ಸುಳ್ಯ: ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರು ಪ್ರಯಾಣಿಸುತ್ತಿದ್ದ ಇನ್ನೋವಾ ಕಾರು ಅಪಘಾತಕ್ಕೀಡಾದ ಘಟನೆ ಕರಿಕ್ಕಳ–ನಿಂತಿಕಲ್ ಮಧ್ಯೆ ಮುಚ್ಚಿಲ ಎಂಬಲ್ಲಿ ನಡೆದಿದೆ. ಘಟನೆಯಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರು ಯಾವುದೇ ಗಾಯಗಳಿಲ್ಲದೆ ಸುರಕ್ಷಿತವಾಗಿ ಪಾರಾಗಿದ್ದಾರೆ.
ಕರಿಕ್ಕಳ ಕಡೆಯಿಂದ ನಿಂತಿಕಲ್ ಕಡೆಗೆ ಶಾಸಕರು ಪ್ರಯಾಣಿಸುತ್ತಿದ್ದ ವೇಳೆ ಮುಚ್ಚಿಲ ಸಮೀಪ ಎದುರಿನಿಂದ ಸಾಗುತ್ತಿದ್ದ ಕಾರೊಂದು ಏಕಾಏಕಿ ಸಡನ್ ಬ್ರೇಕ್ ಹಾಕಿದೆ ಎನ್ನಲಾಗಿದೆ. ಇದರಿಂದ ಹಿಂಬದಿಯಿಂದ ಬರುತ್ತಿದ್ದ ಶಾಸಕರ ಇನ್ನೋವಾ ಕಾರನ್ನು ನಿಯಂತ್ರಿಸಲು ಸಾಧ್ಯವಾಗದೆ ಎದುರಿನ ಕಾರಿಗೆ ಢಿಕ್ಕಿ ಹೊಡೆದಿದೆ.
ಢಿಕ್ಕಿಯ ಪರಿಣಾಮ ಇನ್ನೋವಾ ಕಾರಿನ ಮುಂಭಾಗ ಜಖಂಗೊಂಡಿದ್ದು, ಅಪಘಾತದ ಸಂದರ್ಭ ಶಾಸಕಿ ಭಾಗೀರಥಿ ಮುರುಳ್ಯ ಅವರು ಕಾರಿನಲ್ಲಿದ್ದರು. ಅದೃಷ್ಟವಶಾತ್ ಅವರಿಗೆ ಯಾವುದೇ ಗಾಯಗಳಾಗಿಲ್ಲ ಎಂದು ತಿಳಿದುಬಂದಿದೆ.
ಅಪಘಾತದ ಸುದ್ದಿ ತಿಳಿದು ಸ್ಥಳೀಯರು ಸ್ಥಳಕ್ಕೆ ಆಗಮಿಸಿದ್ದು, ಕೆಲಕಾಲ ರಸ್ತೆ ಸಂಚಾರದಲ್ಲಿ ಗೊಂದಲ ಉಂಟಾಯಿತು. ಬಳಿಕ ವಾಹನಗಳನ್ನು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಅಪಘಾತದ ಕುರಿತು ಹೆಚ್ಚಿನ ವಿವರಗಳು ಇನ್ನಷ್ಟೇ ತಿಳಿದುಬರಬೇಕಿದೆ.
ಮುಚ್ಚಿಲದಲ್ಲಿ ಶಾಸಕಿ ಭಾಗೀರಥಿ ಮುರುಳ್ಯ ಅವರ ಕಾರು ಅಪಘಾತ: ಗಾಯಗಳಿಲ್ಲದೆ ಪಾರು











