ಅರಂಬೂರು ಘಟಕ ಗೌಡ ಸಮಿತಿ ವತಿಯಿಂದ ‘ಆಟಿಲಿ ಒಂದು ದಿನ’ ಕಾರ್ಯಕ್ರಮ

ಸುಳ್ಯ: ಆಟಿ ತಿಂಗಳ ಸಾಂಸ್ಕೃತಿಕ ಮಹತ್ವವನ್ನು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಅರಂಬೂರು ಘಟಕ ಗೌಡ ಸಮಿತಿ ಹಮ್ಮಿಕೊಂಡಿದ್ದ “ಆಟಿಲಿ ಒಂದು ದಿನ” ಕಾರ್ಯಕ್ರಮವು ಅರಂಬೂರು ಶ್ರೀ ಮೂಕಾಂಬಿಕ ಭಜನಾ ಮಂದಿರದ ಸಭಾಂಗಣದಲ್ಲಿ ಅತ್ಯಂತ ಸಂಭ್ರಮ, ಸಡಗರ ಹಾಗೂ ಸಾಂಪ್ರದಾಯಿಕ ವೈಭವದೊಂದಿಗೆ ನಡೆಯಿತು.



















ಕಾರ್ಯಕ್ರಮವನ್ನು ನಿವೃತ್ತ ಅಧ್ಯಾಪಕರರಾದ ಶ್ರೀ ಕೆ. ಕೆ. ಶಿವಪ್ಪ ಮಾಂಬುಳಿಯವರು ಉದ್ಘಾಟಿಸಿ ಮಾತನಾಡಿ, “ನಮ್ಮ ಸಂಸ್ಕೃತಿ ಮತ್ತು ಸಂಪ್ರದಾಯಗಳು ನಮ್ಮ ಸಮಾಜದ ಜೀವಾಳವಾಗಿವೆ. ಆಟಿ ತಿಂಗಳ ಆಚರಣೆಗಳು ಪ್ರಕೃತಿ, ಆರೋಗ್ಯ ಹಾಗೂ ಕುಟುಂಬದ ಮೌಲ್ಯಗಳನ್ನು ಸಾರುತ್ತವೆ. ಇಂತಹ ಕಾರ್ಯಕ್ರಮಗಳು ಯುವಜನರಲ್ಲಿ ನಮ್ಮ ಪರಂಪರೆಯ ಬಗ್ಗೆ ಹೆಮ್ಮೆ ಮೂಡಿಸುತ್ತವೆ” ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ, ಅರಂಬೂರು ಗೌಡ ಘಟಕದ ಮಹಿಳಾ ಘಟಕದ ಅಧ್ಯಕ್ಷರಾದ ಡಾ. ಅನುರಾಧಾ ಕುರುಂಜಿಯವರು, ಮಾತನಾಡಿ, “ಸಂಘಟನೆಗಳು ಪೈಪೋಟಿಗಾಗಿ ಅಲ್ಲ, ನಮ್ಮ ಸಂಸ್ಕೃತಿಯನ್ನು ಉಳಿಸಲು. ನಾಯಕತ್ವ ಗುಣವನ್ನು ಬೆಳೆಸಲು. ಆಟಿ ಎನ್ನುವಂತದು ಒಂದು ಹಬ್ಬ ಮಾತ್ರವಲ್ಲ, ಅದು ನಮ್ಮ ಬದುಕಿನ ತತ್ವವನ್ನು ಪ್ರತಿಬಿಂಬಿಸುವ ಸಂಸ್ಕೃತಿ. ಹಿರಿಯರ ಸಂಪ್ರದಾಯ, ಆಹಾರ ಪದ್ಧತಿ, ಜನಪದ ಕಲೆ ಮತ್ತು ಪರಸ್ಪರ ಸಹಕಾರದ ಮೌಲ್ಯಗಳನ್ನು ಉಳಿಸಿ ಬೆಳೆಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ” ಎಂದು ಹೇಳಿದರು .

ಮುಖ್ಯ ಅತಿಥಿಗಳಾಗಿ ಗೌಡ ಯುವ ಸೇವ ಸಂಘದ ಉಪಾಧ್ಯಕ್ಷ ಯತಿರಾಜ ಭೂತಕಲ್ಲು, ಆಲೆಟ್ಟಿ ಗ್ರಾಮ ಮಹಿಳಾ ಗೌಡ ಸಮಿತಿ ಅಧ್ಯಕ್ಷೆ ಶ್ರೀಮತಿ ಗೀತಾ ಕೋಲ್ಚಾರು, ಗೌಡ ಯುವ ಸೇವ ಸಂಘದ ನಿರ್ದೇಶಕ ಪುರುಷೋತ್ತಮ ಕೋಲ್ಚಾರು, ಗೌಡ ಘಟಕದ ಉಪಾಧ್ಯಕ್ಷರಾದ ಕೃಷ್ಣಪ್ಪ ಕೆದಂಬಾಡಿ, ಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ಪರಮೇಶ್ವರ ನೆಡ್ಚಿಲ್ ಪುರುಷ ಘಟಕದ ಅಧ್ಯಕ್ಷ ಮನೋಹರ ಅರಂಬೂರು ಉಪಸ್ಥಿತರಿದ್ದರು. ಸ್ಪರ್ಧಾ ಕಾರ್ಯಕ್ರಮವನ್ನು ಪದ್ಮಯ್ಯ ಪಡ್ಪು ಅವರು ತೆಂಗಿನ ಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು.

ಅರಂಬೂರು ಘಟಕ ಗೌಡ ಸಮಿತಿಯ ಮಹಿಳಾ ಘಟಕದ ಸದಸ್ಯೆ ಸುಮನ ನೆಡ್ಚಿಲ್ ಪ್ರಾರ್ಥಿಸಿದ ಕಾರ್ಯಕ್ರಮದಲ್ಲಿ ಪುರುಷ ಘಟಕದ ಜತೆ ಕಾರ್ಯದರ್ಶಿ ತೇಜಸ್ ಚಿದ್ಗಲ್ ಸ್ವಾಗತಿಸಿ, ಮಹಿಳಾ ಘಟಕದ ಕಾರ್ಯದರ್ಶಿ ವೇದಾವತಿ ನೆಡ್ಚಿಲ್ ವಂದಿಸಿದರು. ಪುರುಷ ಘಟಕದ ಕಾರ್ಯದರ್ಶಿ ಗಂಗಾಧರ ನೆಡ್ಚಿಲ್ ವರದಿ ವಾಚಿಸಿ, ಸದಸ್ಯ ಅಶೋಕ ಪೀಚೆ ನಿರೂಪಿಸಿದರು.

ಕಾರ್ಯಕ್ರಮದ ಅಂಗವಾಗಿ ಆಲೆಟ್ಟಿ ಗ್ರಾಮದ ಗೌಡ ಬಾಂಧವರಿಗೆ ಹಗ್ಗ ಜಗ್ಗಾಟ ಮತ್ತು ಶೋಭಾನೆ ಸ್ಪರ್ಧೆ ಹಾಗೂ ಅರಂಬೂರು ವಲಯದ ಗೌಡ ಬಾಂಧವರಿಗೆ ಆಟಿ ತಿಂಗಳ ವಿಶೇಷ ಖಾದ್ಯಗಳ ಆಹಾರ ಮೇಳ, ಚೆನ್ನೆಮಣೆ, ಕೇರಂ ಮೊದಲಾದ ಸ್ಪರ್ಧೆಗಳನ್ನು ಆಯೋಜಿಸಿದ್ದು, ಮಕ್ಕಳು ಮತ್ತು ಸಾರ್ವಜನಿಕರು ಉತ್ಸಾಹದಿಂದ ಭಾಗವಹಿಸಿದರು.

ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು
ಮನೋಹರ ಅರಂಬೂರು ವಹಿಸಿ ಮಾತನಾಡುತ್ತಾ, ಸಂಘಟನೆಗಳಲ್ಲಿ ಯುವಜನತೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಪಿಸುವಂತಾಗಬೇಕು ಎಂದು ಕರೆ ನೀಡಿದರು.
ಮುಖ್ಯ ಅತಿಥಿಗಳಾಗಿ ಆಲೆಟ್ಟಿ ಗ್ರಾಮ ಗೌಡ ಸಮಿತಿಯ ಅಧ್ಯಕ್ಷ ಸತೀಷ್ ಕೊಯಿಂಗಾಜೆ. ಕೆಲಿಜಿ ಐಟಿಐ ಭಾಗಮಂಡಲದ ಪ್ರಾಂಶುಪಾಲರಾದ ಶ್ರೀಕಾಂತ್ ಕುಡೆಕಲ್ಲು, SKRDP ಅರಂಬೂರು ಒಕ್ಕೂಟದ ಅಧ್ಯಕ್ಷ ಚಂದ್ರಶೇಖರ ನೆಡ್ಚಿಲ್, ಗೌಡ ಯುವ ಸೇವಾ ಸಂಘದ ನಿರ್ದೇಶಕ ಜಗದೀಶ್ ಸರಳಿಕುಂಜ, ಮಹಿಳಾ ಘಟಕದ ಗೌರವ ಸಲಹೆಗಾರರಾದ ಉಷಾ ಚಂದ್ರಶೇಖರ ಪಡ್ಪು, ಮಹಿಳಾ ಘಟಕದ ಅಧ್ಯಕ್ಷೆ ಡಾ. ಅನುರಾಧಾ ಕುರುಂಜಿ ಮೊದಲಾದವರು ಭಾಗವಹಿಸಿದ್ದರು. ಸಮಾರಂಭದಲ್ಲಿ ನಾಡೋಜ ಡಾ. ಕಯ್ಯಾರ ಸದ್ಭಾವನ ರಾಷ್ಟ್ರೀಯ ಪ್ರಶಸ್ತಿ ಪಡೆದ ಡಾ. ಅನುರಾಧಾ ಕುರುಂಜಿಯವರನ್ನು ಸನ್ಮಾನಿಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸುವುದರೊಂದಿಗೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಮಾಜ ಬಾಂಧವರಲ್ಲಿ ಓರ್ವರನ್ನು ಹಾಗೂ ಆಹಾರ ಮೇಳದಲ್ಲಿ ಭಾಗವಹಿಸಿದವರಲ್ಲಿ ಓರ್ವರನ್ನು ಅದೃಷ್ಟಶಾಲಿಯಾಗಿ ಆಯ್ಕೆ ಮಾಡಲಾಯಿತು. ಮಹಿಳಾ ಘಟಕದ ಸದಸ್ಯೆ ಕವಿತಾ ಕುಡೆಕಲ್ಲು ಸ್ವಾಗತಿಸಿ, ಉಷಾ ಪಾಲಡ್ಕ ಸನ್ಮಾನಿತರನ್ನು ಪರಿಚಯಿಸಿ, ತೇಜಸ್ ಚಿದ್ಗಲ್, ಚಂದ್ರಾವತಿ ಬದಿಕಾನ ಬಹುಮಾನಿತರ ಪಟ್ಟಿ ವಾಚಿಸಿ, ಅಶೋಕ ಪೀಚೆ ವಂದಿಸಿದರು. ಮಹಿಳಾ ಘಟಕದ ಉಪಾಧ್ಯಕ್ಷೆ ರಾಜೀವಿ ಪಾಲಡ್ಕ ನಿರೂಪಿಸಿದರು.

ಬೆಳಿಗ್ಗೆಯಿಂದ ಸಂಜೆವರೆಗೆ ನಡೆದ ಕಾರ್ಯಕ್ರಮದಲ್ಲಿ ಸಮಾಜದ ಹಿರಿಯರು, ಮಹಿಳೆಯರು, ಯುವಕರು ಹಾಗೂ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಆಟಿ ಹಬ್ಬದ ವಿಶೇಷತೆಯನ್ನು
ಸಂಭ್ರಮಿಸಿದರು. ದಂಪತಿಗಳಿಗೆ ಹಮ್ಮಿಕೊಂಡ ಆದರ್ಶ ದಂಪತಿ ಕಾರ್ಯಕ್ರಮ ನೆರೆದವರ ಗಮನ ಸೆಳೆಯಿತು.

Leave a Comment

Your email address will not be published. Required fields are marked *

error: Content is protected !!
Scroll to Top