ಸೆ.8ರಂದು ಸುಳ್ಯದಲ್ಲಿ ಅದ್ದೂರಿ ಮೊಸರು ಕುಡಿಕೆ ಉತ್ಸವ

ಸುಳ್ಯ: ವಿಶ್ವ ಹಿಂದೂ ಪರಿಷತ್ ಸಂಘಟನೆಯ ಸ್ಥಾಪನಾ ದಿನಾಚರಣೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ ಸುಳ್ಯದಲ್ಲಿ ಹಿಂದೂ ಬಾಂಧವರನ್ನೊಳಗೊಂಡ ಅದ್ದೂರಿ ಮೊಸರು ಕುಡಿಕೆ ಉತ್ಸವ ಸೆ.8ರಂದು ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಶ್ರೀಕಾಂತ್ ಗೋಳ್ವಾಲ್ಕರ್ ತಿಳಿಸಿದರು.































ಸುಳ್ಯದ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಗೋಮಾತೆಯ ರಕ್ಷಣೆಗಾಗಿ ಕಾರ್ಯನಿರ್ವಹಿಸುತ್ತಿರುವ ಬಜರಂಗದಳದ ಯುವಕರ ತಂಡ ಉತ್ಸವದ ಯಶಸ್ಸಿಗೆ ಶ್ರಮಿಸುತ್ತಿದ್ದು, ದುರ್ಗಾ ವಾಹಿನಿಯೂ ಕೈಜೋಡಿಸಲಿದೆ. ವಿಶ್ವ ಹಿಂದೂ ಪರಿಷತ್‌ನೊಂದಿಗೆ 43 ಘಟಕಗಳು ಕಾರ್ಯನಿರ್ವಹಿಸುತ್ತಿವೆ ಎಂದು ತಿಳಿಸಿದರು.

ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷ ಸತೀಶ್ ಕೆ.ಜೆ. ಮಾತನಾಡಿ, ವಿಶ್ವ ಹಿಂದೂ ಪರಿಷತ್, ಬಜರಂಗದಳ, ಮಾತೃಶಕ್ತಿ, ದುರ್ಗಾ ವಾಹಿನಿ ಹಾಗೂ ಮೊಸರು ಕುಡಿಕೆ ಉತ್ಸವ ಸಮಿತಿಯ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ 2 ಗಂಟೆಗೆ ಚೆನ್ನಕೇಶವ ದೇವಸ್ಥಾನದ ಎದುರಿನಿಂದ ಅಟ್ಟಿ ಮಡಕೆ ಒಡೆಯುವ ಶೋಭಾಯಾತ್ರೆ ಆರಂಭವಾಗಲಿದ್ದು, ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ಡಾ. ಹರಪ್ರಸಾದ್ ತುದಿಯಡ್ಕ ಚಾಲನೆ ನೀಡಲಿದ್ದಾರೆ ಎಂದರು.

ಶೋಭಾಯಾತ್ರೆಯು ಚೆನ್ನಕೇಶವ ದೇವಸ್ಥಾನದಿಂದ ಎಪಿಎಂಸಿ, ಆಯುರ್ವೇದ ಕಾಲೇಜು, ಕುರುಂಜಿಭಾಗ್, ವೇದಶ್ರೀ ಕಾಂಪ್ಲೆಕ್ಸ್, ಕೆಇಬಿ ಎದುರು, ವಿವೇಕಾನಂದ ಸರ್ಕಲ್, ಜೂನಿಯರ್ ಕಾಲೇಜು ರಸ್ತೆ, ಶಾಸ್ತ್ರಿ ವೃತ್ತ, ಖಾಸಗಿ ಬಸ್ ನಿಲ್ದಾಣ ಸೇರಿದಂತೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ದೇವಸ್ಥಾನದ ಮುಂಭಾಗಕ್ಕೆ ತಲುಪಲಿದೆ. ದೇವಸ್ಥಾನದ ಮುಂಭಾಗದಲ್ಲಿ ವೀರ ಯುವಕರಿಂದ ಅಟ್ಟಿ ಮಡಕೆ ಒಡೆಯುವ ಸಾಹಸಮಯ ಪ್ರದರ್ಶನ ನಡೆಯಲಿದೆ.

ಅದೇ ದಿನ ಬೆಳಗ್ಗೆ ಚೆನ್ನಕೇಶವ ದೇವಸ್ಥಾನದ ಮುಂಭಾಗದಲ್ಲಿ ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಪ್ರಾಯೋಜಕತ್ವದಲ್ಲಿ ‘ಎಣ್ಣೆ ಕಂಬ’ ಏರುವ ಹಾಗೂ ಮಡಕೆ ಒಡೆಯುವ ಸ್ಪರ್ಧೆ ನಡೆಯಲಿದೆ.

ಸಂಜೆ 6 ಗಂಟೆಯಿಂದ ದೇವಸ್ಥಾನದ ಮುಂಭಾಗದಲ್ಲಿ ಧಾರ್ಮಿಕ ಸಭೆ ನಡೆಯಲಿದ್ದು, ಮರ್ಕಂಜ ಶ್ರೀ ಅನ್ನಪೂರ್ಣೇಶ್ವರಿ ಕ್ಷೇತ್ರದ ಧರ್ಮದರ್ಶಿ ಯೋಗಿ ರಾಜೇಶ್ ನಾಥ್ ಜೀ ದೀಪ ಪ್ರಜ್ವಲನೆ ನೆರವೇರಿಸುವರು. ಮಂಗಳೂರು ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ವಿಭಾಗ ಮುಖ್ಯಸ್ಥ ಡಾ. ಅರುಣ್ ಉಳ್ಳಾಲ್ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಜಿಲ್ಲಾ ಬಜರಂಗದಳ ಸಂಯೋಜಕ ನವೀನ್ ಮೂಡುಶೆಡ್ಡೆ, ಸಹ ಸಂಯೋಜಕ ಪ್ರವೀಣ್ ಕಲ್ಲೇಗ ಹಾಗೂ ತಾಲೂಕು ಮೊಗೇರ ಸಂಘದ ಅಧ್ಯಕ್ಷ ಕರುಣಾಕರ ಪಿ.ಆರ್. ಪಲ್ಲತ್ತಡ್ಕ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ದೈವ ನರ್ತಕ ರಾಜೇಶ್ ಪಣಿಕ್ಕರ್ ಮೇನಾಲ ಅವರನ್ನು ಸನ್ಮಾನಿಸಲಾಗುವುದು.

ಈ ಬಾರಿ ಮಹಿಳೆಯರಿಗಾಗಿ ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಮಡಕೆ ಒಡೆಯುವ ವಿಶೇಷ ಸ್ಪರ್ಧೆಯನ್ನೂ ಆಯೋಜಿಸಲಾಗಿದೆ. ಶೋಭಾಯಾತ್ರೆಯ ಪಥದಲ್ಲಿ ಗೊಂಬೆ ಕುಣಿತ, ವಯಲಿನ್ ವಾದನ, ಸಿಂಗಾರಿಮೇಳ ಹಾಗೂ ಕುಣಿತ ಭಜನಾ ತಂಡಗಳು ಭಾಗವಹಿಸಲಿವೆ ಎಂದು ಸಮಿತಿ ಕಾರ್ಯದರ್ಶಿ ವರ್ಷಿತ್ ಚೊಕ್ಕಾಡಿ ತಿಳಿಸಿದರು.

ಎಣ್ಣೆ ಕಂಬ ಸ್ಪರ್ಧೆಯ ವಿಜೇತರಿಗೆ ₹5,000 ಬಹುಮಾನ ನೀಡಲಾಗುವುದು. ಅಟ್ಟಿ ಮಡಕೆ ಒಡೆಯುವ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವ ತಂಡಕ್ಕೆ ₹17,013 ಹಾಗೂ ಶಾಶ್ವತ ಫಲಕ, ದ್ವಿತೀಯ ಸ್ಥಾನಕ್ಕೆ ₹12,013 ಹಾಗೂ ಶಾಶ್ವತ ಫಲಕ, ತೃತೀಯ ಸ್ಥಾನಕ್ಕೆ ₹9,013 ಹಾಗೂ ಶಾಶ್ವತ ಫಲಕ ನೀಡಲಾಗುವುದು. ಭಾಗವಹಿಸುವ ಎಲ್ಲಾ ತಂಡಗಳಿಗೆ ನಗದು ಬಹುಮಾನ ನೀಡಿ ಅಭಿನಂದಿಸಲಾಗುವುದು ಎಂದು ಕೋಶಾಧಿಕಾರಿ ನವಿನ್ ಎಲಿಮಲೆ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗೌರವ ಸಲಹೆಗಾರ ತೀರ್ಥಕುಮಾರ್ ಕುಂಚಡ್ಕ ಹಾಗೂ ಪ್ರಚಾರ ಪ್ರಮುಖ್ ದೇವಿಪ್ರಸಾದ್ ಅತ್ಯಾಡಿ ಉಪಸ್ಥಿತರಿದ್ದರು.

Leave a Comment

Your email address will not be published. Required fields are marked *

error: Content is protected !!
Scroll to Top