ಸುಳ್ಯ: ವಿವಿಧ ಕಾಯಿಲೆಗಳ ತಪಾಸಣೆ, ತಜ್ಞ ವೈದ್ಯರಿಂದ ಚಿಕಿತ್ಸೆ – ಸಾರ್ವಜನಿಕರಿಗೆ ಸುವರ್ಣಾವಕಾಶ
ಆಧುನಿಕ ಸುಳ್ಯದ ನಿರ್ಮಾತೃ ಡಾ. ಕುರುಂಜಿ ವೆಂಕಟ್ರಮಣ ಗೌಡರ 98ನೇ ಜಯಂತ್ಯುತ್ಸವದ ಸವಿನೆನಪಿಗಾಗಿ ನ.29ರಂದು ಬೃಹತ್ ಉಚಿತ ವೈದ್ಯಕೀಯ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ ಆಯೋಜಿಸಲಾಗಿದೆ.
ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಂಘ ಹಾಗೂ ವಿವೇಕಾನಂದ ವಿದ್ಯಾಸಂಸ್ಥೆಗಳು, ವಿನೋಬನಗರ ಅಡ್ಕಾರು ಇವರ ನೇತೃತ್ವದಲ್ಲಿ, ಕೆ.ವಿ.ಜಿ. ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ, ಕೆ.ವಿ.ಜಿ. ಆಯುರ್ವೇದ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕೆ.ವಿ.ಜಿ. ದಂತ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆಗಳ ಸಹಭಾಗಿತ್ವದಲ್ಲಿ, ವಿವಿಧ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಈ ಶಿಬಿರ ನಡೆಯಲಿದೆ.
ನ.29ರಂದು ಆದಿತ್ಯವಾರ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಅಡ್ಕಾರು ವಿನೋಬನಗರದ ವಿವೇಕಾನಂದ ವಿದ್ಯಾಸಂಸ್ಥೆಗಳ ಆವರಣದಲ್ಲಿ ಶಿಬಿರ ಜರುಗಲಿದೆ ಎಂದು ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿ ಅಧ್ಯಕ್ಷ ಎಸ್. ಸಂಶುದ್ದೀನ್ ಮತ್ತು ಚಂದ್ರ ಶೇಖರ ಪೇರಾಲ್ ಹಾಗೂ ಸಮಾಜ ಸೇವಾ ಸಂಘದ ಪದಾಧಿಕಾರಿಗಳು ತಿಳಿಸಿದರು.
ನ.21ರಂದು ಸುಳ್ಯ ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಅವರು ಶಿಬಿರದ ಕುರಿತು ಮಾಹಿತಿ ನೀಡಿದರು.
ಶಿಬಿರವನ್ನು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್‌ನ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಹಿರಿಯ ವೈದ್ಯರು ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಸಾಧಕರನ್ನು ಗೌರವಿಸಲಾಗುವುದು. ಕೆ.ವಿ.ಜಿ. ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆ, ಆಯುರ್ವೇದ ಮೆಡಿಕಲ್ ಕಾಲೇಜು ಹಾಗೂ ದಂತ ವೈದ್ಯಕೀಯ ಮಹಾವಿದ್ಯಾಲಯಗಳ ತಜ್ಞ ವೈದ್ಯರು ಶಿಬಿರದಲ್ಲಿ ಪಾಲ್ಗೊಂಡು ಸೇವೆ ಸಲ್ಲಿಸಲಿದ್ದಾರೆ.
ವಿವಿಧ ಕಾಯಿಲೆಗಳಿಗೆ ತಪಾಸಣೆ ಮತ್ತು ಚಿಕಿತ್ಸೆ
ಶಿಬಿರದಲ್ಲಿ ಶೀತ, ಜ್ವರ, ಕೆಮ್ಮು, ರಕ್ತದೊತ್ತಡ, ಮಧುಮೇಹ, ರಕ್ತಹೀನತೆ, ಉಸಿರಾಟದ ತೊಂದರೆ, ಹರ್ನಿಯಾ, ಅಪೆಂಡಿಕ್ಸ್, ಪಿತ್ತಕೋಶದ ಸಮಸ್ಯೆ, ಮೂಲವ್ಯಾಧಿ, ಕಿಡ್ನಿ ಸ್ಟೋನ್, ಮಕ್ಕಳ ಅಪೌಷ್ಟಿಕತೆ, ಕಿವಿ, ಮೂಗು, ಗಂಟಲು ಸಮಸ್ಯೆ, ಕಣ್ಣಿನ ಪೊರೆ ಹಾಗೂ ದೃಷ್ಟಿ ಸಂಬಂಧಿತ ಕಾಯಿಲೆಗಳಿಗೆ ತಪಾಸಣೆ ಮತ್ತು ಚಿಕಿತ್ಸೆ ನೀಡಲಾಗುವುದು.
ಇದರೊಂದಿಗೆ ಚರ್ಮರೋಗ, ಗರ್ಭಿಣಿಯರ ಆರೋಗ್ಯ ಸಮಸ್ಯೆಗಳು, ಮುಟ್ಟಿನ ತೊಂದರೆ, ಬಂಜೆತನ, ಸ್ತ್ರೀರೋಗ, ಎಲುಬು ಮತ್ತು ಕೀಲು ಸಂಬಂಧಿತ ಕಾಯಿಲೆಗಳು, ಶ್ವಾಸಕೋಶದ ಸಮಸ್ಯೆ, ನಿದ್ರಾಹೀನತೆ, ಸಂಧಿವಾತ, ಆಮವಾತ, ಪಕ್ಷವಾತ, ಮೊಡವೆ, ಲೈಂಗಿಕ ಸಮಸ್ಯೆಗಳು ಹಾಗೂ ಮಾನಸಿಕ ಖಿನ್ನತೆಗೆ ಸಂಬಂಧಿಸಿದ ತಪಾಸಣೆಯೂ ನಡೆಯಲಿದೆ.
ಆಯುರ್ವೇದ ವಿಭಾಗದಲ್ಲಿ ಬಾಲರೋಗ, ಮೂಲವ್ಯಾಧಿ, ಭಗಂದರ, ಫಿಸ್ತುಲ, ದೀರ್ಘಕಾಲದ ಹುಣ್ಣು, ಮೂಳೆಸವೆತ, ಕೂದಲು ಉದುರುವಿಕೆ, ತಲೆಹೊಟ್ಟು, ಮೂತ್ರಕೋಶದ ಕಲ್ಲು, ಮೂಳೆ ಮುರಿತ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ತಜ್ಞರಿಂದ ಸಲಹೆ ಮತ್ತು ಚಿಕಿತ್ಸೆ ದೊರೆಯಲಿದೆ.
ದಂತ ತಪಾಸಣೆಗೂ ಅವಕಾಶ
ದಂತ ವಿಭಾಗದಲ್ಲಿ ದಂತ ತಪಾಸಣೆ, ದಂತಕುಳಿ ತುಂಬಿಸುವುದು, ಹಲ್ಲುಗಳ ಸ್ವಚ್ಛತೆ, ಹಲ್ಲು ಕೀಳುವುದು, ಕೃತಕ ಹಲ್ಲು ಜೋಡಣೆ ಸೇರಿದಂತೆ ವಿವಿಧ ದಂತ ಚಿಕಿತ್ಸೆಗಳು ತಜ್ಞ ವೈದ್ಯರಿಂದ ಉಚಿತವಾಗಿ ನಡೆಯಲಿವೆ. ಹೆಚ್ಚಿನ ಚಿಕಿತ್ಸೆಯ ಅಗತ್ಯವಿರುವವರಿಗೆ ಮುಂದುವರಿದ ಚಿಕಿತ್ಸೆಗೆ ಹಳದಿ ಕಾರ್ಡ್ ನೀಡಲಾಗುವುದು ಎಂದು ಸಂಘಟಕರು ವಿವರಿಸಿದರು.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದುಕೊಳ್ಳುವಂತೆ ಅವರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಕೆ.ವಿ.ಜಿ. ಸುಳ್ಯ ಹಬ್ಬ ಸಮಾಜ ಸೇವಾ ಸಮಿತಿ ಉಪಾಧ್ಯಕ್ಷ ಪ್ರೊ. ಕೆ.ವಿ. ದಾಮೋದರ ಗೌಡ, ಕಾರ್ಯದರ್ಶಿ ರಂಗನಾಥ್ ಪಿ.ಎಂ., ಕೋಶಾಧಿಕಾರಿ ಚಂದ್ರಶೇಖರ ನಂಜೆ, ಶಿಬಿರ ಸಂಚಾಲಕ ರಜತ್ ಅಡ್ಕಾರ್, ಸಮಿತಿಯ ಪೂರ್ವಾಧ್ಯಕ್ಷ ಚಂದ್ರಶೇಖರ ಪೇರಾಲು, ಕಾರ್ಯಕಾರಿ ಸಮಿತಿ ಸದಸ್ಯರಾದ ರಾಜು ಪಂಡಿತ್ ಹಾಗೂ ಅಬೂಬಕರ್ ಜೆ.ಎನ್. ಅಡ್ಕಾರು ಉಪಸ್ಥಿತರಿದ್ದರು.








































