ಅರಂತೋಡು, ನ. 22: ಎಂದಿನಂತೆ ಪ್ರಯಾಣಿಕರನ್ನು ತಲುಪಿಸಿ ತನ್ನ ಪಾಡಿಗೆ ಮರಳುತ್ತಿದ್ದ ರಿಕ್ಷಾ ಚಾಲಕನ ಪಾಲಿಗೆ ಆ ಕ್ಷಣವೇ ದುರಂತವಾಗಿ ಪರಿಣಮಿಸಿತು. ಕಾರು ಮತ್ತು ರಿಕ್ಷಾ ನಡುವೆ ಸಂಭವಿಸಿದ ಭೀಕರ ಡಿಕ್ಕಿಯ ರಭಸಕ್ಕೆ ರಿಕ್ಷಾ ರಸ್ತೆಯಲ್ಲೇ ಪಲ್ಟಿಯಾಗಿ ಚಾಲಕ ಗಂಭೀರವಾಗಿ ಗಾಯಗೊಂಡ ಘಟನೆ ಪೆರಾಜೆ ಸಮೀಪ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ನ. 22ರಂದು ನಡೆದಿದೆ.
ಅಪಘಾತದಲ್ಲಿ ಗಾಯಗೊಂಡ ರಿಕ್ಷಾ ಚಾಲಕನನ್ನು ವಾಸುದೇವ ಬಾಂಜಿಗೋಡಿ ಎಂದು ಗುರುತಿಸಲಾಗಿದೆ.
ಡಿಕ್ಕಿಯ ತೀವ್ರತೆಗೆ ರಿಕ್ಷಾ ರಸ್ತೆಯಲ್ಲೇ ಪಲ್ಟಿಯಾಗಿದ್ದು, ಕಾರು ಮತ್ತು ರಿಕ್ಷಾ ಎರಡೂ ಜಖಂಗೊಂಡಿವೆ. ಅಪಘಾತದಲ್ಲಿ ರಿಕ್ಷಾ ಚಾಲಕ ವಾಸುದೇವ ಅವರ ಬೆನ್ನಿನ ಭಾಗಕ್ಕೆ ಬಲವಾದ ಪೆಟ್ಟು ಬಿದ್ದಿದೆ. ತಕ್ಷಣ ಅವರನ್ನು ಸುಳ್ಯದ ಆಸ್ಪತ್ರೆಗೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.ಕಾರು ಚಾಲಕ ಅಮಲು ಪದಾರ್ಥ ಸೇವಿಸಿದ್ದ ಎಂದು ಪತ್ಯಕ್ಷದರ್ಶಿಗಳು ದೂರಿಕೊಂಡಿದ್ದಾರೆ.
ಪ್ರತಿದಿನದ ದುಡಿಮೆಯನ್ನೇ ನಂಬಿ ಬದುಕು ಸಾಗಿಸುತ್ತಿದ್ದ ರಿಕ್ಷಾ ಚಾಲಕನಿಗೆ ಕ್ಷಣಮಾತ್ರದಲ್ಲಿ ಎದುರಾದ ಈ ಅಪಘಾತ ಕುಟುಂಬಸ್ಥರಲ್ಲಿ ಆತಂಕ ಮೂಡಿಸಿದೆ.








































