ಮಂಗಳೂರು: ಕಡಿಮೆ ಬಂಡವಾಳದಲ್ಲಿ ಅಣಬೆ ಬೇಸಾಯ ಆರಂಭಿಸಿ, ಮೌಲ್ಯವರ್ಧಿತ ಉತ್ಪನ್ನಗಳ ಮೂಲಕ ಹೆಚ್ಚುವರಿ ಆದಾಯ ಗಳಿಸುವ ಕುರಿತು ರೈತರಿಗೆ ತರಬೇತಿ ನೀಡಲಾಯಿತು.
ಭಾರತೀಯ ಕೃಷಿ ಸಂಶೋಧನಾ ಮಂಡಳಿ (ICAR), ಕೃಷಿ ವಿಜ್ಞಾನ ಕೇಂದ್ರ (ದ.ಕ.), ಮಂಗಳೂರು, ಬ್ಯಾಂಕ್ ಆಫ್ ಬರೋಡಾ ಹಾಗೂ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ (ರಿ.), ಮಂಗಳೂರು ಇವರ ಸಹಯೋಗದಲ್ಲಿ ‘ಅಣಬೆ ಬೇಸಾಯ ಮತ್ತು ಮೌಲ್ಯವರ್ಧನೆ ಕುರಿತು ತರಬೇತಿ ಕಾರ್ಯಕ್ರಮ’ ಅ.6ರಂದು ಮಂಗಳೂರಿನ ಕೃಷಿ ವಿಜ್ಞಾನ ಕೇಂದ್ರದಲ್ಲಿ ನಡೆಯಿತು.
ತರಬೇತಿಯಲ್ಲಿ ಅಣಬೆ ಬೇಸಾಯದ ವೈಜ್ಞಾನಿಕ ವಿಧಾನಗಳು, ಉತ್ಪಾದನಾ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಕ್ರಮಗಳು, ಗುಣಮಟ್ಟದ ಅಣಬೆ ಉತ್ಪಾದನೆ, ಕೊಯ್ಲೋತ್ತರ ನಿರ್ವಹಣೆ ಹಾಗೂ ಅಣಬೆಯಿಂದ ವಿವಿಧ ಮೌಲ್ಯವರ್ಧಿತ ಉತ್ಪನ್ನಗಳನ್ನು ತಯಾರಿಸುವ ವಿಧಾನಗಳ ಕುರಿತು ತಾಂತ್ರಿಕ ಮಾಹಿತಿ ನೀಡಲಾಯಿತು. ರೈತರಿಗೆ ಪ್ರಾಯೋಗಿಕ ತರಬೇತಿಯನ್ನೂ ನೀಡಲಾಯಿತು.
ಸ್ಥಳೀಯವಾಗಿ ಲಭ್ಯವಿರುವ ಕೃಷಿ ತ್ಯಾಜ್ಯವನ್ನು ಬಳಸಿಕೊಂಡು ಅಣಬೆ ಉತ್ಪಾದಿಸುವ ವಿಧಾನ, ಕಡಿಮೆ ಬಂಡವಾಳದಲ್ಲಿ ಈ ಉಪಕಸುಬು ಆರಂಭಿಸುವ ಅವಕಾಶ ಹಾಗೂ ಉತ್ಪಾದಿಸಿದ ಅಣಬೆ ಮತ್ತು ಮೌಲ್ಯವರ್ಧಿತ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸುವ ಮೂಲಕ ಆದಾಯ ಹೆಚ್ಚಿಸಿಕೊಳ್ಳುವ ಕುರಿತು ತರಬೇತಿಯಲ್ಲಿ ವಿವರಿಸಲಾಯಿತು.
ಗ್ರಾಮೀಣ ಮಹಿಳೆಯರು ಹಾಗೂ ಸ್ವಸಹಾಯ ಸಂಘಗಳ ಸದಸ್ಯೆಯರು ಅಣಬೆ ಬೇಸಾಯ ಮತ್ತು ಮೌಲ್ಯವರ್ಧಿತ ಉತ್ಪನ್ನಗಳ ತಯಾರಿಕೆಯನ್ನು ಸಣ್ಣ ಉದ್ಯಮವಾಗಿ ರೂಪಿಸಿಕೊಂಡು ಸ್ವಾವಲಂಬಿಗಳಾಗುವ ಸಾಧ್ಯತೆಗಳ ಬಗ್ಗೆಯೂ ಅರಿವು ಮೂಡಿಸಲಾಯಿತು.
ಕಾರ್ಯಕ್ರಮದಲ್ಲಿ ಕೃಷಿ ವಿಜ್ಞಾನ ಕೇಂದ್ರದ ಡಾ. ಕೇದಾರನಾಥ್, ಸಸ್ಯ ಸಂರಕ್ಷಣಾ ವಿಜ್ಞಾನಿ ಡಾ. ಮಲ್ಲಿಕಾರ್ಜುನ ಎಲ್., ಮಣ್ಣು ವಿಜ್ಞಾನಿ, ಬ್ಯಾಂಕ್ ಆಫ್ ಬರೋಡಾದ ಮುಖ್ಯ ಪ್ರಬಂಧಕ ಮನೀಷ್ ಜೈಸ್ವಾಲ್, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯೋತಿರಾಜ್, ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಜೆ. ರಮೇಶ್, ಸಹಾಯಕ ಪ್ರಾಧ್ಯಾಪಕ ಡಾ. ಹರೀಶ್ ಶೆಣೈ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ತಾಂತ್ರಿಕ ಮಾಹಿತಿ ಹಾಗೂ ಪ್ರಾಯೋಗಿಕ ತರಬೇತಿ ಅವಧಿಯಲ್ಲಿ ಡಾ. ಚಂದ್ರಶೇಖರ ಸಿ., ಡಾ. ಧರಣೇಶ್ ಎನ್.ಕೆ., ಡಾ. ಹರೀಶ್ ಶೆಣೈ ಹಾಗೂ ಡಾ. ಮಲ್ಲಿಕಾರ್ಜುನ ಎಲ್. ಮಾಹಿತಿ ನೀಡಿದರು. ಪ್ರಗತಿಪರ ಅಣಬೆ ಕೃಷಿಕ ಪಾಂಡುರಂಗ ಹಾಗೂ ಉದ್ಯಮಿ ತುಷಾರ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡರು.
ಸುಳ್ಯ ತಾಲೂಕಿನ ರೈತರು, ಪ್ರಗತಿಪರ ಕೃಷಿಕರು, ಸಂಜೀವಿನಿ–ಎನ್‌ಆರ್‌ಎಲ್‌ಎಂ ಕೃಷಿ ಸಖಿಯರು, ಎಲ್‌ಸಿಆರ್‌ಪಿ ಹಾಗೂ ಸದಸ್ಯೆಯರು ಸೇರಿದಂತೆ ಮಡಿಕೇರಿ ಮತ್ತು ಕಾಸರಗೋಡು ಭಾಗದ ಆಸಕ್ತ ಕೃಷಿಕರು ತರಬೇತಿಯಲ್ಲಿ ಭಾಗವಹಿಸಿದ್ದರು.
ಅಣಬೆ ಬೇಸಾಯವನ್ನು ಆದಾಯದಾಯಕ ಉಪಕಸುಬಾಗಿ ಅಳವಡಿಸಿಕೊಳ್ಳುವುದರೊಂದಿಗೆ ಮೌಲ್ಯವರ್ಧನೆಯ ಮೂಲಕ ಉದ್ಯಮಶೀಲತೆ ಬೆಳೆಸಿಕೊಳ್ಳಲು ತರಬೇತಿ ಕಾರ್ಯಕ್ರಮವು ರೈತರಿಗೆ ಉಪಯುಕ್ತವಾಯಿತು.
ಅಣಬೆ ಬೇಸಾಯದಿಂದ ಆದಾಯ ಹೆಚ್ಚಿಸಿಕೊಳ್ಳಲು ರೈತರಿಗೆ ತರಬೇತಿ











