ಸುಳ್ಯ,: ನೆಹರೂ ಮೆಮೋರಿಯಲ್ ಕಾಲೇಜು ಸುಳ್ಯ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಕಾಲೇಜಿನ ಯುವ ರೆಡ್ ಕ್ರಾಸ್ ಘಟಕವು ಐಕ್ಯೂಎಸಿ (IQAC) ಸಹಯೋಗದಲ್ಲಿ ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರಕ್ತ ಕೇಂದ್ರದಲ್ಲಿ ಸ್ವಯಂಪ್ರೇರಿತ ರಕ್ತದಾನ ಶಿಬಿರವನ್ನು “ರಕ್ತ ನೀಡಿ ಜೀವ ಉಳಿಸಿ” ಎನ್ನುವ ಶೀರ್ಷಿಕೆಯಡಿಯಲ್ಲಿ ಆಯೋಜಿಸಿತು.
ಕಾರ್ಯಕ್ರಮವನ್ನು ಕಾಲೇಜಿನ ಪ್ರಾಂಶುಪಾಲ ಡಾ. ರುದ್ರಕುಮಾರ್ ಎಂ ಎಂ ಉದ್ಘಾಟಿಸಿ, ರಕ್ತದಾನವು ಜೀವ ಉಳಿಸುವ ಅತ್ಯಂತ ಶ್ರೇಷ್ಠ ಮಾನವೀಯ ಸೇವೆಯಾಗಿದ್ದು, ಪ್ರತಿಯೊಬ್ಬ ಆರೋಗ್ಯವಂತ ಯುವಜನರು ನಿಯಮಿತವಾಗಿ ರಕ್ತದಾನ ಮಾಡುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಕೆ.ವಿ.ಜಿ. ವೈದ್ಯಕೀಯ ಕಾಲೇಜಿನ ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ. ಸತ್ಯವತಿ ಆರ್. ಆಳ್ವ, ಕೆ.ವಿ.ಜಿ. ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ಮಾನವ ಸಂಪನ್ಮೂಲ ಅಧಿಕಾರಿ ಶಿವಪ್ರಸಾದ್, ರಕ್ತ ಕೇಂದ್ರದ ಅಧಿಕಾರಿಗಳಾದ ಡಾ. ನವ್ಯ ಬಿ. ಎನ್. ಹಾಗೂ ಡಾ. ಅಂಜಲಿ, ಉಪಸ್ಥಿತರಿದ್ದರು.
ಕಾಲೇಜಿನ 19 ವಿದ್ಯಾರ್ಥಿಗಳು ಸ್ವಯಂಪ್ರೇರಿತವಾಗಿ ರಕ್ತದಾನ ಮಾಡಿದರು. ಉಳಿದಂತೆ ತುರ್ತು ಸಂದರ್ಭಕ್ಕೆ ಬಳಸಿಕೊಳ್ಳಲು ರಕ್ತದಾನಿಗಳ ಪಟ್ಟಿಯನ್ನು ರಕ್ತ ಕೇಂದ್ರಕ್ಕೆ ಹಸ್ತಾಂತರಿಸಲಾಯಿತು.
ಯುವ ರೆಡ್ ಕ್ರಾಸ್ ಘಟಕದ ಕಾರ್ಯಕ್ರಮಾಧಿಕಾರಿ ಡಾ. ಅನುರಾಧಾ ಕುರುಂಜಿ ಕಾರ್ಯಕ್ರಮ ಸಂಯೋಜನೆ ಮಾಡಿದ್ದರು. ಶಿಬಿರದ ಯಶಸ್ಸಿಗೆ ಕೆ.ವಿ.ಜಿ. ವೈದ್ಯಕೀಯ ಕಾಲೇಜಿನ ರಕ್ತ ಕೇಂದ್ರದ ಸಿಬ್ಬಂದಿಗಳು, ರೆಡ್ ಕ್ರಾಸ್ ಸ್ವಯಂಸೇವಕರು ಹಾಗೂ ಕಾಲೇಜು ಬೋಧಕ, ಬೋಧಕೇತರ ವೃಂದದವರು ಸಹಕರಿಸಿದರು.













