ಮುತ್ತುಕೋಡಿ–ಮಾವಿನಕಟ್ಟೆ–ಬಿಳಿಯಾರು–ಬಾಳಕಜೆ ರಸ್ತೆಗೆ ಕಳೆದ ತಡರಾತ್ರಿ ಗುಡ್ಡ ಕುಸಿದು ಬಿದ್ದು ರಸ್ತೆ ತಡೆ ಉಂಟಾಗಿದೆ.ಈ ಭಾಗದಲ್ಲಿ ಆರು ಕುಟುಂಬಗಳು ವಾಸಿಸುತ್ತಿವೆ. ಮುಂದಕ್ಕೆ ಸಾಗಿದರೆ ಬಾಳೆಕಜೆ ಸಿಗುತ್ತದೆ.ಅಲ್ಲಿ ಅನೇಕ ಮನೆಗಳಿವೆ. 26 ವರ್ಷಗಳಿಂದ ಈ ರಸ್ತೆಗೆ ಶಾಶ್ವತ ಪರಿಹಾರ ದೊರೆತಿಲ್ಲ. ಪ್ರತಿ ವರ್ಷ ಜೂನ್‌ನಿಂದ ಅಕ್ಟೋಬರ್‌ವರೆಗೆ ಮಳೆಗಾಲದಲ್ಲಿ ರಸ್ತೆ ಕೆಸರಿನಿಂದ ತುಂಬಿ ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಳ್ಳುತ್ತದೆ.
ರಸ್ತೆಯ ಎರಡೂ ಬದಿಯ ಗುಡ್ಡಗಳು ಕುಸಿದು ಮಣ್ಣು ಹಾಗೂ ಕಲ್ಲುಗಳು ರಸ್ತೆಯ ಮೇಲೆ ಬಿದ್ದು ರಸ್ತೆ ಬಂದ್ ಆಗುತ್ತದೆ. ಬೇರೆ ಯಾವುದೇ ಪರ್ಯಾಯ ರಸ್ತೆ ಇಲ್ಲದ ಕಾರಣ ಗ್ರಾಮಸ್ಥರು ಜೀವದ ಭಯದಲ್ಲೇ ಕೆಸರಿನಲ್ಲಿ ಜಾರುತ್ತಾ ಸಂಚರಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುರ್ತು ಸಂದರ್ಭಗಳಲ್ಲಿ ಆಂಬುಲೆನ್ಸ್ ಸೇರಿದಂತೆ ಯಾವುದೇ ವಾಹನ ಮನೆಗಳವರೆಗೆ ತಲುಪಲು ಸಾಧ್ಯವಾಗುವುದಿಲ್ಲ.
ಪ್ರತಿ ವರ್ಷ ತಾತ್ಕಾಲಿಕ ದುರಸ್ತಿ ಮಾಡಿದರೂ ಸಮಸ್ಯೆ ಮರುಕಳಿಸುತ್ತಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಹಾಗೂ ಸರ್ಕಾರ ಈ ರಸ್ತೆಗೆ ಶಾಶ್ವತ ಮತ್ತು ಸುರಕ್ಷಿತ ಪರಿಹಾರ ಕಲ್ಪಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.





































































