ಬೈಕಂಪಾಡಿ, ಕೂಳೂರು ಜಂಕ್ಷನ್ ಬಳಿ ಅಂಡರ್ ಪಾಸ್ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ರೂ11.63 ಕೋ ರೂ. ಅಧಿಕ ಅನುದಾನ ಮಂಜೂರು: ಸಂಸದ ಕ್ಯಾ. ಬ್ರಿಜೇಶ್ ಚೌಟ



































































































ಮಂಗಳೂರು: ಮಂಗಳೂರು ನಗರದ ಹೊರವಲಯದ ಪ್ರಮುಖ ಹೆದ್ದಾರಿ ಜಂಕ್ಷನ್‌ಗಳಾದ ಬೈಕಂಪಾಡಿ ಮತ್ತು ಕೂಳೂರು ಬಳಿ ಸುಗಮ ಸಂಚಾರ ಹಾಗೂ ಅಪಘಾತ ಮುಕ್ತ ವಲಯ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದಿಂದ ಮಹತ್ವದ ಕಾಮಗಾರಿಗಳಿಗೆ ಅನುಮೋದನೆ ನೀಡಿ ಅನುದಾನ ಮಂಜೂರು ಮಾಡಿದೆ ಎಂದು ದ.ಕ. ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ.

ರಾ. ಹೆ. 66ರಲ್ಲಿ ಬರುವ ಈ ಎರಡು ಪ್ರಮುಖ ಜಂಕ್ಷನ್‌ನಲ್ಲಿ ವಾಹನಗಳ ಸುಗಮ ಸಂಚಾರಕ್ಕಾಗಿ ಅಂಡರ್‌ಪಾಸ್ ನಿರ್ಮಾಣಕ್ಕೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಒಟ್ಟು 11.63 ಕೋಟಿ ರೂ. ಅಧಿಕ ಅನುದಾನ ಬಿಡುಗಡೆ ಮಾಡಿದೆ.

*ಬೈಕಂಪಾಡಿ ಜಂಕ್ಷನ್‌ನಲ್ಲಿ ಅಂಡರ್‌ಪಾಸ್ ನಿರ್ಮಾಣ:
ಬ್ಲ್ಯಾಕ್ ಸ್ಪಾಟ್ ಆಗಿ ಮಾರ್ಪಟ್ಟಿದ್ದ ಬೈಕಂಪಾಡಿ ಜಂಕ್ಷನ್ ಸುಗಮ ಹಾಗೂ ಸುರಕ್ಷಿತ ವಾಹನ ಸಂಚಾರಕ್ಕೆ ಸಾರ್ವಜನಿಕರಿಂದ ಹಾಗೂ ವಾಹನ ಸವಾರರಿಂದ ಬೇಡಿಕೆ ಕೇಳಿಬಂದಿತ್ತು. ಇದಕ್ಕೆ ಪರಿಹಾರವಾಗಿ ಹಾಗೂ ಬೈಕಂಪಾಡಿ ಕೈಗಾರಿಕಾ ಪ್ರದೇಶಕ್ಕೆ ತೆರಳುವ ವಾಹನಗಳ ಅನುಕೂಲಕ್ಕಾಗಿ ಬೈಕಂಪಾಡಿ ಜಂಕ್ಷನ್‌ನಲ್ಲಿ 7.09 ಕೋಟಿ ರೂ. ವೆಚ್ಚದಲ್ಲಿ ಅಂಡರ್ ಪಾಸ್  (LVUP) ನಿರ್ಮಾಣಕ್ಕೆ ಹೆದ್ದಾರಿ ಸಚಿವಾಲಯವು ಅನುಮೋದನೆ ನೀಡಿದೆ.  ಈ ಅಂಡರ್‌ಪಾಸ್ ನಿರ್ಮಾಣದಿಂದಾಗಿ ವಾಹನಗಳು ಹೆದ್ದಾರಿಯಲ್ಲಿ ಅಪಾಯಕಾರಿಯಾಗಿ ತಿರುವು ಪಡೆಯುವ ಬದಲು, ಸುರಕ್ಷಿತವಾಗಿ ಅಂಡರ್‌ಪಾಸ್ ಮೂಲಕವೇ ಕೈಗಾರಿಕಾ ಪ್ರದೇಶದ ಕಡೆಗೆ ಚಲಿಸಬಹುದಾಗಿದೆ. ಜತೆಗೆ ಹೆದ್ದಾರಿಯಲ್ಲಿಯೂ ಬೈಕಂಪಾಡಿ ಬಳಿ ಸುಗಮವಾಗಿ ಉಡುಪಿ ಕಡೆಗೆ ವಾಹನಗಳು ಸಂಚರಿಸುವುದಕ್ಕೆ ಅನುಕೂಲವಾಗಲಿದೆ.

*ಕೂಳೂರು ಸೇತುವೆ ಬಳಿ ಅಂಡರ್‌ಪಾಸ್ :*
ರಾಷ್ಟ್ರೀಯ ಹೆದ್ದಾರಿ-66ರ ಕೆ.ಐ.ಒ.ಸಿ.ಎಲ್ (KIOCL) ಜಂಕ್ಷನ್ ಮತ್ತು ಕೂಳೂರು ಸೇತುವೆ ಬಳಿ 4.54 ಕೋಟಿ ರೂ. ವೆಚ್ಚದಲ್ಲಿ ಅಂಡರ್ ಪಾಸ್  ಕಾಮಗಾರಿಗೆ ಅನುಮೋದನೆ ಸಿಕ್ಕಿದೆ. ಈ ಭಾಗದಲ್ಲಿ ಅಂಡರ್‌ಪಾಸ್‌ ನಿರ್ಮಿಸುವುದರಿಂದ ತಣ್ಣೀರುಬಾವಿ ಬೀಚ್ ಹಾಗೂ ಎಂ.ಎಸ್.ಇ.ಝೆಡ್ (MSEZ/SCZ) ಕಡೆಗೆ ಚಲಿಸುವ ವಾಹನಗಳ ದಟ್ಟಣೆಯನ್ನು ನಿವಾರಿಸಲು ಮತ್ತು ಸುಗಮ ಸಂಚಾರ ಕಲ್ಪಿಸಲು ಈ ಯೋಜನೆ ಅತ್ಯಂತ ಸಹಕಾರಿಯಾಗಲಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿ ಮೂಲಸೌಕರ್ಯದ ದೀರ್ಘಕಾಲದ ಬೇಡಿಕೆಯನ್ನು ಈಡೇರಿಸಿ, ಈ ಮಹತ್ವದ ಕಾಮಗಾರಿಗಳಿಗೆ ತಕ್ಷಣವೇ ಅನುದಾನ ಒದಗಿಸಿದ ಪ್ರಧಾನಮಂತ್ರಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಕೇಂದ್ರ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಅವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸಮಸ್ತ ಜನತೆಯ ಪರವಾಗಿ ಸಂಸದರಾದ ಕ್ಯಾ.  ಬ್ರಿಜೇಶ್ ಚೌಟ ಅವರು ಧನ್ಯವಾದವನ್ನು ಸಲ್ಲಿದ್ದಾರೆ.

*ಬಾಕ್ಸ್:*
ದಕ್ಷಿಣ ಕನ್ನಡ ಜಿಲ್ಲೆಯ ಹೆದ್ದಾರಿಗಳ ಸುರಕ್ಷತೆ ಮತ್ತು ಸುಗಮ ಸಂಚಾರಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಎನ್‌ಎಂಪಿಟಿ ಭಾಗದ ರಸ್ತೆಯು ಇದಕ್ಕೂ  ಮೊದಲು ರಾಷ್ಟ್ರೀಯ ಹೆದ್ದಾರಿ ಸರಕು ಸಾಗಣೆ ನಿರ್ವಹಣೆ ಲಿಮಿಟೆಡ್ ವ್ಯಾಪ್ತಿಯಲ್ಲಿದ್ದು ನಿರ್ದಿಷ್ಟ ಎಜೆನ್ಸಿ ಇಲ್ಲದಿರುವುದು ಹಾಗೂ ನಿಧಿಯ ಕೊರತೆಯಿಂದ  ಹೆದ್ದಾರಿ ಅಭಿವೃದ್ಧಿಗೆ ತೀವ್ರ ಸವಾಲು ಎದುರಾಗಿತ್ತು. ಈ ಬಗ್ಗೆ ಸತತ ಪ್ರಯತ್ನ ನಡೆಸಿ, ಎದುರಾಗಿದ್ದ ತಾಂತ್ರಿಕ ಅಡಚಣೆ-ಸವಾಲುಗಳನ್ನು ಬಗೆಹರಿಸಿ ಪೋರ್ಟ್ ವ್ಯಾಪ್ತಿಯ ರಸ್ತೆಯನ್ನು ಸಂಪೂರ್ಣವಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ (NHAI) ಹಸ್ತಾಂತರಿಸುವಲ್ಲಿ ಈಗಾಗಲೇ ಯಶಸ್ವಿಯಾಗಿದ್ದು, ಇದೀಗ ಕೂಳೂರು ಸೇತುವೆ ಬಳಿ ಅಂಡರ್‌ಪಾಸ್ ನಿರ್ಮಾಣವಾಗಲಿದೆ. ಅಲ್ಲದೆ, ಬ್ಲ್ಯಾಕ್ ಸ್ಪಾಟ್ ಆಗಿ ಬದಲಾಗಿದ್ದ ಬೈಕಂಪಾಡಿ ಜಂಕ್ಷನ್ ಬಳಿಯೂ ಕೆಳಸೇತುವೆ ನಿರ್ಮಾಣಕ್ಕೆ ಅನುಮೋದನೆ ದೊರಕಿರುವುದರಿಂದ ಮಂಗಳೂರು-ಉಡುಪಿ ನಡುವೆ ಸಂಚರಿಸುವ ಸಾರ್ವಜನಿಕರಿಗೆ ಮುಂದಿನ ದಿನಗಳಲ್ಲಿ ಸುಗಮ ಸಂಚಾರ ಸಾಧ್ಯವಾಗಲಿದೆ. ಜೊತೆಗೆ ಬೈಕಂಪಾಡಿ ಕೈಗಾರಿಕಾ ವಲಯ ಹಾಗೂ ಎಂ.ಎಸ್.ಇ.ಝೆಡ್ ಭಾಗಕ್ಕೆ ಸಂಚರಿಸುವವರಿಗೂ ಇದು ಹೆಚ್ಚಿನ ಅನುಕೂಲ ಕಲ್ಪಿಸಲಿದೆ. ಹೀಗಾಗಿ, ನಿಗದಿತ ಕಾಲಮಿತಿಯೊಳಗೆ ಈ ಎರಡು ಅಂಡರ್‌ಪಾಸ್‌ಗಳ ಕಾಮಗಾರಿ ಮುಗಿಸುವುದಕ್ಕೆ ಎಲ್ಲ ರೀತಿಯ ಪ್ರಯತ್ನ ಮಾಡಲಾಗುವುದ ಎಂದು ಸಂಸದರು ತಿಳಿಸಿದ್ದಾರೆ.

Leave a Comment

Your email address will not be published. Required fields are marked *

error: Content is protected !!
Scroll to Top