ಮುರುಳ್ಯ, ಅ.28: ರಕ್ತೇಶ್ವರಿ ಸಾನಿಧ್ಯವಿರುವ ಜಾಗವನ್ನು ಮುಸ್ಲಿಂ ದಫನಭೂಮಿಗಾಗಿ ವಕ್ಸ್ ಬೋರ್ಡ್‌ಗೆ ಮೀಸಲಿಡಲಾಗಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮುರುಳ್ಯದಲ್ಲಿ ಭಾರಿ ಪ್ರತಿಭಟನೆ ನಡೆಯಿತು. ಹಿಂದೂ ಹಿತರಕ್ಷಣಾ ವೇದಿಕೆಯ ನೇತೃತ್ವದಲ್ಲಿ ಮುರುಳ್ಯ ಗ್ರಾಮ ಪಂಚಾಯತ್ ಬಳಿಯ ಶ್ರೀಕೃಷ್ಣ ಮೈದಾನದಲ್ಲಿ ಮಂಗಳವಾರ ನಡೆದ ಬೃಹತ್ ಪ್ರತಿಭಟನೆಯಲ್ಲಿ ಸಾವಿರಾರು ಹಿಂದೂ ಕಾರ್ಯಕರ್ತರು ಹಾಗೂ ಮಹಿಳೆಯರು ಪಾಲ್ಗೊಂಡು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ಮೋಹನ್ ದಾಸ್ ಬಳ್ಳಾಡಿ, ಕಿಶೋರ್ ಕುಮಾರ್ ಶಿರಾಡಿ, ಸುಳ್ಯ ಬಿಜೆಪಿ ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ವಿನಯ ಕುಮಾರ್ ಕಂದಡ್ಕ, ನವೀನ್ ನೆರಿಯ, ಲೋಕಯ್ಯ ಪರವ ಮತ್ತಿತರರು, ರಕ್ತೇಶ್ವರಿ ದೇವಿಯ ದೇಗುಲ ನಿರ್ಮಾಣಕ್ಕೆ ಉದ್ದೇಶಿಸಿರುವ ಜಾಗವನ್ನು ದಫನಭೂಮಿಗಾಗಿ ಮೀಸಲಿಡುವ ನಿರ್ಧಾರದ ವಿರುದ್ಧ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ. ಖಾದರ್ ಅವರು ಜಿಲ್ಲಾಧಿಕಾರಿಗಳ ಮೇಲೆ ಒತ್ತಡ ಹೇರಿ, ಹಿಂದೂಗಳು ಆರಾಧಿಸುವ ರಕ್ತೇಶ್ವರಿ ಸಾನಿಧ್ಯವಿರುವ ಜಾಗವನ್ನು ವಕ್ಸ್ ಬೋರ್ಡ್‌ಗೆ ದಫನಭೂಮಿಯಾಗಿ ಮೀಸಲಿಡುವಂತೆ ಮಾಡಲಾಗಿದೆ ಎಂದು ಅವರು ಆರೋಪಿಸಿದರು. ಈ ಪ್ರಕ್ರಿಯೆಯಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂಬುದು ಪ್ರತಿಭಟನಾಕಾರರ ವಾದವಾಗಿದ್ದು, ನಿರ್ಧಾರದ ವಿರುದ್ಧ ಕಾನೂನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಅಧಿಕಾರಿಗಳ ಕಾರ್ಯವೈಖರಿ ಹಾಗೂ ಭ್ರಷ್ಟಾಚಾರದ ಆರೋಪಗಳ ಕುರಿತು ಮುಂದಿನ ದಿನಗಳಲ್ಲಿ ಇನ್ನಷ್ಟು ತೀವ್ರ ಸ್ವರೂಪದ ಹೋರಾಟ ನಡೆಸುವುದಾಗಿಯೂ ಹೇಳಿದರು.
ಮಾರ್ಚ್ ಅಂತ್ಯದೊಳಗೆ ಗುಡಿ ನಿರ್ಮಾಣದ ಸಂಕಲ್ಪ
ರಕ್ತೇಶ್ವರಿ ದೇವಿಯ ಸಾನಿಧ್ಯವಿರುವ ಜಾಗದಲ್ಲಿ ಮುಂದಿನ ಮಾರ್ಚ್ ಅಂತ್ಯದೊಳಗೆ ಗುಡಿ ನಿರ್ಮಿಸಿ ಪ್ರತಿಷ್ಠಾ ಕಲಶೋತ್ಸವ ನಡೆಸುವ ಸಂಕಲ್ಪವನ್ನು ಪ್ರತಿಭಟನಾ ವೇದಿಕೆಯಲ್ಲಿ ಘೋಷಿಸಲಾಯಿತು. ಈ ಸಂಕಲ್ಪ ಸಾಕಾರಗೊಳ್ಳಲು ಹಿಂದೂ ಸಮಾಜದ ಒಗ್ಗಟ್ಟು ಮತ್ತು ಸಹಕಾರ ಅತ್ಯಗತ್ಯ ಎಂದು ಮುಖಂಡರು ಕರೆ ನೀಡಿದರು.
ಗ್ರಾಮದಲ್ಲಿ ಸುಮಾರು 600 ಹಿಂದೂಗಳು ಹಾಗೂ 50 ಮುಸ್ಲಿಂ ಕುಟುಂಬಗಳು ವಾಸಿಸುತ್ತಿದ್ದು, ಗ್ರಾಮದ ಶಾಂತಿ ಮತ್ತು ಸೌಹಾರ್ದ ಕಾಪಾಡುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ಹೇಳಿದರು. ವಿವಾದಿತ ಜಾಗದ ವಿಚಾರದಲ್ಲಿ ಮುಸ್ಲಿಂ ಸಮುದಾಯದವರು ಸ್ವಯಂಪ್ರೇರಿತವಾಗಿ ತಮ್ಮ ನಿಲುವನ್ನು ಅಧಿಕಾರಿಗಳಿಗೆ ತಿಳಿಸಿ, ಶಾಂತಿ ಕಾಪಾಡಲು ಸಹಕರಿಸಬೇಕು ಎಂದು ಮನವಿ ಮಾಡಿದರು.
ತಹಶೀಲ್ದಾರ್ ಆಗಮನ ವಿಳಂಬಕ್ಕೆ ಆಕ್ರೋಶ
ಪ್ರತಿಭಟನಾ ಸಭೆಯ ವೇಳೆ ಮನವಿ ಸ್ವೀಕರಿಸಲು ತಹಶೀಲ್ದಾರ್ ಆಗಮಿಸುವುದು ವಿಳಂಬವಾದ ಹಿನ್ನೆಲೆಯಲ್ಲಿ ಪ್ರತಿಭಟನಾಕಾರರು ಅಸಮಾಧಾನ ವ್ಯಕ್ತಪಡಿಸಿ, ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದರು. ಬಳಿಕ ಚೇತನಾ ಕಿಶನ್ ಮುರುಳ್ಯ ಅವರು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನಾ ಸಭೆಯ ವೇದಿಕೆಯಲ್ಲಿ ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷೆ ಸುವರ್ಣಿನಿ, ಬೆಳ್ಳಾರೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ನಮಿತಾ ರೈ, ನಿವೃತ್ತ ಯೋಧ ಗಿರಿಧರ ಗೌಡ ಕಡೀರ ಹಾಗೂ ನಾರಾಯಣ ಕೋಡ್ಡೆ ಉಪಸ್ಥಿತರಿದ್ದರು.
ಲೋಕಸಭಾ ಸದಸ್ಯ ಕ್ಯಾ. ಬ್ರಿಜೇಶ್ ಚೌಟ, ಶಾಸಕಿ ಭಾಗೀರಥಿ ಮುರುಳ್ಯ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ನ. ಸೀತಾರಾಮ, ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಸಮಿತಿ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಮನವೊಳಿಕೆ, ಪ್ರಸನ್ನ ಮಾರ್ತ, ಸುಬೋಧ್ ಶೆಟ್ಟಿ ಮೇನಾಲ, ದಿನೇಶ್ ಮೆದು, ಚಂದ್ರ ಕೋಲ್ಟಾರ್, ಭಾರತಿ ಪುರುಷೋತ್ತಮ, ಪುಷ್ಪಾ ಮೇದಪ್ಪ ಹಾಗೂ ಶಶಿಕಲಾ ನೀರಬಿದಿರೆ ಸೇರಿದಂತೆ ಸಾವಿರಾರು ಕಾರ್ಯಕರ್ತರು ಮತ್ತು ಮಹಿಳೆಯರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ವಸಂತ ನಡುಬೈಲು ಸ್ವಾಗತಿಸಿದರು. ಅನೂಪ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಅನೂಪ್ ಬಿಳಿಮಲೆ ವಂದಿಸಿದರು.
ಮುರುಳ್ಯದಲ್ಲಿ ರಕ್ತೇಶ್ವರಿ ಸಾನಿಧ್ಯದ ಜಾಗ ವಿವಾದ: ಹಿಂದೂ ಹಿತರಕ್ಷಣಾ ವೇದಿಕೆಯಿಂದ ಬೃಹತ್ ಪ್ರತಿಭಟನೆ














