ಸುಳ್ಯದಲ್ಲಿ 17ನೇ ವರ್ಷದ ‘ವರ್ಣಚಿತ್ತಾರ’ ಚಿತ್ರಕಲಾ ಸ್ಪರ್ಧೆ ಹಾಗೂ ಚಿತ್ರಜಾತ್ರೆ ಉದ್ಘಾಟನೆ – 500ಕ್ಕೂ ಅಧಿಕ ಕಲಾಕೃತಿಗಳ ಪ್ರದರ್ಶನ
ಸುಳ್ಯ: ಪ್ರತಿಭೆ ಎನ್ನುವುದು ಕೇವಲ ಹುಟ್ಟಿನಿಂದ ಬರುವುದಲ್ಲ, ನಿರಂತರ ಅಭ್ಯಾಸ, ಪರಿಶ್ರಮ ಮತ್ತು ಆಸಕ್ತಿಯಿಂದ ಅದನ್ನು ಸಾಧನೆಯಾಗಿ ರೂಪಿಸಿಕೊಳ್ಳಬಹುದು. ಸತತ ಅಭ್ಯಾಸದ ಬಲದಿಂದಲೇ ನಾನು ಚಿತ್ರಕಲೆಯಲ್ಲಿ ಈ ಮಟ್ಟದ ಸಾಧನೆ ಮಾಡಲು ಸಾಧ್ಯವಾಯಿತು ಎಂದು ಏಷ್ಯಾದ ಅತ್ಯಂತ ವೇಗದ ಚಿತ್ರಕಲಾವಿದರೆಂಬ ಖ್ಯಾತಿ ಪಡೆದಿರುವ ಅಂತರರಾಷ್ಟ್ರೀಯ ಕಲಾವಿದ ವಿಲಾಸ್ ನಾಯಕ್ ಹೇಳಿದರು.
ಮಕ್ಕಳಲ್ಲಿ ಚಿತ್ರಕಲೆಯ ಆಸಕ್ತಿ, ಸೃಜನಶೀಲತೆ ಹಾಗೂ ಕಲಾತ್ಮಕ ಅಭಿರುಚಿಯನ್ನು ಬೆಳೆಸುವ ಉದ್ದೇಶದಿಂದ ರೋಟರಿ ಕ್ಲಬ್ ಸುಳ್ಯ, ಇಂಟರ್ಯಾಕ್ಟ್ ಕ್ಲಬ್, ರೋಟರಿ ಪ್ರಾಥಮಿಕ ಶಾಲೆ, ಕ್ರಿಯೇಟಿವ್ ಸ್ಕೂಲ್ ಆಫ್ ಆರ್ಟ್ಸ್ ಸುಳ್ಯ ಹಾಗೂ ಸುದ್ದಿ ಸಮೂಹ ಸಂಸ್ಥೆಗಳ ಸಹಯೋಗದಲ್ಲಿ ನ.15ರಂದು ಸುಳ್ಯದ ರೋಟರಿ ಶಾಲೆಯಲ್ಲಿ ಆಯೋಜಿಸಲಾದ 17ನೇ ವರ್ಷದ ಅವಿಭಜಿತ ಸುಳ್ಯ ತಾಲೂಕು ಮಟ್ಟದ ‘ವರ್ಣಚಿತ್ತಾರ’ ಚಿತ್ರಕಲಾ ಸ್ಪರ್ಧೆ ಹಾಗೂ ಚಿತ್ರಜಾತ್ರೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಚಿತ್ರಕಲೆ ಕೇವಲ ಬಣ್ಣಗಳ ಸಂಯೋಜನೆಯಲ್ಲ. ಅದು ಕಲ್ಪನೆ, ಭಾವನೆ ಮತ್ತು ಸೃಜನಶೀಲತೆಯ ಅಭಿವ್ಯಕ್ತಿ. ಮಕ್ಕಳಲ್ಲಿರುವ ಕಲಾತ್ಮಕ ಪ್ರತಿಭೆಗೆ ಸೂಕ್ತ ಪ್ರೋತ್ಸಾಹ ಹಾಗೂ ನಿರಂತರ ಅಭ್ಯಾಸ ದೊರೆತರೆ ಅವರು ಭವಿಷ್ಯದಲ್ಲಿ ದೊಡ್ಡ ಸಾಧಕರಾಗಿ ಬೆಳೆಯಲು ಸಾಧ್ಯ ಎಂದು ಅವರು ಅಭಿಪ್ರಾಯಪಟ್ಟರು.
ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂಧನ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿಲಾಸ್ ನಾಯಕ್ ಅವರ ಕಲಾ ಪಯಣ ಮತ್ತು ಸಾಧನೆಯ ಹಾದಿಯನ್ನು ಕಥನದ ಮೂಲಕ ಪ್ರಸ್ತುತಪಡಿಸಿದರು.
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ. ಯು.ಪಿ. ಶಿವಾನಂದ, ರೋಟರಿ ವಿದ್ಯಾಸಂಸ್ಥೆಗಳ ಸಂಚಾಲಕ ಪ್ರಭಾಕರನ್ ನಾಯರ್, ರಿಷಿ ಫ್ಯಾನ್ಸಿ ಆ್ಯಂಡ್ ಟಾಯ್ಸ್ ಮಾಲಕ ಅನಂತರಾಜ್, ಸಂಪಾದಕ ಹರೀಶ್ ಬಂಟ್ವಾಳ್, ಶಿಕ್ಷಣ ತಜ್ಞ ಡಾ. ಸುಂದರ್ ಕೇನಾಜೆ, ಇಂಟರ್ಯಾಕ್ಟ್ ಕ್ಲಬ್ ಅಧ್ಯಕ್ಷೆ ಚರಿಷ್ಮಾ ರೈ ಹಾಗೂ ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಕು. ವಂದಿತಾ ಶಾಸ್ತ್ರಿ ಪ್ರಾರ್ಥಿಸಿದರು. ಚಿತ್ರಕಲಾ ಶಿಕ್ಷಕ ಶ್ರೀಹರಿ ಪೈಂದೋಡಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಪ್ರಸನ್ನ ಐವರ್ನಾಡು ವಂದಿಸಿದರು. ಸುದ್ದಿ ವರದಿಗಾರ ಶಿವಪ್ರಸಾದ್ ಆಲೆಟ್ಟಿ ಕಾರ್ಯಕ್ರಮ ನಿರೂಪಿಸಿದರು.
ಬಣ್ಣಗಳ ಲೋಕದಲ್ಲಿ ಪ್ರತಿಭೆಯ ಚಿತ್ತಾರ; ವಿಲಾಸ್ ನಾಯಕ್ ಎರಡು ವೇಗದ ಚಿತ್ರ ಕುಂಚದ ಕೈಚಳಕಕ್ಕೆ ಮಂತ್ರಮುಗ್ಧರಾದ ಕಲಾಸಕ್ತರು
ವರ್ಣಚಿತ್ತಾರ ಕಾರ್ಯಕ್ರಮದ ಅಂಗವಾಗಿ ರಥಬೀದಿಯಲ್ಲಿ ವಿಶೇಷ ಚಿತ್ರಕಲಾ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳನ್ನು ತೆರೆಯಲಾಗಿದ್ದು, ಸುಮಾರು 500ಕ್ಕೂ ಅಧಿಕ ಕಲಾಕೃತಿಗಳು ಕಲಾಪ್ರಿಯರ ಗಮನ ಸೆಳೆದವು. ವಿವಿಧ ಕಲಾವಿದರ ಕಲ್ಪನೆ, ಕುಂಚದ ಕೈಚಳಕ ಮತ್ತು ಬಣ್ಣಗಳ ಲೋಕವನ್ನು ಒಂದೇ ವೇದಿಕೆಯಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ಕಲಾಸಕ್ತರಿಗೆ ದೊರೆಯಿತು.
ಕಾರ್ಯಕ್ರಮದ ವಿಶೇಷ ಆಕರ್ಷಣೆಯಾಗಿ ಅಂತರರಾಷ್ಟ್ರೀಯ ಖ್ಯಾತಿಯ ಚಿತ್ರಕಲಾವಿದ ವಿಲಾಸ್ ನಾಯಕ್ ಅವರು ಕಂಬಳ ಹಾಗೂ ಯಕ್ಷಗಾನ ಕಲಾವಿದರ ಚಿತ್ರಗಳನ್ನು ಅತ್ಯಂತ ವೇಗವಾಗಿ ಬಿಡಿಸಿ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು. ಚಿತ್ರ ರಚನೆಯ ನಡುವೆಯೇ ಮಕ್ಕಳಿಗೆ ಚಿತ್ರಕಲೆಯ ಕುರಿತು ಹಲವು ಉಪಯುಕ್ತ ಸಲಹೆಗಳನ್ನು ನೀಡಿದರು. ಅವರ ಕುಂಚದ ವೇಗ ಮತ್ತು ಕಲಾತ್ಮಕ ಅಭಿವ್ಯಕ್ತಿಯನ್ನು ಕಂಡ ಮಕ್ಕಳು ಹಾಗೂ ಕಲಾಸಕ್ತರು ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಪ್ರೇಕ್ಷಕರು ಭಾಗವಹಿಸಿ ಸಭಾಂಗಣವನ್ನು ಕಿಕ್ಕಿರಿದು ತುಂಬಿಸಿದ್ದರು. ಮಕ್ಕಳ ಪ್ರತಿಭೆಗೆ ವೇದಿಕೆ ಒದಗಿಸುವುದರ ಜೊತೆಗೆ ಕಲೆಯ ವೈವಿಧ್ಯಮಯ ಆಯಾಮಗಳನ್ನು ಪರಿಚಯಿಸಿದ ವರ್ಣಚಿತ್ತಾರ ಚಿತ್ರಜಾತ್ರೆ ಸುಳ್ಯದ ಸಾಂಸ್ಕೃತಿಕ ವಲಯದಲ್ಲಿ ವಿಶೇಷ ಗಮನ ಸೆಳೆಯಿತು.
ಸಮಾರೋಪ ಸಮಾರಂಭ
ಮಧ್ಯಾಹ್ನ 3 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂಧನ್ ಅಧ್ಯಕ್ಷತೆ ವಹಿಸಲಿದ್ದಾರೆ. ರೋಟರಿ ಚಾರಿಟೇಬಲ್ ಟ್ರಸ್ಟ್ ಕೋಶಾಧಿಕಾರಿ ಮಧುಸೂಧನ್ ಕುಂಭಕ್ಕೋಡ್, ಉದ್ಯಮಿ ಅಶೋಕ್ ಪ್ರಭು, ರೋಟರಿ ಕ್ಲಬ್ ಸುಳ್ಯದ ಪೂರ್ವಾಧ್ಯಕ್ಷ ಡಾ. ರಾಮ್ ಮೋಹನ್ ಕೆ.ಎನ್., ಭಾರತ್ ಆಗ್ರೋ ಸರ್ವಿಸ್ ಆ್ಯಂಡ್ ಸಪ್ಲೈಸ್ ಮಾಲಕ ರಾಮಚಂದ್ರ ಪೆರಿಯಡ್ಕ, ಜೆಸಿಐ ವಲಯ 15ರ ಉಪಾಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಹಾಗೂ ಸುದ್ದಿ ಬಿಡುಗಡೆ ಸಾರ್ವಜನಿಕ ಸಂಪರ್ಕ ಅಧಿಕಾರಿ ಯಶ್ಚಿತ್ ಕಾಳಮನೆ ಭಾಗವಹಿಸಲಿದ್ದಾರೆ.








































