ಷಗಳಲ್ಲಿ ಸರಾಸರಿ ಒಂದು ಕ್ವಿಂಟಾಲ್ ಕೊಕ್ಕೊವನ್ನು ಕ್ಯಾಂಪ್ಕೊ ಸಂಸ್ಥೆಗೆ ಮಾರಾಟ ಮಾಡಿದ ರೈತರಿಗೂ ವಿಶೇಷ ಆರ್ಥಿಕ ನೆರವು ನೀಡುವ ವಿಚಾರ ಘೋಷಿಸಲಾಗಿದೆ.

ಅಡಿಕೆ ಬೆಳೆಯನ್ನು ಶಾಶ್ವತವಾಗಿ ಕಳೆದುಕೊಂಡಿರುವ ರೈತರಿಗೆ ಅನುಕೂಲವಾಗುವಂತೆ ಈ ವಿಶೇಷ ಆರ್ಥಿಕ ನೆರವಿನ ಸೌಲಭ್ಯವನ್ನು ಕೊಕ್ಕೊ, ಕರಿಮೆಣಸು ಹಾಗೂ ರಬ್ಬರ್ ಬೆಳೆಗಾರರಿಗೂ ವಿಸ್ತರಿಸಬೇಕು ಎಂದು ಕೆ.ಸಿ. ಹರೀಶ್ ಪೆರಾಜೆ ಅವರು ವಾರ್ಷಿಕ ಮಹಾಸಭೆಯಲ್ಲಿ ಒತ್ತಾಯಿಸಿದ್ದರು. ಹಳದಿ ಎಲೆ ರೋಗದಿಂದ ಸಂಕಷ್ಟಕ್ಕೀಡಾಗಿರುವ ಸುಳ್ಯ ಭಾಗದ ರೈತರ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಈ ಬೇಡಿಕೆಯನ್ನು ಮುಂದಿಟ್ಟಿರುವುದು ಮಹತ್ವದ್ದಾಗಿದೆ ಕೆ.ಸಿ‌ಹರೀಶ್ ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top