ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಲು ವಿಶೇಷ ಗ್ರಾಮ ಸಭೆ ಕರೆದು ನಿರ್ಣಯಿಸಿ ಸರಕಾರಕ್ಕೆ ಬರೆಯಬೇಕೆಂದು ಅರಂತೋಡು ಗ್ರಾಮ ಪಂಚಾಯತ್ ಪಿ.ಡಿ.ಒ ಜಯಪ್ರಕಾಶ್ ಅವರಿಗೆ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಉಪಾಧ್ಯಕ್ಷ ತೀರ್ಥರಾಮ ಉಳುವಾರು ಹಾಗೂ ಅರಂತೋಡು ತೊಡಿಕಾನ ಗ್ರಾಮದ ರೈತರು ಮನವಿ ಸಲ್ಲಿಸಿದ್ದಾರೆ.
ರೈತಾಪಿ ವರ್ಗದ ಸುಳ್ಯ ತಾಲೂಕಿನ ಕೆಲವು ಗ್ರಾಮಗಳಲ್ಲಿ ಪೂರ್ವಜರಿಂದ ಬಂದಂತಹ ಭೂಮಿಯಲ್ಲಿ ಕೃಷಿ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಾ ಬಂದಿದ್ದೇವೆ. ಆದರೆ ಈಗಿನ ಸರಕಾರಗಳು ಬಡ ಕೃಷಿಕರ ತಲೆಯ ಮೇಲೆ ಕಲ್ಲುಚಪ್ಪಡಿ ಎಳೆಯಲು ಕಸ್ತೂರಿರಂಗನ್ ಎಂಬ ಅವೈಜ್ಞಾನಿಕವಾದ ವಿಜ್ಞಾನಿಯ 7ನೇ ಕರಡು ಅದಿಸೂಚನೆಯಲ್ಲಿ ಗ್ರಾಮೀಣ ಜನರ ಬದುಕಿನ ಮೂಲ ಸೌಕರ್ಯಗಳಿಗೆ ಕಡವಾಣ ಹಾಕಲು ತಯಾರಿ ನಡೆಸಿದೆ. ಇದನ್ನು ಕರ್ನಾಟಕ ರಾಜ್ಯ ರೈತ ಸಂಘವು ವಿರೋಧಿಸುತ್ತದೆ ಮತ್ತು ಇದರ ಬಗ್ಗೆ ಜನರಿಗೆ ತಿಳುವಳಿಕೆ ನೀಡಲು ಮತ್ತು ಈ ವರದಿಯನ್ನು ತಿರಸ್ಕರಿಸಲು ಕೂಡಲೇ ತಾವುಗಳು ವಿಶೇಷ ಗ್ರಾಮ ಸಭೆಯನ್ನು ಕರೆದು ಈ ವರದಿಯನ್ನು ಗ್ರಾಮ ಸಭೆಯಲ್ಲಿ ತಿರಸ್ಕರಿಸಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಅರಂತೋಡು ತೊಡಿಕಾನ ಪ್ರಾಥಮಿಕ ಕ್ರಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸಂತೋಷ್ ಕುತ್ತಮೊಟ್ಟೆ, ಹಿರಿಯ ರೈತರಾದ ಪ್ರಭಾಕರ ರೈ ಬಿಳಿಯಾರು, ಪಂಚಾಯತ್ ನಿಕಟಪೂರ್ವ ಸದಸ್ಯರಾದ ರವೀಂದ್ರ ಪೂಜಾರಿ ತೊಡಿಕಾನ,ವೆಂಕಟರಮಣ ಪೆತ್ತಾಜೆ,ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಅಶ್ರಪ್ ಗುಂಡಿ,ಆನಂದ ಕಲ್ಲಗದ್ದೆ ಇತರರು ಉಪಸ್ಥಿತರಿದ್ದರು.
ಅರಂತೋಡು : ಕಸ್ತೂರಿ ರಂಗನ್ ಕರಡು ವರದಿಗೆ ಆಕ್ಷೇಪಣೆ ಸಲ್ಲಿಸಲು ವಿಶೇಷ ಗ್ರಾಮ ಸಭೆ ಕರೆಯಲು ಪಿ.ಡಿ.ಒ ಅವರಿಗೆ ಮನವಿ ಸಲ್ಲಿಸಿದ ಅರಂತೋಡು ತೊಡಿಕಾನ ಗ್ರಾಮಸ್ಥರು
















