ಶೌರ್ಯ ವಿಪತ್ತು ನಿರ್ವಹಣಾ ಘಟಕದ ವತಿಯಿಂದ
ಹಾಲೆಮಜಲು ಒಕ್ಕೂಟದ ಮಹಾಲಕ್ಷ್ಮಿ ಸಂಘದ ಸದಸ್ಯರಾದ ಒಂಟಿ ಮಹಿಳೆ ಯಮುನಾ ಅವರಿಗೆ ಮನೆ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್( ರಿ )ಗುತ್ತಿಗಾರು ವಲಯದ ನಾಲ್ಕೂರು ಗ್ರಾಮದ ಹಾಲೆಮಜಲು ಒಕ್ಕೂಟದ ಮಹಾಲಕ್ಷ್ಮಿ ಸಂಘದ ಸದಸ್ಯರಾದ ಯಮುನಾ ಅಮೆ ರವರು ಒಂಟಿ ಮಹಿಳೆಯಾಗಿದ್ದು, ಕಳೆದ ಕೆಲವು ವರ್ಷಗಳಿಂದ ಸ್ವಂತ ಮನೆ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದರು, ಈ ಬಗ್ಗೆ ಗ್ರಾಮಾಭಿವೃದ್ಧಿ ಯೋಜನೆಯ ಮೂಲಕ ಪೂಜ್ಯ ಖಾವಂದರಿಗೆ ಮನವಿ ಮಾಡಿಕೊಂಡ ಮೇರೆಗೆ ರೂ. 30,000 ಮಂಜೂರುಗೊಂಡು, ಮನೆ ನಿರ್ಮಾಣಕ್ಕೆ ಚಾಲನೆ ನೀಡಲಾಯಿತು.
ಯಮುನರವರ ಮನವಿ ಮೇರೆಗೆ ನಾಲ್ಕೂರು ಶೌರ್ಯ ವಿಪತ್ತು ಘಟಕದ ಸದಸ್ಯರು ಮನೆ ನಿರ್ಮಾಣಕ್ಕೆ ನೆಲ ಸಮತಟ್ಟು, ಅಡಿಪಾಯ, ಗೋಡೆ ನಿರ್ಮಾಣ,ಗಾರೆ ಕೆಲಸ, ಶೌಚಾಲಯ ನಿರ್ಮಾಣ, ಹೀಗೆ ಪ್ರತಿಯೊಂದು ಕಾರ್ಯದಲ್ಲೂ ಬೆನ್ನೆಲುಬಾಗಿ ನಿಂತು ಪುಟ್ಟ ಮನೆ ನಿರ್ಮಾಣವಾಯಿತು.
ಜೂ.18ರಂದು ತಾಲೂಕಿನ ಯೋಜನಾಧಿಕಾರಿಗಳು ಮಾಧವ ಗೌಡ ರವರು ನೂತನ ಗೃಹ ಶ್ರೀ ಲಕ್ಷ್ಮೀ ನಿಲಯ ನಾಮ ಫಲಕ ಅನಾವರಣ ಗೊಳಿಸಿ, ದೀಪ ಬೆಳಗಿಸಿ ಮನೆಯನ್ನು ಘಟಕದ ಸದಸ್ಯರ ಸಮ್ಮುಖದಲ್ಲಿ ಹಸ್ತಾಂತರಿದರು.
ನಂತರ ಅವರು ಮಾತನಾಡಿ ಗ್ರಾಮಾಭಿವೃದ್ಧಿ ಯೋಜನೆಯು ಕಳೆದ 21 ವರ್ಷಗಳಿಂದ ತಾಲೂಕಿನಾದ್ಯಂತ ಗ್ರಾಮೀಣ ಭಾಗದ ಅಸಹಾಯಕ ನಿರ್ಗತಿಕ,ಜನರ ಬದುಕಿಗೆ ಮನೆ ನಿರ್ಮಾಣ, ಮಾಶಾಸನ, ಸುಜ್ಞಾನ ನಿಧಿ ಶಿಷ್ಯವೇತನ,ಜ್ಞಾನದೀಪ ಶಿಕ್ಷಕರ ನಿಯೋಜನೆ,ಜನಮಂಗಲ ಕಾರ್ಯಕ್ರಮದಡಿ ವಿವಿಧ ಸೌಲಭ್ಯಗಳನ್ನು ಒದಗಿಸುವುದರೊಂದಿಗೆ ಗ್ರಾಮೀಣ ಭಾಗದ ಜನರ ಬದುಕಿಗೆ ಪೂಜ್ಯ ಖಾವಂದರು ಬೆಳಕು ನೀಡುತ್ತಿದ್ದಾರೆ ಎಂದರು.
ಈ ಸಂಧರ್ಭದಲ್ಲಿ ಹಿರಿಯರಾದ ಶಾಮಯ್ಯ ಚೆಮ್ನೂರು ,ದಮಯಂತಿ ಅಮೆ, ಗುಡ್ಡಪ್ಪ ಗೌಡ ಎರ್ಧಡ್ಕ,ಒಕ್ಕೂಟದ ಅಧ್ಯಕ್ಷರಾದ ಲೋಹಿತ್ ಚೆಮ್ನೂರು, ಶೌರ್ಯ ಕ್ಯಾಪ್ಟನ್ ಸತೀಶ್ ಬಂಬುಳಿ , ಮಹಾಲಕ್ಷ್ಮಿ,ಹಾಗೂ ಶಿವಾನಿ ಸಂಘದ ಸದಸ್ಯರು,ಗುತ್ತಿಗಾರು ವಲಯ ಮೇಲ್ವಿಚಾರಕರು ರಾಜೇಶ್ ಉಪಸ್ಥಿತರಿದ್ದರು.
ಸೇವಾಪ್ರತಿನಿಧಿ ಹರಿಶ್ಚಂದ್ರ ಕುಳ್ಳಂಪ್ಪಾಡಿ ಕಾರ್ಯಕ್ರಮ ನಿರ್ವಹಿಸಿದರು.





























































