ಅರಂತೋಡು : ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿನ ಸಹ ಶಿಕ್ಷಕ ಕಿಶೋರ್ ಕುಮಾರ್ ಕೆ. ಅವರು ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ಹಾಗೂ ವಿದ್ಯಾರ್ಥಿಗಳ ಸರ್ವತೋಮುಖ ಅಭಿವೃದ್ಧಿಗೆ ಸಲ್ಲಿಸಿದ ಸುದೀರ್ಘ ಸೇವೆಯನ್ನು ಪರಿಗಣಿಸಿ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಆರಂತೋಡು ಗ್ರಾಮದ ಕಿರ್ಲಾಯ ನಿವಾಸಿಯಾಗಿರುವ ಕಿಶೋರ್ ಕುಮಾರ್ ಅವರು ಕಿರ್ಲಾಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಹಾಗೂ ಆರಂತೋಡು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. 1980ರಲ್ಲಿ ಆರಂತೋಡು ನೆಹರು ಸ್ಮಾರಕ ಪ್ರೌಢಶಾಲೆಯಲ್ಲಿ ಪ್ರೌಢ ಶಿಕ್ಷಣ ಪೂರ್ಣಗೊಳಿಸಿದರು. ಪದವಿ ಪೂರ್ವ ಶಿಕ್ಷಣದ ಬಳಿಕ ಅರಣ್ಯ ಇಲಾಖೆಯಲ್ಲಿ ವಾಚರ್ ಆಗಿ ಕೆಲಸ ನಿರ್ವಹಿಸಿದ ಅವರು ಶಿಕ್ಷಕ ವೃತ್ತಿಯ ಆಸೆಯಿಂದ ಪುನಃ ಕಾಲೇಜು ಶಿಕ್ಷಣ ಮುಂದುವರಿಸಿ ಸುಳ್ಯದ ನೆಹರು ಮೆಮೋರಿಯಲ್ ಕಾಲೇಜಿನಲ್ಲಿ ಬಿ.ಎ. ಪದವಿ ಪಡೆದರು.
ನಂತರ ಖ್ಯಾತ ರಂಗಕರ್ಮಿ ಹಾಗೂ ನಿರ್ದೇಶಕ ಧ್ರುವರಾಜ್ ದೇಶಪಾಂಡೆ ಅವರಿಂದ ಒಂದು ವರ್ಷ ರಂಗತರಬೇತಿ ಪಡೆದು ನಾಟಕಗಳಲ್ಲಿ ನಟ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡರು. ಸುಳ್ಯದ ‘ಅಭಿನಯ’ ನಾಟಕ ಸಂಸ್ಥೆಯ ಸಕ್ರಿಯ ಸದಸ್ಯರಾಗಿ ಸುಮಾರು ಹತ್ತು ವರ್ಷಗಳ ಕಾಲ ಸೇವೆ ಸಲ್ಲಿಸಿ, ಜೂಲಿಯಸ್ ಸೀಸರ್, ಕತ್ತಲೆ ದಾರಿ ದೂರ, ಮಧುಮಕ್ಕಿ, ಅಲೆಮಾರಿಗಳು, ದೃಷ್ಟಿ ಸೇರಿದಂತೆ ಹಲವು ನಾಟಕಗಳಲ್ಲಿ ಅಭಿನಯಿಸಿ ಜನಮೆಚ್ಚುಗೆ ಗಳಿಸಿದರು.
ಜಾಲ್ಲೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಬಳಿಕ ಮಂಗಳೂರಿನಲ್ಲಿ ಬಿ.ಇಡಿ. ಪದವಿ ಹಾಗೂ ಮೈಸೂರು ವಿಶ್ವವಿದ್ಯಾಲಯದಿಂದ ಹಿಂದಿ ಎಂ.ಎ. ಪದವಿ ಪಡೆದರು. ಮರ್ಕಂಜ ಸರಕಾರಿ ಪ್ರೌಢಶಾಲೆಯಲ್ಲಿ ಮೂರು ವರ್ಷ ಗೌರವ ಶಿಕ್ಷಕರಾಗಿ ಸೇವೆ ಸಲ್ಲಿಸಿದ ನಂತರ ಆರಂತೋಡು ನೆಹರು ಸ್ಮಾರಕ ಪದವಿ ಪೂರ್ವ ಕಾಲೇಜಿಗೆ ನೇಮಕಗೊಂಡರು.
ತಾವು ವಿದ್ಯಾಭ್ಯಾಸ ಮಾಡಿದ ಸಂಸ್ಥೆಯಲ್ಲೇ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಕಿಶೋರ್ ಕುಮಾರ್ ಅವರು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಗುರುತಿಸಿ ಬೆಳೆಸುವಲ್ಲಿ ವಿಶೇಷ ಆಸಕ್ತಿ ತೋರಿದ್ದಾರೆ. ಕೋಲಾಟ, ನೃತ್ಯ, ಜಾನಪದ ಗೀತೆ, ಭಾವಗೀತೆ, ಲಾವಣಿ, ಗಝಲ್, ಕವ್ವಾಲಿ ಮೊದಲಾದ ಕಲೆಗಳನ್ನು ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಸಂಸ್ಥೆಯ ಹೆಸರನ್ನು ಎತ್ತರಕ್ಕೇರಿಸಿದ್ದಾರೆ.
ಪ್ರತಿವರ್ಷ ವಿವಿಧ ನಾಟಕಗಳನ್ನು ನಿರ್ದೇಶಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅಭಿನಯ ಸಾಮರ್ಥ್ಯ ಬೆಳೆಸಿದ್ದಾರೆ. ಕೆರೆಗೆ ಹಾರ, ಹಕ್ಕಿ ಕಥೆ, ಮಾರನಾಯಕನ ದೃಷ್ಟಾಂತ, ಸಾಹೇಬರು ಬರುತ್ತಾರೆ, ಸಾಕ್ಷಿ ಕಲ್ಲು, ಮಿಸ್ ಸೇವಂತಿ, ಗೊಂಬೆಯಾಟ, ನಾಗಮಂಡಲ, ಕತ್ತಲೆ ದಾರಿ ದೂರ, ಊರುಬಂಗ, ಮಧ್ಯಮ ವ್ಯಾಯೋಗ ಹಾಗೂ ಸ್ವರಚಿತ ವಿಜ್ಞಾನ ನಾಟಕ ಬೆಳಕು ಪ್ರಮುಖವಾಗಿವೆ. ‘ಸಾಕ್ಷಿ ಕಲ್ಲು’ ನಾಟಕ ರಾಜ್ಯ ಮಟ್ಟದಲ್ಲಿ ದ್ವಿತೀಯ ಬಹುಮಾನ ಪಡೆದಿದ್ದು, ಅದೇ ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿನಿಗೆಈ ಶ್ರೇಷ್ಠ ನಟಿ ಪ್ರಶಸ್ತಿಯೂ ಲಭಿಸಿದೆ.
ಸ್ಕೌಟ್ ಶಿಕ್ಷಕರಾಗಿ ತರಬೇತಿ ಪಡೆದು ಸಂಸ್ಥೆಯಲ್ಲಿ ಸ್ಕೌಟ್ ದಳವನ್ನು ಸ್ಥಾಪಿಸಿ ಉತ್ತಮ ಸ್ಕೌಟ್ ಬ್ಯಾಂಡ್ ತಂಡವನ್ನು ರೂಪಿಸಿದ್ದಾರೆ. ತಾಲೂಕು ಹಾಗೂ ಜಿಲ್ಲೆಯ ವಿವಿಧ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳಲ್ಲಿ ಸ್ಕೌಟ್ ಬ್ಯಾಂಡ್ ಸೇವೆ ಸಲ್ಲಿಸುವ ಮೂಲಕ ಸಂಸ್ಥೆಗೆ ವಿಶೇಷ ಗೌರವ ತಂದಿದ್ದಾರೆ. ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಜಾಂಬೂರಿಗಳಲ್ಲಿಯೂ ವಿದ್ಯಾರ್ಥಿಗಳಿಗೆ ಭಾಗವಹಿಸುವ ಅವಕಾಶ ಕಲ್ಪಿಸಿದ್ದಾರೆ.
ಯುವಜನ ಮೇಳ ಹಾಗೂ ಪ್ರತಿಭಾ ಕಾರಂಜಿಗಳಲ್ಲಿ ತಾಲೂಕು, ಜಿಲ್ಲಾ, ವಿಭಾಗ ಮತ್ತು ರಾಜ್ಯ ಮಟ್ಟದಲ್ಲಿ ತೀರ್ಪುಗಾರರಾಗಿ ಹಾಗೂ ನಿರ್ವಾಹಕರಾಗಿ ಸೇವೆ ಸಲ್ಲಿಸಿರುವ ಅವರು ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಗ್ರಾಹಕ ಕ್ಲಬ್ ಚಟುವಟಿಕೆಗಳಲ್ಲೂ ಗಮನಾರ್ಹ ಸಾಧನೆ ಮಾಡಿದ್ದು, 2017 ಮತ್ತು 2018ರಲ್ಲಿ ಸತತವಾಗಿ ಬೆಸ್ಟ್ ಕ್ಲಬ್ ಹಾಗೂ ಬೆಸ್ಟ್ ಕೋ-ಆರ್ಡಿನೇಟರ್ ಪ್ರಶಸ್ತಿಗಳನ್ನು ಪಡೆದಿದ್ದಾರೆ.
ವಿದ್ಯಾರ್ಥಿಗಳಿಗೆ ಹೈನುಗಾರಿಕೆ, ಕೋಳಿ ಸಾಕಣೆ, ಕುರಿ ಸಾಕಣೆ, ಕುಂಬಾರಿಕೆ, ಜೇನು ಸಾಕಣೆ ಮೊದಲಾದ ವೃತ್ತಿಗಳ ಕುರಿತು ಮಾರ್ಗದರ್ಶನ ನೀಡಿ ವೃತ್ತಿ ಶಿಕ್ಷಣದತ್ತ ಪ್ರೇರೇಪಿಸಿದ್ದಾರೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘದ ಮೂಲಕ ಕಥೆ, ಪ್ರಬಂಧ ಹಾಗೂ ಕವಿತೆ ಬರೆಯಲು ವಿದ್ಯಾರ್ಥಿಗಳನ್ನು ಉತ್ತೇಜಿಸಿದ್ದಾರೆ. ಕಾರ್ಯಕ್ರಮ ನಿರೂಪಕರಾಗಿಯೂ ಗುರುತಿಸಿಕೊಂಡಿರುವ ಅವರು ಶಾಲೆ ಹಾಗೂ ವಿವಿಧ ಸಂಘಟನೆಗಳ 300ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಿರೂಪಿಸಿದ್ದಾರೆ.
ತರಬೇತಿದಾರರಾಗಿಯೂ ಸೇವೆ ಸಲ್ಲಿಸಿರುವ ಕಿಶೋರ್ ಕುಮಾರ್ ಅವರು ಮಾನಸಿಕ ಆರೋಗ್ಯ, ಹದಿಹರೆಯದ ಸಮಸ್ಯೆಗಳ ನಿರ್ವಹಣೆ, ಒತ್ತಡ ನಿರ್ವಹಣೆ, ನಾಯಕತ್ವ ಹಾಗೂ ಪರಿಣಾಮಕಾರಿ ಬೋಧನೆ ಮೊದಲಾದ ವಿಷಯಗಳಲ್ಲಿ ತರಬೇತಿ ನೀಡಿದ್ದಾರೆ. ಮಕ್ಕಳಿಗೆ ರಂಗ ತರಬೇತಿ ನೀಡುವುದರ ಜೊತೆಗೆ ಸಮಸ್ಯಾತ್ಮಕ ಮಕ್ಕಳಿಗೆ ಆಪ್ತ ಸಲಹೆಗಾರರಾಗಿಯೂ ಕಾರ್ಯನಿರ್ವಹಿಸಿದ್ದಾರೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಸಮಾಜ ವಿಜ್ಞಾನ ಹಾಗೂ ಹಿಂದಿ ಬೋಧಿಸುತ್ತಿರುವ ಅವರು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಸಾಧಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಶೇ.100 ಫಲಿತಾಂಶ ದಾಖಲಿಸಿರುವುದು ಅವರ ಸೇವೆಗೆ ಮತ್ತೊಂದು ಗರಿ.
31 ವರ್ಷಗಳ ಸಾರ್ಥಕ ಶಿಕ್ಷಕ ಸೇವೆ, ಶಿಕ್ಷಣದ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ವಿದ್ಯಾರ್ಥಿಗಳ ಸಮಗ್ರ ಬೆಳವಣಿಗೆಗೆ ನೀಡಿದ ಕೊಡುಗೆಗಾಗಿ ಕಿಶೋರ್ ಕುಮಾರ್ ಕೆ. ಅವರು ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಗೆ ಆಯ್ಕೆಯಾಗಿರುವುದು ಆರಂತೋಡು ಶಿಕ್ಷಣ ಸಂಸ್ಥೆಗೆ ಹೆಮ್ಮೆಯ ಸಂಗತಿಯಾಗಿದೆ.
ಕಿಶೋರ್ ಕುಮಾರ್ ಕಿರ್ಲಾಯ ಅವರಿಗೆ ಜಿಲ್ಲಾ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ




















