ನಾಲ್ಕೂರು ಗ್ರಾಮಸ್ಥರಿಂದ ಕಸ್ತೂರಿರಂಗನ್ ವರದಿ ವಿರುದ್ಧ ಪ್ರತಿಭಟನೆ

ಗುತ್ತಿಗಾರು : ಕಸ್ತೂರಿರಂಗನ್ ವರದಿ ಹಾಗೂ 7ನೇ ಕರಡು ಅಧಿಸೂಚನೆಯಡಿ ಪರಿಸರ ಸೂಕ್ಷ್ಮ ವಲಯ ಘೋಷಣೆಯ ವಿರುದ್ಧ ನಾಲ್ಕೂರು ಗ್ರಾಮದ ರೈತರು ಹಾಗೂ ಗ್ರಾಮಸ್ಥರು ಗುತ್ತಿಗಾರು ಗ್ರಾಮ ಪಂಚಾಯತ್ ಕಚೇರಿ ಎದುರು ಪ್ರತಿಭಟನೆ ನಡೆಸಿ, ಪಂಚಾಯತ್‌ಗೆ ಆಕ್ಷೇಪಣಾ ಪತ್ರ ಸಲ್ಲಿಸಿದರು.
ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಜಿಲ್ಲಾ ಸಂಚಾಲಕರಾದ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ನಡೆದ ಹೋರಾಟವು ಕಾನೂನುಬದ್ಧ ಹಾಗೂ ಪ್ರಜಾಪ್ರಭುತ್ವದ ಮಾರ್ಗದಲ್ಲಿ ಮುಂದುವರಿಯಲಿದೆ ಎಂದು ತಿಳಿಸಲಾಯಿತು. ಮಲೆನಾಡಿನಲ್ಲಿ ಹೆಚ್ಚುತ್ತಿರುವ ಆನೆ ದಾಳಿ ಹಾಗೂ ಕಾಡುಪ್ರಾಣಿಗಳ ಹಾವಳಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯಲಾಯಿತು.
ಕಾರ್ಯಕ್ರಮದಲ್ಲಿ ಚಂದ್ರಶೇಖರ್ ಬಾಳುಗೋಡು ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಕಸ್ತೂರಿರಂಗನ್ ವರದಿ ಹಾಗೂ ಪರಿಸರ ಸೂಕ್ಷ್ಮ ವಲಯ ಘೋಷಣೆಯಿಂದ ಕೃಷಿಕರು, ಭೂಮಾಲೀಕರು ಹಾಗೂ ಗ್ರಾಮಸ್ಥರ ಮೇಲೆ ಉಂಟಾಗಬಹುದಾದ ಪರಿಣಾಮಗಳ ಕುರಿತು ವಿವರಿಸಿದರು.
ಜನರ ಹಕ್ಕುಗಳು ಮತ್ತು ರೈತರ ಹಿತಾಸಕ್ತಿಗಳ ರಕ್ಷಣೆಗೆ ಜಾತಿ–ಪಕ್ಷ ಭೇದವಿಲ್ಲದೆ ಕಾನೂನಿನ ಚೌಕಟ್ಟಿನಲ್ಲಿ ಹಾಗೂ ಪ್ರಜಾಪ್ರಭುತ್ವದ ರೀತಿಯಲ್ಲಿ ಹೋರಾಟ ಮುಂದುವರಿಸಲಾಗುವುದು ಎಂದು ಕಿಶೋರ್ ಶಿರಾಡಿ ಹೇಳಿದರು.
ಕಾರ್ಯಕ್ರಮದಲ್ಲಿ ಲೋಕೇಶ್ ಪಿರನಮನೆ ಅವರು ಸ್ವಾಗತಿಸಿ ಲೋಕೇಶ್ ಕುಕ್ಕುಜೆ ಧನ್ಯವಾದ ತಿಳಿಸಿದರು.
ಈ ಸಂದರ್ಭದಲ್ಲಿ ನಾಲ್ಕೂರು ಗ್ರಾಮದ ರೈತರು, ಗ್ರಾಮಸ್ಥರು ಹಾಗೂ ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ಕಾರ್ಯಕರ್ತರು ಉಪಸ್ಥಿತರಿದ್ದರು.

































Leave a Comment

Your email address will not be published. Required fields are marked *

error: Content is protected !!
Scroll to Top