ಎಸ್‌ಎಸ್‌ಎಲ್‌ಸಿ ನಂತರ ಪ್ರತಿಯೊಬ್ಬ ವಿದ್ಯಾರ್ಥಿಯ ಮುಂದಿರುವ ಪ್ರಮುಖ ಪ್ರಶ್ನೆ – ಮುಂದಿನ ವಿದ್ಯಾಭ್ಯಾಸಕ್ಕಾಗಿ ಯಾವ ವಿಭಾಗವನ್ನು ಆಯ್ಕೆ ಮಾಡಬೇಕು ಎಂಬುದು. ಈ ಹಂತದಲ್ಲಿ ವಿದ್ಯಾರ್ಥಿಗಳು ತಮ್ಮ ಆಸಕ್ತಿ, ಸಾಮರ್ಥ್ಯ ಹಾಗೂ ಭವಿಷ್ಯದ ಉದ್ಯೋಗಾವಕಾಶಗಳನ್ನು ಗಮನದಲ್ಲಿಟ್ಟುಕೊಂಡು ಸರಿಯಾದ ನಿರ್ಧಾರ ಕೈಗೊಳ್ಳುವುದು ಅತ್ಯಂತ ಮುಖ್ಯ. ಸಾಮಾನ್ಯವಾಗಿ ಹೆಚ್ಚಿನವರು ವಿಜ್ಞಾನ (Science) ಅಥವಾ ವಾಣಿಜ್ಯ (Commerce) ವಿಭಾಗವನ್ನು ಆಯ್ಕೆ ಮಾಡುತ್ತಾರೆ. ಆದರೆ ಸಮಾಜದ ನಿರ್ಮಾಣಕ್ಕೆ, ಉತ್ತಮ ವ್ಯಕ್ತಿತ್ವ ವಿಕಾಸಕ್ಕೆ ಹಾಗೂ ನೂರಾರು ಉದ್ಯೋಗಾವಕಾಶಗಳಿಗೆ ದಾರಿ ತೋರುವ ಪ್ರಮುಖ ವಿಭಾಗವೆಂದರೆ ಕಲಾ ವಿಭಾಗ (Arts).
ಸಮೃದ್ಧ ಜ್ಞಾನದ ವಿಭಾಗ
ಕಲಾ ವಿಭಾಗವು ಕೇವಲ ಪುಸ್ತಕದ ಜ್ಞಾನಕ್ಕೆ ಸೀಮಿತವಾಗಿಲ್ಲ. ಇದು ಮನುಷ್ಯನ ಬದುಕು, ಸಮಾಜದ ಬೆಳವಣಿಗೆ, ಇತಿಹಾಸ, ಆಡಳಿತ ವ್ಯವಸ್ಥೆ, ಆರ್ಥಿಕ ಪರಿಸ್ಥಿತಿ, ರಾಜಕೀಯ ಚಿಂತನೆ, ಮಾನವ ಸಂಬಂಧಗಳು ಹಾಗೂ ಭಾಷೆಯ ಮಹತ್ವವನ್ನು ಅರ್ಥಮಾಡಿಕೊಡುವ ವಿಶಾಲ ಕ್ಷೇತ್ರವಾಗಿದೆ.ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ಮನಃಶಾಸ್ತ್ರ, ಶಿಕ್ಷಣಶಾಸ್ತ್ರ, ಕನ್ನಡ, ಇಂಗ್ಲಿಷ್, ಸಂಸ್ಕೃತ, ಹಿಂದಿ ಮುಂತಾದ ವಿಷಯಗಳು ವಿದ್ಯಾರ್ಥಿಗಳಲ್ಲಿ ಚಿಂತನಾ ಶಕ್ತಿ, ವಿಶ್ಲೇಷಣಾ ಸಾಮರ್ಥ್ಯ ಮತ್ತು ಸಾಮಾಜಿಕ ಜಾಗೃತಿಯನ್ನು ಬೆಳೆಸುತ್ತವೆ.
ಭಾಷಾ ಕೌಶಲ್ಯ ಮತ್ತು ವ್ಯಕ್ತಿತ್ವ ವಿಕಾಸ
ಕಲಾ ವಿಭಾಗದ ವಿಶೇಷತೆ ಎಂದರೆ ಇಲ್ಲಿ ಅಧ್ಯಯನವನ್ನು ಒತ್ತಡವಿಲ್ಲದೆ, ಆಸಕ್ತಿಯಿಂದ ಮುಂದುವರಿಸಬಹುದು. ಅನೇಕ ವಿದ್ಯಾರ್ಥಿಗಳು ವಿಜ್ಞಾನ ವಿಭಾಗದ ಕಠಿಣತೆ ಅಥವಾ ವಾಣಿಜ್ಯ ವಿಭಾಗದ ಸಂಖ್ಯಾತ್ಮಕ ಒತ್ತಡದಿಂದ ಕಂಗೆಡುವ ಸಂದರ್ಭಗಳಿವೆ. ಆದರೆ ಕಲಾ ವಿಭಾಗದಲ್ಲಿ ವಿಷಯಗಳನ್ನು ಅರ್ಥಮಾಡಿಕೊಂಡು, ಚಿಂತನೆಯ ಮೂಲಕ ಕಲಿಯುವ ಅವಕಾಶ ಹೆಚ್ಚಾಗಿದೆ. ಇದರಿಂದ ವಿದ್ಯಾರ್ಥಿಗಳು ಆತ್ಮವಿಶ್ವಾಸದಿಂದ ಮತ್ತು ಸಂತೋಷದಿಂದ ವಿದ್ಯಾಭ್ಯಾಸವನ್ನು ಮುಂದುವರಿಸಬಹುದು.
ಭಾಷಾ ಕಲಿಕೆಗೆ ಕಲಾ ವಿಭಾಗದಲ್ಲಿ ವಿಶೇಷ ಒತ್ತು ನೀಡಲಾಗುತ್ತದೆ. ಉತ್ತಮ ಭಾಷಾ ಜ್ಞಾನವು ವ್ಯಕ್ತಿಯ ವ್ಯಕ್ತಿತ್ವವನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯುತ್ತದೆ. ಉತ್ತಮ ಮಾತುಕತೆ, ಬರವಣಿಗೆ ಕೌಶಲ್ಯ, ಸಾರ್ವಜನಿಕ ಭಾಷಣ, ವಾದ-ವಿವಾದ, ಲೇಖನ ರಚನೆ ಮುಂತಾದ ಕ್ಷೇತ್ರಗಳಲ್ಲಿ ವಿದ್ಯಾರ್ಥಿಗಳು ತಮ್ಮ ಪ್ರತಿಭೆಯನ್ನು ತೋರಿಸಬಹುದು.ಕ್ರೀಡೆ ಮತ್ತು ಸಾಂಸ್ಕೃತಿಕ ರಂಗದಲ್ಲಿ ಆಸಕ್ತಿ ಇರುವ ವಿದ್ಯಾರ್ಥಿಗಳಿಗೆ ಯಾವುದೇ ಒತ್ತಡವಿಲ್ಲದೆ ಅಧ್ಯಯನದ ಜೊತೆಗೆ ತಮ್ಮ ಪ್ರತಿಭೆಯನ್ನು ಬೆಳೆಸಿಕೊಳ್ಳುವ ಅವಕಾಶ ಕಲಾ ವಿಭಾಗದಲ್ಲಿ ಹೆಚ್ಚಾಗಿದೆ. ತಮ್ಮ ಆಸಕ್ತಿಯ ಕ್ಷೇತ್ರದಲ್ಲಿ ಸಾಧನೆ ಮಾಡಲು ಇದು ಉತ್ತಮ ವೇದಿಕೆಯಾಗುತ್ತದೆ. ಇವು ಮುಂದಿನ ಜೀವನದಲ್ಲಿ ಯಶಸ್ಸಿಗೆ ಬಲವಾದ ಅಸ್ತ್ರಗಳಾಗುತ್ತವೆ.
ಅಪಾರ ಉದ್ಯೋಗಾವಕಾಶಗಳು
ಕಲಾ ವಿಭಾಗದಲ್ಲಿ ಅಧ್ಯಯನ ಮಾಡಿದವರಿಗೆ ಉದ್ಯೋಗಾವಕಾಶಗಳ ಕೊರತೆಯೇ ಇಲ್ಲ. ಶಿಕ್ಷಕರಾಗಿ, ಉಪನ್ಯಾಸಕರಾಗಿ, ವಕೀಲರಾಗಿ, ಪತ್ರಕರ್ತರಾಗಿ, ಆಡಳಿತಾಧಿಕಾರಿಗಳಾಗಿ, ರಾಜಕೀಯ ನಾಯಕರಾಗಿ, ಮನಃಶಾಸ್ತ್ರ ತಜ್ಞರಾಗಿ, ಸಮಾಜ ಸೇವಕರಾಗಿ ಹಾಗೂ ವಿವಿಧ ಸರ್ಕಾರಿ ಹುದ್ದೆಗಳಲ್ಲಿ ಸೇವೆ ಸಲ್ಲಿಸುವ ಅವಕಾಶಗಳು ಲಭ್ಯವಿವೆ.
UPSC, KPSC, ಬ್ಯಾಂಕಿಂಗ್, ಪೊಲೀಸ್, ಗ್ರಾಮ ಪಂಚಾಯಿತಿ, ರೈಲ್ವೆ ಸೇರಿದಂತೆ ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಲಾ ವಿಭಾಗವು ಉತ್ತಮ ಅಡಿಪಾಯ ಒದಗಿಸುತ್ತದೆ.
ಉತ್ತಮ ಸಮಾಜ ನಿರ್ಮಾಣದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ
ಇತಿಹಾಸವನ್ನು ಗಮನಿಸಿದರೆ, ಅನೇಕ ಮಹಾನ್ ನಾಯಕರು, ಚಿಂತಕರು,ಸಮಾಜ ಸುಧಾರಕರು ಮತ್ತು ರಾಷ್ಟ್ರ ನಿರ್ಮಾತೃಗಳು ಕಲಾ ವಿಭಾಗದ ಅಧ್ಯಯನದಿಂದ ತಮ್ಮ ವ್ಯಕ್ತಿತ್ವವನ್ನು ರೂಪಿಸಿಕೊಂಡಿದ್ದಾರೆ. ಸಮಾಜವನ್ನು ಬದಲಾಯಿಸುವ ಶಕ್ತಿ ಪುಸ್ತಕದಲ್ಲಿಲ್ಲ; ಆ ಪುಸ್ತಕದ ಅರ್ಥವನ್ನು ವಿಶ್ಲೇಷಣೆ ಮಾಡಿ ಜೀವನದಲ್ಲಿ ಅಳವಡಿಸಿಕೊಳ್ಳುವ ವ್ಯಕ್ತಿಯಲ್ಲಿದೆ.ಅಂತಹ ಶಕ್ತಿಯನ್ನು ಕಲಾ ವಿಭಾಗ ನೀಡುತ್ತದೆ.
ಇಂದಿನ ಸಮಾಜದಲ್ಲಿ ಉತ್ತಮ ನಾಯಕತ್ವ, ಸಾಮಾಜಿಕ ಜವಾಬ್ದಾರಿ ಹಾಗೂ ಮಾನವೀಯ ಮೌಲ್ಯಗಳನ್ನು ಹೊಂದಿರುವ ವ್ಯಕ್ತಿಗಳ ಅಗತ್ಯ ಹೆಚ್ಚಾಗಿದೆ. ಕಲಾ ವಿಭಾಗವು ಈ ಗುಣಗಳನ್ನು ಬೆಳೆಸುವಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ಇದು ಕೇವಲ ಉದ್ಯೋಗಕ್ಕಾಗಿ ಓದುವ ವಿಭಾಗವಲ್ಲ; ಉತ್ತಮ ಮನುಷ್ಯನಾಗಿ ರೂಪುಗೊಳ್ಳುವಂತೆ ಜ್ಞಾನ ನೀಡುವ ವಿಭಾಗವಾಗಿದೆ.
ಹೀಗಾಗಿ, ಕಲಾ ವಿಭಾಗವನ್ನು ಕಡಿಮೆ ಅಂದಾಜು ಮಾಡುವ ಅಗತ್ಯವೇ ಇಲ್ಲ. ಇದು ಭವಿಷ್ಯ ನಿರ್ಮಾಣಕ್ಕೆ ಅತ್ಯುತ್ತಮ ಅವಕಾಶಗಳನ್ನು ನೀಡುವ ಸಮೃದ್ಧ ವಿಭಾಗವಾಗಿದೆ. ವಿದ್ಯಾರ್ಥಿಗಳು ತಮ್ಮ ಆಸಕ್ತಿಯನ್ನು ಗುರುತಿಸಿ, ಆತ್ಮವಿಶ್ವಾಸದಿಂದ ಕಲಾ ವಿಭಾಗವನ್ನು ಆಯ್ಕೆ ಮಾಡಿದರೆ ಉತ್ತಮ ಬದುಕು ಕಟ್ಟಿಕೊಳ್ಳಲು ಖಂಡಿತ ಸಾಧ್ಯ.
✍️ ಜೇಸಿ ಮೋಹನ್ ಚಂದ್ರ
ಉಪನ್ಯಾಸಕರು,
ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜು, ಅರಂತೋಡು
















































